21.ಥಿಠಿ.01: ಪಿರಿಯಾಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತಾಲೂಕು ಆಡಳಿತಾಧಿಕಾರಿ ಆರ್.ಟಿ. ಕಿರುಬನಂತನ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ತಾ.ಪಂ.ಇಒ ಡಿ.ಬಿ.ಸುನೀಲ್ ಕುಮಾರ್, ವಸಂತ ಲಕ್ಷ್ಮೀ, ರಂಗನಾಥ್ ಇತರರಿದ್ದರು. 
ಮೈಸೂರು

ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ದುರಸ್ತಿಗೆ ಕ್ರಮವಹಿಸಿ

ಪ್ರಮುಖ ಮುಖ್ಯಾಂಶಗಳು

  • ತಾ.ಪಂ. ಇಒ ಡಿ.ಬಿ.ಸುನೀಲ್ ಕುಮಾರ್ ಸೂಚನೆ
ಪಿರಿಯಾಪಟ್ಟಣ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ದುರಸ್ತಿಗೆ ಕೂಡಲೇ ಕ್ರಮವಹಿಸಿ ಎಂದು ತಾ.ಪಂ.ಇಒ ಡಿ.ಬಿ.ಸುನೀಲ್ ಕುಮಾರ್ ತಿಳಿಸಿದರು.
ಐಎಎಸ್ ಅಧಿಕಾರಿ ಹಾಗೂ ತಾಲೂಕು ಆಡಳಿತಾಧಿಕಾರಿ ಆರ್.ಟಿ.ಕಿರುಬನಂತನ್ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದರು.
ಗ್ರಾಮೀಣ ಪ್ರದೇಶದ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಗಳಲ್ಲಿ ದುರಸ್ತಿಯಾಗಬೇಕಿರುವ ಶೌಚಗೃಹಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ರಿಪೇರಿ ಮಾಡಬಹುದಾಗಿದ್ದು, ಈ ಬಗ್ಗೆ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸುವಂತೆ ತಿಳಿಸಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಒಟ್ಟು 294 ಶಾಲೆಗಳ 14212 ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲು ಮತ್ತು ರಾಗಿ ಮಾಲ್ಟ್ ವಿತರಿಸಲಾಗುತ್ತಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ನೀಗಿಸುವ ನಿಟ್ಟಿನಲ್ಲಿ ಮಧ್ಯಾಹ್ನದ ಊಟದ ಜತೆಗೆ ಮೊಟ್ಟೆ ನೀಡಲಾಗುತ್ತಿದೆ, ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ನೀಡಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕಿನ 11 ಸರ್ಕಾರಿ ಶಾಲೆಗಳಲ್ಲಿ ಭೋಜನಾಲಯಗಳನ್ನು ನಿರ್ಮಿಸಲಾಗಿದ್ದು ಇದು ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಾಗಿದೆ ಎಂದರು. ಶಿಥಿಲಾವಸ್ಥೆಯಲ್ಲಿರುವ ಅಡಿಗೆ ಮನೆಗಳನ್ನು ದುರಸ್ತಿಪಡಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಪ್ರಸಾದ್ ಮಾತನಾಡಿ, ತಂಬಾಕಿಗೆ ಪರ್ಯಾಯ ಬೆಳೆಯುವ ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಂಗಾಂಶ ಬಾಳೆ, ತಾಳೆ ಬೆಳೆಗಳಿಗೆ ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದರು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳುವ ರೈತರಿಗೆ 5 ಲಕ್ಷ ರೂ ವರೆಗೆ ಸರ್ಕಾರದಿಂದ ಸಹಾಯಧನ ದೊರಕಲಿದೆ ಎಂದರು
.
ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಮಾತನಾಡಿ, ತಾಲೂಕಿನಲ್ಲಿ 284 ಸರ್ಕಾರಿ ಶಾಲೆಗಳು, ಮತ್ತು 48 ಅನುದಾನಿತ ಹಾಗೂ ಅನುದಾನರಹಿತ ಸೇರಿದಂತೆ ಒಟ್ಟು 332 ಶಾಲೆಗಳಿದ್ದು, ಒಂದರಿಂದ ಹತ್ತನೇ ತರಗತಿವರೆಗೆ ಒಟ್ಟು 28064 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪ್ರಸಕ್ತ ಸಾಲಿನಲ್ಲಿ 2960 ವಿದ್ಯಾರ್ಥಿಗಳು ನೋಂದಣಿಯಾಗಿದ್ದು ಈ ವರ್ಷ 3 ಪ್ರಿಪರೇಟರಿ ಪರೀಕ್ಷೆಗಳು ನಡೆಯಲಿದ್ದು ಮಾ.18 ರಿಂದ ಅಂತಿಮ ಪರೀಕ್ಷೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಇಲಾಖೆ, ಆರೋಗ್ಯ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.
ತಾಲೂಕು ಆಡಳಿತಾಧಿಕಾರಿ ಆರ್.ಟಿ.ಕಿರುಬನಂತನ್ ಮಾತನಾಡಿ, ಸರ್ಕಾರದ ಯೋಜನೆಗಳು ಯಾವುದೇ ರೀತಿಯಲ್ಲಿ ಲೋಪವಾಗದಂತೆ ಅನುಷ್ಠಾನಗೊಳಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕಿ ವಸಂತ ಲಕ್ಷ್ಮೀ, ನರೇಗಾ ಯೋಜನೆಯ ಮೇಲ್ವಿಚಾರಕ ರಂಗನಾಥ್ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.