ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಹಣಕಾಸು ಸಾಕ್ಷರತೆ ಅಭಿಯಾನದಲ್ಲಿ ಶಾಖೆ ವ್ಯವಸ್ಥಾಪಕ ಜಿ.ಮಧುಸೂದನ್ ಮಾತನಾಡಿದರು. 
ಮೈಸೂರು

ಬ್ಯಾಂಕಿನ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ

ಬೆಟ್ಟದಪುರ: ಗ್ರಾಮೀಣ ಬ್ಯಾಂಕಿನಲ್ಲಿ ಸಿಗುವಂತಹ ಎಲ್ಲ ಸವಲತ್ತುಗಳನ್ನು ಪ್ರತಿಯೊಬ್ಬರೂ ಸದುಪಯೋಗ ಮಾಡಿಕೊಳ್ಳಿ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಪ್ಪರದಹಳ್ಳಿ ಶಾಖೆ ವ್ಯವಸ್ಥಾಪಕ ಜಿ.ಮಧುಸೂದನ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಹಣಕಾಸು ಸಾಕ್ಷರತೆ ಅಭಿಯಾನದಲ್ಲಿ ಮಾತನಾಡಿದ ಅವರು, ಕಷ್ಟದಲ್ಲಿ ಇರುವಂತ ಕುಟುಂಬಗಳಿಗೆ ಕೊನೆಯಲ್ಲಿ ಆರ್ಥಿಕವಾಗಿ ಸಹಾಯ ಮಾಡುವುದು ವಿಮೆ ಯೋಜನೆಗಳು ಮಾತ್ರ. ಹಾಗಾಗಿ ಪ್ರತಿಯೊಬ್ಬರೂ ವಿಮೆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜೀವನ್ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ವಿಮೆ ಸೌಲಭ್ಯಗಳು ಹಾಗೂ ಅಟಲ್ ಪಿಂಚಣಿ ಯೋಜನೆ ಸೇರಿದಂತೆ ಹಲವಾರು ಸೌಲಭ್ಯಗಳಿವೆ. ಇವುಗಳ ನೋಂದಣಿಗಾಗಿ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ತಮ್ಮ ಖಾತೆಗಳಿಗೆ ಇತ್ತೀಚಿನ ವಿಳಾಸ ದೃಢೀಕರಣ ಪತ್ರ, ಗುರುತಿನ ಚೀಟಿ, ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳು ನೋಂದಣಿ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಹಾಗಾಗಿ ಈ ಹಿನ್ನೆಲೆಯಲ್ಲಿ ತಕ್ಷಣ ತಮ್ಮ ಆಧಾರ್ ಸಂಖ್ಯೆ, ಪ್ಯಾನ್‌ಕಾರ್ಡ್ ಇನ್ನಿತರ ದಾಖಲಾತಿಗಳನ್ನು ತೆಗೆದುಕೊಂಡು ಶಾಖೆಗೆ ಭೇಟಿ ನೀಡಿ, ನೋಂದಣಿ ಮಾಡಿಸಿಕೊಂಡು, ರಿಕೆವೈಸಿ, ಸಿಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಪಿ ಧನಂಜಯ್, ಬಿಲ್ ಕಲೆಕ್ಟರ್ ನಂಜೇಗೌಡ, ಕ್ಲರ್ಕ್ ಕಿರಣ್, ಸ್ಥಳೀಯರಾದ ಮಹದೇವ್, ರವಿ, ಮೀನಾಕ್ಷಿ ಇದ್ದರು.