ಬೆಂಗಳೂರಿನಲ್ಲಿ 2006ರಲ್ಲಿ ನಡೆದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಯಂತಿ ಮಹೋತ್ಸವದಲ್ಲಿ ಶಿವರಾಜ್ ಪಾಟೀಲ್ ಪಾಲ್ಗೊಂಡಿದ್ದಾಗ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಎಸ್.ಎಂ. ಕೃಷ್ಣ ಅವರೊಂದಿಗಿನ ಸಾಂದರ್ಭಿಕ ಚಿತ್ರ 
ಮೈಸೂರು

ಕೇಂದ್ರದ ಮಾಜಿ ಸಚಿವ ಶಿವರಾಜ ಪಾಟೀಲ್ ನಿಧನಕ್ಕೆ ಸುತ್ತೂರು ಶ್ರೀ ಸಂತಾಪ

ಮೈಸೂರು: ಮಾಜಿ ಕೇಂದ್ರ ಸಚಿವ ಶಿವರಾಜ ಪಾಟೀಲ್ ನಿಧನಕ್ಕೆ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಶಿವರಾಜ ಪಾಟೀಲ್ ಅವರು ದೈವಾದೀನರಾದುದು ವಿಷಾದದ ಸಂಗತಿ. ಶಿವರಾಜ ಪಾಟೀಲ್ ಮಹಾರಾಷ್ಟ್ರದ ಲಾತೂರ್ ಕ್ಷೇತ್ರದಿಂದ ಸತತವಾಗಿ ಏಳು ಬಾರಿ ವಿಜಯಿಗಳಾಗಿದ್ದ ಜನಪ್ರಿಯ ಧುರೀಣರು. ಲೋಕಸಭೆ ಮತ್ತು ರಾಜ್ಯಸಭೆ ಎರಡು ಕಡೆಗಳಲ್ಲೂ ಛಾಪು ಮೂಡಿಸಿದ್ದ ಪ್ರತಿಭಾನ್ವಿತರು. ಎರಡು ಬಾರಿ ಮಹಾರಾಷ್ಟ್ರದ ವಿಧಾನಸಭಾ ಸದಸ್ಯರೂ ಆಗಿದ್ದರು. ಮಧ್ಯಮ ವರ್ಗದ ಕೌಟುಂಬಿಕ ಹಿನ್ನೆಲೆಯಿಂದ ಬಂದವರು. ದೀರ್ಘಕಾಲದ ರಾಜಕೀಯ ಜೀವನದಲ್ಲಿ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದರು. ಹಲವಾರು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದರು ಎಂದು ಶ್ರೀಗಳು ಸಂತಾಪ ಸೂಚನಾ ಸಂದೇಶದಲ್ಲಿ ಶಿವರಾಜ ಪಾಟೀಲ್ ಸೇವೆಯನ್ನು ಸ್ಮರಿಸಿಕೊಂಡಿದ್ದಾರೆ.
2008ರಲ್ಲಿ ಗೃಹಸಚಿವರಾಗಿದ್ದಾಗ ಕೆಲವು ಭದ್ರತಾಲೋಪಗಳಾದಾಗ ನೈತಿಕ ಹೊಣೆಗಾರಿಕೆಯಿಂದ ರಾಜೀನಾಮೆ ನೀಡಿದ ಸಂವೇದನಾಶೀಲರು. ರಕ್ಷಣಾ ಇಲಾಖೆಯ ರಾಜ್ಯ ಸಚಿವರಾಗಿ, ವಾಣಿಜ್ಯ, ನಾಗರಿಕ ವಿಮಾನಯಾನ, ಬಾಹ್ಯಾಕಾಶ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಕೇಂದ್ರ ಸರ್ಕಾರದ ಹಲವಾರು ಉನ್ನತ ಸ್ಥಾಯಿ ಸಮಿತಿಗಳಲ್ಲಿ ಸದಸ್ಯರಾಗಿದ್ದರು. ಲೋಕಸಭೆಯ ಸಭಾಪತಿ ಆಗಿದ್ದರು. ಆಳವಾದ ಪರಿಜ್ಞಾನ, ಪರಿಣತಿ, ಮುನ್ನೋಟಗಳನ್ನು ಹೊಂದಿದ್ದರು. ಸದಾ ಅಧ್ಯಯನಶೀಲರಾಗಿದ್ದರು. ವಿನಯ, ವಿವೇಕಗಳ ಸಾಕಾರಮೂರ್ತಿ, ಅಜಾತಶತ್ರು. ಅತ್ಯುನ್ನತ ಸಂಸದರೆಂಬ ಪುರಸ್ಕಾರಕ್ಕೂ ಪಾತ್ರರಾಗಿದ್ದರು. ರಾಜಕೀಯ ಸೇವಾವಧಿಯ ಕೊನೆಯಲ್ಲಿ ಪಂಜಾಬಿನ ರಾಜ್ಯಪಾಲರೂ ಆಗಿದ್ದರು.
ಶಿವರಾಜ ಪಾಟೀಲರು ಬೆಂಗಳೂರಿನಲ್ಲಿ ನಡೆದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಯಂತಿ ಹಾಗೂ ಸುತ್ತೂರಿನ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಮಠಮಾನ್ಯಗಳು ಹಾಗೂ ಗುರುಹಿರಿಯರ ಬಗ್ಗೆ ಅಪಾರ ಗೌರವ ಹೊಂದಿದ್ದರು. ತುಂಬು ಜೀವನ ನಡೆಸಿದವರು. ರಾಜಕೀಯ ಸಜ್ಜನಿಕೆಯ ಅಪರೂಪದ ಉದಾಹರಣೆಯಂತಿದ್ದರು. ದಿವಂಗತರ ಅಗಲುವಿಕೆಗೆ ಸಂತಾಪವನ್ನು ವ್ಯಕ್ತಪಡಿಸುತ್ತ, ಅವರ ಆತ್ಮಕ್ಕೆ ಶಾಂತಿಯನ್ನೂ, ಅವರ ಕುಟುಂಬವರ್ಗದವರು ಮತ್ತು ಬಂಧುಬಾಂಧವರಿಗೆ ಈ ಅಗಲಿಕೆಯ ದುಃಖವನ್ನು ಭರಿಸಲು ಭಗವಂತನು ಶಕ್ತಿಯನ್ನು ನೀಡಲೆಂದು ಹಾರೈಸುತ್ತೇವೆ ಎಂದು ತಿಳಿಸಿದ್ದಾರೆ.