ತಿ.ನರಸೀಪುರ ತಾಲೂಕಿನ ಡಣಾಯಕನಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಕಟ್ಟಡವನ್ನು ಅಧ್ಯಕ್ಷ ಡಿ.ಎಲ್.ಮಹದೇವಪ್ಪ ಉದ್ಘಾಟಿಸಿದರು. ಸಿ.ಒಂ ಪ್ರಕಾಶ್, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಆರ್.ಗಿರೀಶ್ ಇತರರಿದ್ದರು. 
ಮೈಸೂರು

ಹೆಚ್ಚಿನ ಹಾಲು ಸರಬರಾಜು ಮಾಡಲು ಮುಂದಾಗಿ

ತಿ.ನರಸೀಪುರ: ತಾಲೂಕಿನಲ್ಲಿಯೇ ಡಣಾಯಕನಪುರ ದೊಡ್ಡ ಗ್ರಾಮವಾಗಿರುವುದರಿಂದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ರೈತರು ಪ್ರತಿನಿತ್ಯ ಒಂದು ಸಾವಿರ ಲೀಟರ್ ಹಾಲನ್ನು ಸರಬರಾಜು ಮಾಡುವಂತೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ.ಎಲ್.ಮಹದೇವಪ್ಪ ಸಲಹೆ ನೀಡಿದರು.
ತಾಲೂಕಿನ ಡಣಾಯಕನಪುರ ಗ್ರಾಮದಲ್ಲಿ ಶನಿವಾರ 20 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಸಂಘದ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಮ್ಮೂರು ದೊಡ್ಡ ಗ್ರಾಮವಾಗಿದ್ದು, ಹೆಚ್ಚಿನ ಜನರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಪ್ರತಿನಿತ್ಯ 350 ಲೀಟರ್ ಹಾಲು ಮಾತ್ರವೇ ಶೇಖರಣೆಯಾಗುತ್ತಿದೆ. ಇದೂ ಸಾಲದ್ದರಿಂದ ರೈತರು ಒಂದು ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುವ ಅಗತ್ಯವಿದೆ ಎಂದರು.
ಗ್ರಾಮದ ಡೇರಿ ಈವರೆಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು, ಈಗ ಜಿಲ್ಲಾ ಹಾಲು ಒಕ್ಕೂಟದಿಂದ 18.50 ಲಕ್ಷ ರೂ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 1ಲಕ್ಷ ರೂ.ಹಾಗೂ ಸಂಘದ ಸದಸ್ಯರಿಂದ 50 ಸಾವಿರ ರೂ.ಗಳನ್ನು ಕ್ರೂಡೀಕರಿಸಿ ಸಂಘದ ವತಿಯಿಂದಲೇ ಖರೀದಿ ಮಾಡಿದ ನಿವೇಶನದಲ್ಲಿ ಉತ್ತಮವಾದ ಕಟ್ಟಡ ನಿರ್ಮಿಸಲಾಗಿದೆ. ಹಾಗಾಗಿ ಸಂಘವು ಮುಂದೆ ಸ್ವಂತ ಸೂರಿನಡಿ ಕಾರ್ಯ ನಿರ್ವಹಿಸಲಿದೆ ಎಂದರು.
ಮುಖ್ಯಮಂತ್ರಿಗಳ ಅನುದಾನ: ಯತೀಂದ್ರ ಸಿದ್ದರಾಮಯ್ಯ ಅವರೇ ನೂತನ ಕಟ್ಟಡ ಉದ್ಘಾಟನೆ ಮಾಡಬೇಕಿತ್ತಾದರೂ ಅವರು ಕಾರ್ಯ ಒತ್ತಡದಿಂದ ಬರಲಾಗದ ಹಿನ್ನೆಲೆಯಲ್ಲಿ ನೂತನ ಕಟ್ಟಡ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಮೈಮೂಲ್ ನಿರ್ದೇಶಕರ ಉಪಸ್ಥಿತಿಯಲ್ಲಿ ಉದ್ಘಾಟನೆ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಗ್ರಾಮಕ್ಕೆ 5-6 ಕೋಟಿ ರೂ.ಅನುದಾನ ನೀಡಿ ಇಡೀ ಗ್ರಾಮವನ್ನು ಅಭಿವೃದ್ಧಿ ಪಡಿಸಿದ್ದಾರೆ. ರಸ್ತೆ, ಜಮೀನಿಗೆ ತೆರಳುವ ರಸ್ತೆಗಳು, ಜಮೀನಿನ ಮೇಲೆ ಸ್ಮಶಾನಕ್ಕೆ ಹೋಗುವ ರಸ್ತೆಗಳು, ನೀರಾವರಿ ವ್ಯವಸ್ಥೆ ಸೇರಿದಂತೆ ಗ್ರಾಮದ ರಸ್ತೆಗಳನ್ನು ಪೂರ್ತಿಯಾಗಿ ಕಾಂಕ್ರೀಟ್ ರಸ್ತೆ ಮಾಡಿದ್ದಾರೆ. ಹಾಗಾಗಿ ಗ್ರಾಮಸ್ಥರು ಅವರಿಗೆ ಆಭಾರಿಯಾಗಿದ್ದೇವೆ ಎಂದು ಡಿ.ಎಲ್.ಮಹದೇವಪ್ಪ ತಿಳಿಸಿದರು.
ಮೈಮುಲ್ ಮಾಜಿ ಅಧ್ಯಕ್ಷರಾದ ಸಿ.ಒಂ ಪ್ರಕಾಶ್, ಕೆ.ಜಿ.ಮಹೇಶ್, ಕೆ.ಉಮಾಶಂಕರ್ ಮಾತನಾಡಿದರು. ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಣಾಯಕನಪುರ ಮಲ್ಲಣ್ಣ, ಮೈಮುಲ್ ನಿರ್ದೇಶಕಿ ನೀಲಾಂಬಿಕೆ ಮಹೇಶ್, ಮಾರ್ಗ ವಿಸ್ತರಣಾಧಿಕಾರಿ ಆರ್.ಪ್ರಮೋದ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ನಾಗೇಶ್ ನಾಯಕ್, ಕಿರಗಸೂರು ಗ್ರಾಪಂ ಉಪಾಧ್ಯಕ್ಷೆ ಚಿನ್ನತಾಯಮ್ಮ, ಪಿಡಿಒ ಜಿ.ಧರಣೇಶ್, ಸದಸ್ಯ ಗಿರೀಶ್, ವಸಂತ್, ಸಂಘದ ಉಪಾಧ್ಯಕ್ಷೆ ಶಿವರುದ್ರಮ್ಮ, ನಿರ್ದೇಶಕರಾದ ಪಿ.ಚಿನ್ನಬುದ್ದಿ, ಎಂ.ನಂಜುಂಡಸ್ವಾಮಿ, ಸಿದ್ದಪ್ಪ, ಡಿ.ಬಿ.ನೀಲಕಂಠಸ್ವಾಮಿ, ನಾಗರಾಜು, ನಾಗಮ್ಮ, ಎಸ್.ಸುಶೀಲಾ, ಲಕ್ಷ್ಮಮ್ಮ, ಪಿ.ಸರೋಜಾ, ಮುಖ್ಯ ಕಾರ್ಯನಿರ್ವಾಹಕ ಆರ್.ಗಿರೀಶ್, ಹಾಲು ಪರೀಕ್ಷಕ ಎಂ.ಬಸವಣ್ಣ, ಮುಖಂಡ ಸೋಮಣ್ಣ ನಾಯಕ ಹಾಗೂ ಗ್ರಾಮಸ್ಥರು ಇದ್ದರು.