ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕೆ.ಹೊಂಗಯ್ಯ, ಸಿ.ಆರ್.ಕೃಷ್ಣಕುಮಾರ್, ರಾಜೇಶ್ವರಿ, ಮಂಜುಳಾ ನರಗುಂದ, ಡಾ.ಬಸವರಾಜು ಆರ್.ಶ್ರೇಷ್ಠ ಇತರರಿದ್ದಾರೆ.
- ಪಂಚಾಯತ್‌ರಾಜ್ ಆಯುಕ್ತಾಲಯದ ಉಪನಿರ್ದೇಶಕ ಸಿ.ಆರ್.ಕೃಷ್ಣಕುಮಾರ್ ಹೇಳಿಕೆ
- ನಮ್ಮ ಆರೋಗ್ಯ-ನಮ್ಮ ಕ್ರಿಯಾ ಯೋಜನೆ ಅಭಿಯಾನ
ಹುಣಸೂರು: ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಕಲ್ಪಿಸಲು ಸಮುದಾಯ ಮತ್ತು ಜನಾರೋಗ್ಯ ಸಮಿತಿಗಳನ್ನು ಬಲವರ್ಧನೆಗೊಳಿಸುವ ಸಲುವಾಗಿ ಹುಣಸೂರು ತಾಲೂಕಿನಲ್ಲಿ ಸ್ವಾಸ್ಥ್ಯ ಸ್ವರಾಜ್ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದು ಪಂಚಾಯತ್ ರಾಜ್ ಆಯುಕ್ತಾಲಯದ ಉಪನಿರ್ದೇಶಕ ಸಿ.ಆರ್.ಕೃಷ್ಣಕುಮಾರ್ ತಿಳಿಸಿದರು.
ಗ್ರಾಮ್ ಸಂಸ್ಥೆಯು ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನಮ್ಮ ಆರೋಗ್ಯ-ನಮ್ಮ ಕ್ರಿಯಾ ಯೋಜನೆ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಅನಾರೋಗ್ಯದ ನಂತರವೇ ಆಸ್ಪತ್ರೆಗೆ ಬರುವಂತಾಗಿದೆ. ಆದರೆ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಕ್ರಮದ ಬಗ್ಗೆ ಆಸಕ್ತಿ ತೋರುವುದಿಲ್ಲ. ಹೀಗಾಗಿ ಗ್ರಾಮ್ ಸಂಸ್ಥೆಯು ಪ್ರಾಯೋಗಿಕವಾಗಿ ದೇಶದಲ್ಲೇ ಹುಣಸೂರು ತಾಲೂಕು ಹಾಗೂ ಮಧ್ಯಪ್ರದೇಶದ ಹಿಂದುಳಿದ ತಾಲೂಕನ್ನು ಆಯ್ಕೆ ಮಾಡಿಕೊಂಡಿರುವುದು ಸ್ವಾಗತಾರ್ಹವಾಗಿದ್ದು, ತಾಲೂಕಿನಲ್ಲಿ ಎಲ್ಲ ಧರ್ಮ-ಜಾತಿ, ಆದಿವಾಸಿಗಳಿದ್ದು, ಗ್ರಾ.ಪಂ.ಗಳು, ವಿವಿಧ ಇಲಾಖೆಗಳು ಸಮನ್ವಯದಿಂದ ಯೋಜನೆ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವಂತೆ ಸೂಚಿಸಿ, ಇಲ್ಲಿ ಪ್ರಯೋಗ ಯಶಸ್ವಿಯಾದಲ್ಲಿ ದೇಶಕ್ಕೆ ವಿಸ್ತರಣೆಗೊಳಿಸುವ ಹೆಮ್ಮೆ ಹುಣಸೂರು ತಾಲೂಕಿನದ್ದಾಗಲಿದೆ ಎಂದರು.
ಆರೋಗ್ಯಇಲಾಖೆಯ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ನಾಗರಾಜ್ ಮಾತನಾಡಿ, ಸಮರ್ಪಕ ಆರೋಗ್ಯ ಸೇವೆ ಜನರಿಗೆ ತಲುಪಲು ಈಗಾಗಲೇ ಪಿಎಚ್‌ಸಿ ಹಾಗೂ ಉಪಕೇಂದ್ರಗಳಲ್ಲಿ ಜನಾರೋಗ್ಯ ಸಮಿತಿಗಳನ್ನು ರಚಿಸಲಾಗಿದೆ. ಇಂದು ಜಿಲ್ಲೆಯಲ್ಲಿ ಶೇ.14ರಷ್ಟು ಸಕ್ಕರೆ ಕಾಯಿಲೆ, ಶೇ.25ರಷ್ಟು ಬಿ.ಪಿ, ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದು, ಇದು ಗಂಭೀರ ವಿಚಾರವಾಗಿದೆ. ಹೀಗಾಗಿ ಜನಾರೋಗ್ಯ ಸಮಿತಿಗಳನ್ನು ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳೊಂದಿಗೆ ಆರೋಗ್ಯ ಇಲಾಖೆ ಸಮನ್ವಯದಿಂದ ಸಮಿತಿಗಳನ್ನು ಬಲವರ್ಧನೆಗೊಳಿಸಿ, ಕ್ರಿಯಾಯೋಜನೆ ರೂಪಿಸುವುದು ಅತ್ಯವಶ್ಯವಾಗಿದ್ದು, ಎಲ್ಲರಿಗೂ ಸಮರ್ಪಕ ಸೇವೆ ನೀಡುವ ಉದ್ದೇಶ ಹೊಂದಿದೆ ಎಂದರು.
ಗ್ರಾಮ್ ಸಂಸ್ಥೆಯ ಮುಖ್ಯಸ್ಥ ಡಾ.ಬಸವರಾಜು ಆರ್.ಶ್ರೇಷ್ಠ ಅವರು ಸ್ವಾಸ್ಥ್ಯ ಸ್ವರಾಜ್ ಯೋಜನೆ ಕುರಿತು ಮಾಹಿತಿ
ನೀಡಿ, ಕರ್ನಾಟಕದ ಹುಣಸೂರು ಮತ್ತು ಮಧ್ಯಪ್ರದೇಶದ ಗಂಜ್ ಬಸೋದ್ ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ರೋಗ ತಡೆಗಟ್ಟುವಿಕೆ ಹಾಗೂ ಮುಂಜಾಗ್ರತಾ ಕ್ರಮಗಳು ಸಮುದಾಯ ಮತ್ತು ಪಂಚಾಯತ್ ಸಂಸ್ಥೆಗಳ ಜವಾಬ್ದಾರಿಯಾಗಿದೆ. ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಜಾರಿಗೊಳಿಸುವ ಸಲುವಾಗಿ ಇಲಾಖೆಗಳ ನಡುವೆ ಸಮನ್ವಯದೊಂದಿಗೆ ಕ್ರಿಯಾ ಸಂಶೋಧನಾ ವ್ಯವಸ್ಥೆ ಜಾರಿಗೆ ತರಬೇಕಿದ್ದು, ಇಲ್ಲಿ ಯಶಸ್ವಿಯಾದಲ್ಲಿ ಇಡೀ ದೇಶಕ್ಕೇ ಅನ್ವಯವಾಗಲಿದೆ. ಎಲ್ಲರೂ ಸಹಕಾರ ನೀಡುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಇಒ ಹೊಂಗಯ್ಯ, ಟಿಎಚ್‌ಒ ಡಾ.ದರ್ಶನ್, ಸಿಡಿಪಿಒ ಹರೀಶ್, ಗ್ರಾಮ್ ಸಂಸ್ಥೆಯ ಡಾ.ರಾಜೇಂದ್ರಪ್ರಸಾದ್, ಫಾತಿಮಾ ಮೇರಿ, ಸಿ.ಎಸ್.ರವಿ, ಮಲ್ಲಿಕಾರ್ಜುನಸ್ವಾಮಿ ಮಾತನಾಡಿದರು. ಇದೇ ವೇಳೆ ವಿದ್ಯುನ್ಮಾನ ಫಲಕ ಘಟಕ, ನನ್ನ ಸ್ವಾಸ್ಥ್ಯ-ನನ್ನ ದಿನಚರಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಂಜೀವಿನಿ ಯೋಜನೆ, ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತರು, ಪಿಡಿಒಗಳು ಭಾಗವಹಿಸಿದ್ದರು.
ರೀಲ್ಸ್ ಮಾಡಿ ಬಹುಮಾನ ಗೆಲ್ಲಿ: ಸ್ವಾಸ್ಥ್ಯ ಸ್ವರಾಜ್ ಯೋಜನೆ ಕುರಿತು ರೀಲ್ಸ್ ಮಾಡುವ ಉತ್ತಮ 10 ಮಂದಿಗೆ ಬಹುಮಾನ ವಿತರಿಸಲಾಗುವುದೆಂದು ಗ್ರಾಮ್ ಮುಖ್ಯಸ್ಥ ಡಾ.ಬಸವರಾಜು ಆರ್.ಶ್ರೇಷ್ಠ ಪ್ರಕಟಿಸಿದರು.