ಜಿ.ಲಕ್ಷ್ಮೀಕಾಂತರೆಡ್ಡಿ 
ಮೈಸೂರು

ಬ್ಲ್ಯಾಕ್ ಸ್ಪಾಟ್ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ: ಡಿಸಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಅಪಘಾತಕ್ಕೆ ನಿಖರ ಕಾರಣ ಪಟ್ಟಿ ಮಾಡಿಕೊಂಡು ಸರಿಪಡಿಸಲು ಕ್ರಮ ಕೈಗೊಳ್ಳಬೇಕು
  • ಸೂಚನಾ ಫಲಕ ಅಳವಡಿಕೆ ಸೇರಿದಂತೆ ಸಣ್ಣ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ರಸ್ತೆ ಅಪಘಾತಗಳನ್ನು ತಡೆಯಬಹುದಾಗಿದೆ
ಮೈಸೂರು:ಅಪಘಾತಗಳು ಹೆಚ್ಚಾಗಿ ಸಂಭವಿಸುವ 120 ಬ್ಲ್ಯಾಕ್ ಸ್ಪಾಟ್‌ಗಳನ್ನು ರಸ್ತೆ ಸುರಕ್ಷತಾ ಸಮಿತಿಯಿಂದ ಪಟ್ಟಿ ಮಾಡಲಾಗಿದೆ. ಈ ಸ್ಥಳಗಳಲ್ಲಿ ರಸ್ತೆ ಅಭಿವೃದ್ಧಿಪಡಿಸಿ ಅಪಘಾತ ತಡೆಗಟ್ಟುವ ರೀತಿಯಲ್ಲಿ ಯೋಜನೆ ರೂಪಿಸಲು ಕ್ರಮವಹಿಸಲು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಸ್ತೆ ಅಪಘಾತಗಳಲ್ಲಿ ಸಾವು ಸಂಭವಿಸುವ ರಸ್ತೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಅಪಘಾತಕ್ಕೆ ನಿಖರ ಕಾರಣ ಪಟ್ಟಿ ಮಾಡಿಕೊಂಡು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
120 ಬ್ಲ್ಯಾಕ್ ಸ್ಪಾಟ್ ರಸ್ತೆಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಹೆಚ್ಚಿನ ರಸ್ತೆಗಳು ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೇರಿದ್ದು ರಸ್ತೆ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಅನುದಾನ ಕೋರಿ ಮನವಿ ಸಲ್ಲಿಸಿ. ತಮ್ಮ ಇಲಾಖೆಯಲ್ಲಿ ಲಭ್ಯ ಅನುದಾನದ ನಿಯಮಾನುಸಾರ ಸಾಧ್ಯವಾದಲ್ಲಿ ಸದರಿ ಕಾಮಗಾರಿಗಳನ್ನು ಸೇರಿಸಿಕೊಳ್ಳಿ. ಮೈಸೂರು ನಗರ ಪ್ರದೇಶದಲ್ಲೂ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಪರಿಶೀಲನೆ ನಡೆಸಿ ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಕೆಲವು ರಸ್ತೆಗಳಲ್ಲಿ ಸೂಚನಾ ಫಲಕ ಅಳವಡಿಕೆ ಸೇರಿದಂತೆ ಸಣ್ಣ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ರಸ್ತೆ ಅಪಘಾತಗಳನ್ನು ತಡೆಯಬಹುದಾಗಿದೆ. ಈ ಬಗ್ಗೆ ಹೆಚ್ಚಿನ ನಿಗಾವಹಿಸಿ. ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಪ್ರಕರಣ ಇದ್ದಲ್ಲಿ ತಪ್ಪದೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ. ರಿಂಗ್‌ರೋಡ್‌ಗಳಲ್ಲಿ ವಾಹನಗಳ ಸಂಚಾರಕ್ಕಾಗಿ ಅನಧಿಕೃತವಾಗಿ ಸಣ್ಣ ತೆರವು ಮಾಡಿಕೊಂಡಿದ್ದಲ್ಲಿ ಅವುಗಳನ್ನು ಸರಿಪಡಿಸಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಶಿವಶಂಕರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಪದ್ಮನಾಭ, ಮೈಸೂರು ಮಹಾನಗರ ಪಾಲಿಕೆ ಅಧೀಕ್ಷಕ ಇಂಜಿನಿಯರ್ ಸಿ.ಎಸ್.ಮಂಜು, ಸೈಟ್ ಇಂಜಿನಿಯರ್ ಬಿ.ಅರುಣ್, ಸಿದ್ಧಾರ್ಥನಗರ ಸಂಚಾರ ಪೊಲೀಸ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಶಿವಪ್ರಸಾದ್ ರಾವ್, ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವಿ.ಡಿ.ಮಮತಾ ಇತರರು ಇದ್ದರು.