ಎಸ್. ಜಾನಕಿ 
ಮೈಸೂರು

ಜಾನಕಿ ನಿಧನಕ್ಕೆ ಸುತ್ತೂರು ಶ್ರೀ ಸಂತಾಪ

ಪ್ರಮುಖ ಮುಖ್ಯಾಂಶಗಳು

  • ಸಾಂಸ್ಕೃತಿಕ ಲೋಕಕ್ಕೆ ಆದ ಬಹುದೊಡ್ಡ ನಷ್ಟ
  • ಸುಮಾರು 48,000 ಗೀತೆಗಳಿಗೆ ಸುಮಧುರ ಕಂಠದಿಂದ ಜೀವ ತುಂಬಿದ ಅಪ್ರತಿಮ ಕಲಾವಿದರು.
ಮೈಸೂರು: ದಕ್ಷಿಣ ಭಾರತದ ಚಲನಚಿತ್ರ ರಂಗದ ಅನಭಿಷಕ್ತ ಗಾನಸಾಮ್ರಾಜ್ಞಿ ಎಸ್.ಜಾನಕಿ ಅವರ ಅಗಲುವಿಕೆ ಸಾಂಸ್ಕೃತಿಕ ಲೋಕಕ್ಕೆ ಆದ ಬಹುದೊಡ್ಡ ನಷ್ಟ ಎಂದು ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಜಾನಕಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಶ್ರೀಗಳು, ಮೂಲತಃ ಆಂಧ್ರಪ್ರದೇಶದವರಾದ ಜಾನಕಿಯವರು ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಸೇರಿ ಹಲವಾರು ಭಾಷೆಗಳಲ್ಲಿ ಸುಮಾರು 48,000 ಗೀತೆಗಳಿಗೆ ಸುಮಧುರ ಕಂಠದಿಂದ ಜೀವ ತುಂಬಿದ ಅಪ್ರತಿಮ ಕಲಾವಿದರು. 
ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅವರಿಗೆ ಲಭಿಸಿದ ಪ್ರಶಸ್ತಿಗಳು ಅಸಂಖ್ಯಾತ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಶಸ್ತಿ ನೀಡಿಕೆಯಲ್ಲಿ ದಕ್ಷಿಣ ಭಾರತದ ಕಲಾವಿದರನ್ನು ಕಡಗಣಿಸಲಾಗುತ್ತಿದೆಯೆಂಬ ಕಾರಣಕ್ಕಾಗಿ ತಮಗೆ ಲಭಿಸಿದ ಕೇಂದ್ರ ಸರ್ಕಾರದ ಪ್ರಶಸ್ತಿಯನ್ನು ಗೌರವದಿಂದಲೇ ನಿರಾಕರಿಸಿದ ಸ್ವಾಭಿಮಾನಿ ಜಾನಕಿ ಅವರು.
 ಸರಳ ವ್ಯಕ್ತಿತ್ವದ ಅವರು ಪರಮ ದೈವಭಕ್ತರಾಗಿದ್ದರು. ಜೀವನದ ಸಂಧ್ಯಾ ಸಮಯವನ್ನು ಮೈಸೂರಿನಲ್ಲಿ ಕಳೆಯಲು ಆಯ್ಕೆ ಮಾಡಿಕೊಂಡಿದ್ದು ಈ ನೆಲದೊಂದಿಗಿನ ಅವರ ಬಾಂಧವ್ಯವನ್ನು ತಿಳಿಸುತ್ತದೆ. ಅವರ ಅಗಲಿಕೆಯಿಂದ ಸಂಗೀತ ಲೋಕದಲ್ಲಿ ಒಂದು ತೆರನಾದ ನಿರ್ವಾತ ಉಂಟಾಗಿದೆಯೆಂದರೆ ಅತಿಶಯೋಕ್ತಿಯಲ್ಲ. 
ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬದ ಸದಸ್ಯರಿಗೆ ಹಾಗೂ ಲಕ್ಷಾಂತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಹಾರೈಸುತ್ತೇವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.