ತಿ.ನರಸೀಪುರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಮಹಾಸಭಾ ನವೀಕೃತ ಸಭಾ ಭವನ ಉದ್ಘಾಟನೆ ಸಮಾರಂಭ ಹಾಗೂ ಧಾರ್ಮಿಕ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಶ್ರೀಶಿವಸಿದ್ದೇಶ್ವರ ಸ್ವಾಮಿಜಿ , ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಇತರರು ಇದ್ದರು.
ತಿ.ನರಸೀಪುರ: ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಹುನ್ನಾರ ನಡೆಯುತ್ತಿದ್ದು, ಸಮಾಜದವರು ಒಗ್ಗೂಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ವಿವೇಕಾನಂದನಗರದಲ್ಲಿ ಬುಧವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನವೀಕೃತ ಸಭಾ ಭವನವನ್ನು ಉದ್ಘಾಟಿಸಿ, ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಉದ್ಘಾಟನಾ ಸಮಾರಂಭ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ವೀರಶೈವ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈಹಾಕಿದ ಸರ್ಕಾರಗಳು ಯಶಸ್ವಿಯಾಗಿಲ್ಲ. ಸಮಾಜದಲ್ಲಿ ಬಡತನ ಇರಬಹುದು, ಸ್ವಾಭಿಮಾನಕ್ಕೆ ಕೊರತೆ ಇಲ್ಲ. ಏನೇ ಷಡ್ಯಂತ್ರ ನಡೆದರೂ ನಮ್ಮ ಸಮಾಜ ಒಗ್ಗಟ್ಟಿನಿಂದ ಇರಬೇಕೆಂದು ಹೇಳಿದರು.
ರಾಜ್ಯದಲ್ಲಿ ಮಠ-ಮಾನ್ಯಗಳು ಜಾತಿ, ಭೇದವಿಲ್ಲದೆ ಸರ್ವಜನಾಂಗಕ್ಕೂ ಶಿಕ್ಷಣ ನೀಡುವ ಮೂಲಕ ಕ್ರಾಂತಿ ಮಾಡಿವೆ, ಅವುಗಳಿಗೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡಬೇಕು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹಾಗೂ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಮಾತನಾಡಿ, ವೀರಶೈವ ಲಿಂಗಾಯತ ಮಠ-ಮಾನ್ಯಗಳ ಕೊಡುಗೆ ಅಪಾರವಾಗಿದೆ. ಎಲ್ಲ ಜಾತಿ ಜನಾಂಗದವರಿಗೂ ಉಚಿತವಾಗಿ ಆಶ್ರಯ, ಅಕ್ಷರ ಮತ್ತು ಅನ್ನ ದಾಸೋಹದ ಮೂಲಕ ಶಿಕ್ಷಣ ನೀಡಿ ಜ್ಞಾನಾಧಾರಿತ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಿವೆ ಎಂದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನ ಅವರಿಗೆ ಮನವಿ ಮಾಡಿದ್ದರಿಂದ 2015ರಲ್ಲಿ ಬಜೆಟ್‌ನಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣದ ಘೋಷಣೆ ಮಾಡಿ 742 ಕೋಟಿ ರೂ. ಬಿಡುಗಡೆ ಮಾಡಿದರು. ಅನುಭವ ಮಂಟಪದಲ್ಲಿ 770 ಕಂಬಗಳನ್ನು ಆಳವಡಿಸಲಾಗಿದ್ದು, 770 ಶರಣರ ವಚನ ಸಾಹಿತ್ಯವನ್ನು ಕೆತ್ತಿಸಲಾಗಿದೆ. ಮುಂದಿನ ವರ್ಷದೊಳಗೆ ಅನುಭವ ಮಂಟಪ ಲೋಕಾರ್ಪಣೆ ಮಾಡಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ಯುವಜನರು ದುಶ್ವಟಗಳಿಂದ ಕುಗ್ಗಿ ಹೋಗುತ್ತಿದ್ದಾರೆ. ಅವರಿಗೆ ವಚನಗಳನ್ನು ಕಲಿಸಿದರೆ, ವಚನದ ಅರ್ಥ ತಿಳಿಸಿದರೆ ಅವರು ಸದ್ಗುಣಿಗಳಾಗುತ್ತಾರೆ, ಸಂಸ್ಕಾರವಂತರಾಗುತ್ತಾರೆ. ಹೀಗಾಗಿ ತಾಯಂದಿರು ವಚನ ಕಲಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ನುಡಿದಂತೆ ನಡೆಯುವುದೇ ಬಸವಾದಿ ಶರಣರ ತತ್ವವಾಗಿದೆ. 12ನೇ ಶತಮಾನದಲ್ಲಿ ಶರಣರ ಕ್ರಾಂತಿಯನ್ನು ಒಮ್ಮೆ ಅವಲೋಕನ ಮಾಡಿಕೊಳ್ಳಬೇಕು. ಬುದ್ಧ ಹಾಕಿದ ಸಮಾನತೆಯ ಬೀಜ, ಬಸವಣ್ಣನಿಂದ ವೃಕ್ಷವಾಗಿ ಬೆಳೆದರೆ, ಅಂಬೇಡ್ಕರ್ ಅವರಿಂದಾಗಿ ಫಲವನ್ನು ಕೊಡುತ್ತಿದೆ. ಬಸವ ಭವನಗಳು ಚಿಂತನಾ ಕೇಂದ್ರಗಳಾಗಿ ರೂಪುಗೊಳ್ಳಬೇಕು ಎಂದರು.
ಮೈಸೂರು ಜಿಲ್ಲೆಯಲ್ಲಿ ಬಸವ ಭವನಕ್ಕೆ 5 ಕೋಟಿ ರೂ. ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ತಿ.ನರಸೀಪುರ ಪಟ್ಟಣದಲ್ಲಿ ಬಸವ ಭವನ ನಿರ್ಮಾಣ ಮಾಡಲು ಜಾಗ ಗುರುತಿಸಲಾಗುತ್ತಿದೆ. ತಕ್ಷಣ ಸರ್ಕಾರದಿಂದ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿ ಸುಂದರ ಬಸವ ಮಂಟವನ್ನು ನಿರ್ಮಿಸಲಾಗುವುದು ಎಂದರು.
ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಮಾತನಾಡಿದರು. ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀ ಶ್ರೀಶಿವಸಿದ್ದೇಶ್ವರ ಸ್ವಾಮಿಜಿ ಆಶೀರ್ವಚನ ನೀಡಿದರು.
ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಡ್ರಹಳ್ಳಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀಮುಮ್ಮಡಿ ನಿರ್ವಾಣ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ವಿವಿಧ ಮಠಾಧ್ಯಕ್ಷರು ಆಶೀರ್ವಚನ ನೀಡಿದರು.
ಮಾಜಿ ಶಾಸಕ ಎಂ.ಅಶ್ವಿನ್‌ಕುಮಾರ್, ಡಾ.ಎಂ.ರೇವಣ್ಣ, ಎಂ.ಪ್ರದೀಪ್ ಕುಮಾರ್, ಮುಕ್ತಾಂಬ, ನಿಶಾಂತ್, ಸದಾನಂದ, ಬಿಜೆಪಿ ಜಿಲ್ಲಾಧ್ಯಕ್ಷ ಸುಬ್ಬಣ್ಣ, ಗ್ರಾಮ ವಿದ್ಯೋದಯ ಸಂಘ ಗೌರವ ಪ್ರಧಾನ ಕಾರ್ಯದರ್ಶಿ ಕೆ.ಪಿ. ಮಹದೇವಸ್ವಾಮಿ, ಅರ್ಜುನ್‌ಪಾರ್ಥ, ಅಖಿಲ ಭಾರತ ಮಹಾಸಭಾ ತಾಲೂಕು ಅಧ್ಯಕ್ಷ ಸಿ.ಎಂ.ಪ್ರಕಾಶ್, ಉಪಾಧ್ಯಕ್ಷ ಎಸ್.ಕೆ.ಕಿರಣ್, ಕೆ.ವಿ.ಶಿವಶಂಕರ್, ಜಿ.ನಂಜುಂಡಸ್ವಾಮಿ, ಪೂಜಿತ್ ಮೆಡಿಕಲ್ಸ್ ಕುಮಾರ್, ಕೆ.ಎನ್.ಅಶೋಕ್, ಚನ್ನಮಲ್ಲಿಕಾರ್ಜುನಸ್ವಾಮಿ, ಪರಮೇಶ್ ಪಟೇಲ್, ಕಿರಗಸೂರು ಎಂ.ಸುರೇಶ್, ಮಾಡ್ರಹಳ್ಳಿ ಶಿವಮೂರ್ತಿ, ತೋಟೇಶ್, ಓಂಕಾರಸ್ವಾಮಿ, ಗುರುಸ್ವಾಮಿ, ಬಿ.ಎಂ.ವಿಜಯಕುಮಾರ್, ಬಿ.ಎಂ.ಅಜಯ್, ತೋಟ್ಟವಾಡಿ ರವಿ, ಬಿ.ಪಿ.ಪರಶಿವಮೂರ್ತಿ, ಎಸ್.ಬಿ.ಸುಗಂಧರಾಜು, ಎಸ್.ಬಿ.ಸುರೇಶ್, ಶಿವಕುಮಾರ್, ಕಿರಗಸೂರು ಮಹಾದೇವಸ್ವಾಮಿ, ಮೂಗೂರು ಕುಮಾರಸ್ವಾಮಿ ಇತರರು ಭಾಗವಹಿಸಿದ್ದರು.