ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಗೃಹ ವಿಜ್ಞಾನ ಸಮ್ಮೇಳನವನ್ನು ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಪ್ರೊ.ಎನ್.ಕೆ. ಲೋಕನಾಥ್, ಪ್ರೊ.ಶರಣಪ್ಪ ವಿ.ಹಲಸೆ, ಪ್ರೊ. ಅಶೋಕ್ ಎಸ್.ಅಲೂರು, ಪ್ರೊ.ವಿ.ಭಾರತಿ ಹರಿಶಂಕರ್ ಹಾಗೂ ಇತರರು ಇದ್ದರು.
ಮೈಸೂರು: ಸಮಾಜ ನೈಸರ್ಗಿಕವಾಗಿ ಸುಸ್ಥಿರತೆಯ ಕಡೆಗೆ ಸಾಗಲು ಮನೆಯಲ್ಲಿ ಸುಸ್ಥಿರತೆ ರೂಢಿಸಿಕೊಳ್ಳುತ್ತಾ ಸಾಗಬೇಕು ಎಂದು ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗ ವತಿಯಿಂದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಗೃಹ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಎಲ್ಲವನ್ನು ಕೂಡಿಸುವ, ಪುನರುಜ್ಜೀವನಗೊಳಿಸುವ ಕೆಲಸ ಮಾಡುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಪರಿಸರದ ಅವನತಿ, ಹವಾಮಾನ ವೈಪರಿತ್ಯ, ನೈಸರ್ಗಿಕ ಸಂಪನ್ಮೂಲಗಳ ಕೊರತೆಯ ಸಂದರ್ಭದಲ್ಲಿ ವಿಜ್ಞಾನ ಮತ್ತು ಪ್ರಯೋಗಗಳ ಜ್ಞಾನದ ವ್ಯಾಪ್ತಿಯು ಪಠ್ಯಗಳ ಮೂಲಕ ವಿಕಸನವಾಗಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಸುಸ್ಥಿರತೆ ಎಂಬುದು ಒಂದು ಆಯ್ಕೆಯಲ್ಲ, ಅದು ಒಂದು ಜವಾಬ್ದಾರಿ. ಹಾಗಾಗಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ಸುಸ್ಥಿರ ಸಮಾಜ ನಿರ್ಮಾಣ ಮಾಡುವ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ್ ಎಸ್.ಅಲೂರು, ಕೊಯಮತ್ತೂರಿನ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಭಾರತಿ ಹರಿಶಂಕರ್, ಸಿಎಫ್‌ಟಿಆರ್‌ಐ ನಿವೃತ್ತ ನಿರ್ದೇಶಕ ಡಾ.ವಿ.ಪ್ರಕಾಶ್, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ, ಮುಕ್ತ ವಿವಿ ಕುಲಸಚಿವ ಪ್ರೊ.ಎಸ್.ಕೆ. ನವೀನ್ ಕುಮಾರ್, ಮೈಸೂರು ವಿವಿ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಕಮಲ, ಮುಕ್ತ ವಿವಿ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸಿ.ಅನಿತಾ ಇದ್ದರು.