ಹುಣಸೂರು ನಗರದ ತಾಪಂ ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ನಾಯಕ ಸೂರಜ್ ಹೆಗ್ಡೆ ಅವರಿಗೆ ನುಡಿನಮನ ಸಲ್ಲಿಸಿದರು. ಹೊಸೂರು ಕುಮಾರ್, ನಿಂಗರಾಜ ಮಲ್ಲಾಡಿ, ಬಲ್ಲೇನಹಳ್ಳಿ ಕೆಂಪರಾಜು ಇತರರಿದ್ದರು.
ಹುಣಸೂರು : ಸೋಮವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ಗೌರವಾರ್ಥ ತಾಲೂಕಿನ ಪ್ರಗತಿಪರ ಸಂಘಟನೆಗಳ ಮುಖಂಡರು ನುಡಿನಮನ ಸಲ್ಲಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಸೂರಜ್ ಹೆಗ್ಡೆ ಹಠಾತ್ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿ ಮಾತನಾಡಿ, ಸರಳತೆಯ ಮೂರ್ತರೂಪ ಅವರಾಗಿದ್ದರು. ತಾತ ದೇವರಾಜ ಅರಸು ಅವರಲ್ಲಿದ್ದ ಸಾಮಾಜಿಕ ಬದ್ಧತೆ ಇವರಲ್ಲಿಯೂ ಇತ್ತು. ಆದರೆ ಯಾವುದೇ ರಾಜಕೀಯ ಪಕ್ಷಗಳು ಅವರಿಗೆ ಸೂಕ್ತ ಅವಕಾಶ ನೀಡದೇ ಇದ್ದದ್ದು ನೋವಿನ ಸಂಗತಿ ಎಂದು ಬೇಸರಿಸಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ಸೂರಜ್ ಹೆಗ್ಡೆ ಒಡನಾಡಿ ವಿನೋಬಾ ಕಾಲನಿ ಗಣೇಶ್ ನುಡಿನಮನ ಸಲ್ಲಿಸಿದರು. ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ನಾಗನಹಳ್ಳಿ ಮಹದೇವ, ಅಬ್ದುಲ್ ಮಾಲೀಕ್, ರಾಜು ಚಿಕ್ಕಹುಣಸೂರು, ಸಿದ್ದರಾಜು ಅತ್ತಿಕುಪ್ಪೆ, ಪ್ರಕಾಶ್ ಎಂ.ಆರ್.ಹೊಸಹಳ್ಳಿ, ನಾಗರಾಜೇಗೌಡ, ರಾಜ್ಯ ರೈತ ಸಂಘದ ಕಿರಿಜಾಜಿ ಧನಂಜಯ, ಮಾದಯ್ಯ, ಬಸವರಾಜೇಗೌಡ, ಸೋಮಶೇಖರ್, ಮಾದೇಗೌಡ, ಅಂಬೇಡ್ಕರ್ ನಗರದ ದಾಸಪ್ಪ, ಶೋಭಮ್ಮ ಮುಂತಾದವರು ಹಾಜರಿದ್ದರು.