ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ದೇಶದ ಪ್ರಮುಖ ನಿವೃತ್ತಿ ವೇತನ ಯೋಜನೆಗಳು ಮತ್ತು ನಾಗರಿಕರ ಆರ್ಥಿಕ ಭದ್ರತೆ ಕುರಿತ ಚರ್ಚೆ ಕಾರ್ಯಕ್ರಮವನ್ನು ಶ್ರೀನಾಥ್ ಜೋಷಿ ಉದ್ಘಾಟಿಸಿದರು. ಅನಂದ ನಾಯಕ್, ಪ್ರವೇಶ್ ಕುಮಾರ್, ಶಾಂತವೀರ್, ಕೃಷ್ಣಮೂರ್ತಿ ಇದ್ದರು.
- ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಶ್ರೀನಾಥ್ ಜೋಷಿ ಸಲಹೆ
ಅಟಲ್ ಪಿಂಚಣಿ ಯೋಜನೆಗೆ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲಕರವಾಗಿರುವ ಯೋಜನೆಗಳ ಬಗ್ಗೆ ಬ್ಯಾಂಕ್‌ಗಳು ನೀಡುವ ಮಾಹಿತಿಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸ್ಟೇಟ್ ಲೆವಲ್ ಬ್ಯಾಂಕರ್ಸ್ ಕಮಿಟಿ (ಎಸ್‌ಎಲ್‌ಬಿಸಿ) ಸಂಯೋಜಕರೂ ಆಗಿರುವ ಕೆನರಾ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಶ್ರೀನಾಥ್ ಜೋಷಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್, ನಿವೃತ್ತಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಬುಧವಾರ ಆಯೋಜಿಸಿದ್ದ ದೇಶದ ಪ್ರಮುಖ ನಿವೃತ್ತಿ ವೇತನ ಯೋಜನೆಗಳು ಮತ್ತು ನಾಗರಿಕರ ಆರ್ಥಿಕ ಭದ್ರತೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಟಲ್ ಪಿಂಚಣಿ ಯೋಜನೆಗೆ ಯಾರು ಅರ್ಹರು, ಪಿಂಚಣಿಯನ್ನು ಹೇಗೆ ಪಡೆಯಬಹುದು, ಅದರ ಪ್ರಯೋಜನಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿ ನೀಡಬೇಕು ಎಂದರು.
ದೇಶಾದ್ಯಂತ 15 ಬ್ಯಾಂಕ್‌ಗಳು ಅಭಿಯಾನಗಳಲ್ಲಿ ನಿಗದಿತ ಗುರಿಯನ್ನು ಸಾಧಿಸಿವೆ. ಕರ್ನಾಟಕವು ಈ ವಿಷಯದಲ್ಲಿ ಪ್ರಮುಖ ಸ್ಥಾನದಲ್ಲಿದೆ. ಮಾರ್ಚ್‌ನಲ್ಲಿ ಕೆಲವು ಜಿಲ್ಲೆಗಳು ಅತ್ಯುತ್ತಮ ಸಾಧನೆ ಮಾಡಿವೆ. ಕೇಂದ್ರ ಸರ್ಕಾರದ
ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿ ತಿಳಿದರೆ ಗ್ರಾಹಕರಿಗೆ ಲಾಭ ಸಿಗಲಿದೆ ಎಂದರು.
ಪಿಂಚಣಿ ಯೋಜನೆಗಳಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. ನಿವೃತ್ತಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕದ ಇತರ ಸಂಸ್ಥೆಗಳಿಂದ ಪಡೆದ ಮಾಹಿತಿಯ ಪ್ರಕಾರ ಇನ್ನೂ ಕೆಲವು ಕಡೆ ಸಾಧನೆ ಯಾಗಬೇಕಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎರಡು ತಿಂಗಳಲ್ಲಿ, ಸುಮಾರು 20 ಲಕ್ಷ ನೋಂದಣಿ ಗುರಿಯ ಪೈಕಿ 7.84 ಲಕ್ಷ ಚಂದಾದಾರರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‌ಎಲ್‌ಬಿಸಿನ ವಿಭಾಗೀಯ ವ್ಯವಸ್ಥಾಪಕ ಅನಂದ ನಾಯಕ್, ಪಿಎಫ್‌ಆರ್‌ಡಿಎ ಸಿಜಿಎಂ ಪ್ರವೇಶ್ ಕುಮಾರ್, ನಬಾರ್ಡ್ ಎಜಿಎಂ ಶಾಂತವೀರ್ ಮತ್ತಿತರರು ಇದ್ದರು.