ಜಾನುವಾರುಗಳ ರಕ್ಷಣೆ  
ಮೈಸೂರು

ಕಸಾಯಿಖಾನೆಗೆ ಸಾಗಿಸುತ್ತಿದ್ದ 33 ಜಾನುವಾರುಗಳ ರಕ್ಷಣೆ

ತಿ.ನರಸೀಪುರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ಸೋಮವಾರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕಸಾಯಿಖಾನೆಗೆ ಸಾಗಣೆ ಮಾಡಲು ಕಟ್ಟು ಹಾಕಿದ್ದ 33 ಜಾನುವಾರುಗಳನ್ನು ವಶಕ್ಕೆ ಪಡೆದು ರಕ್ಷಿಸಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಪಟ್ಟಣದ ಎಪಿಎಂಸಿ ಆವರಣದೊಳಗೆ ಸುಮಾರು 30 ರಿಂದ 40 ಹಸು, ಕರು-ದನಗಳನ್ನು ಮೇವು, ನೀರು ಇಲ್ಲದೆ ಹಗ್ಗದಿಂದ ಉರಿ ಬಿಸಿಲಿನಲ್ಲಿ ಕಟ್ಟಿ ಹಾಕಿರುವುದು ಕಂಡುಬಂದಿತ್ತು. ಸೋಮವಾರದ ಸಂತೆಯಲ್ಲಿ ಯಾರಿಂದಲೂ ಹಸು, ಕರು, ದನಗಳನ್ನು ಖರೀದಿ ಮಾಡಿ ಅವುಗಳನ್ನು ಅಕ್ರಮವಾಗಿ ಕಸಾಯಿಗಳಿಗೆ ಸಾಗಣೆ ಮಾಡಲು ಕಟ್ಟು ಹಾಕಿರುವುದು ಮೇಲ್ನೋಟಕ್ಕೆ ಸಾಬೀತಾಯಿತು.
ವಾರಸುದಾರ ಬಗ್ಗೆ ವಿಚಾರಿಸಿದಾಗ ಯಾರೊಬ್ಬರೂ ತಮ್ಮದೆಂದು ಹೇಳಲು ಮುಂದೆ ಬರಲಿಲ್ಲ. ಮೇವು, ನೀರು ಇಲ್ಲದ ಉರಿ ಬಿಸಿಲಿನಲ್ಲಿ ಕಟ್ಟಿ ಹಾಕಲಾಗಿದ್ದ 33 ಜಾನುವಾರುಗಳಲ್ಲಿ 13 ಹಸು, 2 ಎತ್ತು, 9 ಗಂಡು ಕರು, 8 ಹೆಣ್ಣು ಕರು ಹಾಗೂ 1 ಎಮ್ಮೆ ಕರುವನ್ನು ವಶಕ್ಕೆ ಪಡೆದು ಮೈಸೂರಿನ ಪಿಂಜ್ರಾಪೋಲ್‌ಗೆ ಕಳುಹಿಸಿದರು.
ಗೋ ಸಾಕಣೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆಯಡಿ ಜಾನುವಾರುಗಳನ್ನು ಕಟ್ಟು ಹಾಕಿದ್ದ ಅನಾಮಧೇಯರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಎಎಸ್‌ಐ ಚೆಲುವರಾಜು, ಮುಖ್ಯಪೇದೆ ರವಿ, ಪೊಲೀಸ್ ಪೇದೆಗಳಾದ ಶಂಕರ, ನವೀನ ಹಾಗೂ ಸಂದೇಶ ಭಾಗವಹಿಸಿದ್ದರು.