ಕವಿಪ್ರನಿನಿ ವತಿಯಿಂದ ಭೂ ಮಾಲೀಕರಿಗೆ ಪರಿಹಾರದ ಡಿಡಿ ವಿತರಣೆ ಮಾಡಲಾಯಿತು. ಪೂರ್ಣಚಂದ್ರ ತೇಜಸ್ವಿ, ವಿನೋದ್, ನವೀನ್, ಸುನೀಲ್ ಇನ್ನಿತರರಿದ್ದರು.
- ಕೆಪಿಟಿಸಿಎಲ್‌ನಿಂದ ಭೂ ಮಾಲೀಕರಿಗೆ ಪರಿಹಾರ
- ಕಡಕೊಳ-ವಾಜಮಂಗಲ ಮಾರ್ಗ ವಿದ್ಯುತ್ ಸಂಪರ್ಕ ಕಾಮಗಾರಿಗೆ ಮರು ಚಾಲನೆ
ಮೈಸೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಜಿಲ್ಲೆಯ ವಿದ್ಯುತ್ ಮೂಲಸೌಕರ್ಯ ಕಾಮಗಾರಿಗೆ ಚಾಲನೆ ನೀಡಲಾಯಿತು.
ಸ್ಥಳೀಯ ರೈತರು, ರೈತ ಸಂಘದ ಮುಖಂಡರು ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಭೂ ಮಾಲೀಕರಿಗೆ ಪರಿಹಾರದ ಡಿಡಿ ವಿತರಣೆ ಮಾಡಿ, ಸ್ಥಗಿತಗೊಂಡಿದ್ದ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಯಿತು.
ಮೈಸೂರು ತಾಲೂಕಿನ 220ಕೆವಿ ಕಡಕೊಳ-ವಾಜಮಂಗಲ ಮಾರ್ಗದ ವಿದ್ಯುತ್ ಸಂಪರ್ಕ ಮೂಲಸೌಕರ್ಯ ಕಾಮಗಾರಿಯನ್ನು 2011ರಲ್ಲಿ ಕೈಗೆತ್ತಿಕೊಂಡಿತ್ತು.
ಕಾರಣಾಂತರಗಳಿಂದ ನನಗುದಿಗೆ ಬಿದ್ದಿತ್ತು. ನಿಗಮದ ಸತತ ಪ್ರಯತ್ನ ಹಾಗೂ ಭೂ ಮಾಲೀಕರು ಹಾಗೂ ರೈತರ ಜತೆಗಿನ ಸೌಹಾರ್ದಯುತ ಸಂವಹನದ ಮೂಲಕ ಯೋಜನೆ ಪೂರ್ಣಗೊಳ್ಳಲು ಸಹಕಾರ ದೊರೆತಿದೆ. ಈ ಮೂಲಕ ನಿಗಮ ಕಾಮಗಾರಿ ಆರಂಭಿಸಿದ್ದು, 40-50 ದಿನಗಳೊಳಗೆ ವಿದ್ಯುತ್ ಮಾರ್ಗದ ಲೈನ್ ಜೋಡಣೆ ಕಾರ್ಯ ಪೂರ್ಣಗೊಳ್ಳಲಿದೆ.
2011ರಲ್ಲಿ ಕಡಕೊಳ ಹಾಗೂ ವಾಜಮಂಗಲ ನಡುವೆ 220 ಕೆವಿ ವಿದ್ಯುತ್ ಸಂಪರ್ಕ ಯೋಜನೆಯನ್ನು ರೂಪಿಸಿತ್ತು. ಯೋಜನೆಯಂತೆ 83 ವಿದ್ಯುತ್ ಟವರ್ ನಿರ್ಮಿಸಲಾಗಿತ್ತು, ವಿದ್ಯುತ್ ಲೈನ್ ಜೋಡಿಸುವ ಕಾಮಗಾರಿ ಉಳಿಕೆಯಾಗಿತ್ತು. ಈ ನಡುವೆ ಭೂ ಮಾಲೀಕರು ಹಾಗೂ ರೈತರು ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿದ್ದರು.
ಇಂಧನ ಇಲಾಖೆ ಇಂಧನ ಸಚಿವರ ಕೆ.ಜೆ.ಜಾರ್ಜ್ ನಿರ್ದೇಶನದ ಮೇರೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಸೂಕ್ತ ಪರಿಹಾರವನ್ನು ಭೂ ಮಾಲೀಕರು, ರೈತರರಿಗೆ ಒದಗಿಸಿಕೊಡುವ ಮೂಲಕ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಪೂರ್ಣಗೊಳಿಸಲು ಸಹಕಾರ ಕೋರಿದ್ದರು. ಯೋಜನೆಗಳಿಗೆ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕವಿಪ್ರನಿನಿಯ ಕಾರ್ಯನಿರ್ವಾಹಕ ಇಂಜಿನಿಯರ್ ಪೂರ್ಣಚಂದ್ರ ತೇಜಸ್ವಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನೋದ್, ಸಹಾಯಕ ಇಂಜಿನಿಯರ್ ನವೀನ್, ಚಾವಿಸನಿನಿ ಅಧಿಕಾರಿಗಳು, ಸಿಬ್ಬಂದಿ, ಮೈಸೂರು ದಕ್ಷಿಣ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಸುನೀಲ್, ವಕೀಲ ಜಗದೀಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.