ಕನ್ನಡ ರಾಜ್ಯೋತ್ಸವ, ಉರ್ದು ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್, ಡಿ.ಉದಯಕುಮಾರ್ ಇನ್ನಿತರರಿದ್ದರು.
- ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಕನ್ನಡ ರಾಜ್ಯೋತ್ಸವ, ಉರ್ದು ದಿನಾಚರಣೆ, ಶಿಕ್ಷಣ ದಿನಾಚರಣೆ
- ಸಂವಿಧಾನಕ್ಕೆ ವಿರುದ್ಧ ಇರುವವರನ್ನು ತಿರಸ್ಕರಿಸಬೇಕು
- ಭಾತೃತ್ವವನ್ನು ನಾಶ ಮಾಡಿ, ದ್ವೇಷ ಹರಡಿ, ರಾಜಕೀಯ ದುರ್ಲಾಭ ಪಡೆದುಕೊಳ್ಳಲು ಕೆಲವರು ಷಡ್ಯಂತ್ರ
ಮೈಸೂರು: ಸಮಾನತೆ ಮತ್ತು ಜಾತ್ಯತೀತ ಆಶಯ ಹೊಂದಿರುವ ಸಂವಿಧಾನ ಉಳಿವಿಗೆ ಆದ್ಯತೆ ನೀಡುವವರನ್ನು ಬೆಂಬಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ರಾಜ್‌ಕುಮಾರ್ ರಸ್ತೆಯ ಸಾತಗಳ್ಳಿಯಲ್ಲಿರುವ ರೈಜ್ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ, ಉರ್ದು ದಿನಾಚರಣೆ ಮತ್ತು ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಎಲ್ಲ ವರ್ಗದ ಜನರ ಕಲ್ಯಾಣ ಬಯಸುವ ಸಂವಿಧಾನ ಬದಲಾವಣೆಗೆ ಪ್ರಯತ್ನಿಸಲಾಗುತ್ತಿದೆ. ಹಿಂದು ಸಮಾಜದಲ್ಲಿನ ಶ್ರೇಣೀಕೃತ ವ್ಯವಸ್ಥೆ ವಾಪಸ್ ತಂದು ಜಾತಿ ವ್ಯವಸ್ಥೆ ಇನ್ನಷ್ಟು ಬಲಪಡಿಸಲು ಹೀಗೆ ಮಾಡಲಾಗುತ್ತಿದೆ. ಈ ಕಾರ್ಯ ಸಾಧಿಸಲು ಮುಸ್ಲಿಮರನ್ನು ಶತ್ರುಗಳನ್ನಾಗಿ ಬಿಂಬಿಸುವ ಹುನ್ನಾರವೂ ನಡೆದಿವೆ. ಸಂವಿಧಾನದ ಪರ ಇರುವವರನ್ನು ಬೆಂಬಲಿಸಬೇಕು. ಸಂವಿಧಾನಕ್ಕೆ ವಿರುದ್ಧ ಇರುವವರನ್ನು ತಿರಸ್ಕರಿಸಬೇಕು ಎಂದರು.
ಧರ್ಮ- ಜಾತಿ ನಡುವಿನ ಭಾತೃತ್ವವನ್ನು ನಾಶ ಮಾಡಿ, ದ್ವೇಷ ಹರಡಿ, ರಾಜಕೀಯ ದುರ್ಲಾಭ ಪಡೆದುಕೊಳ್ಳಲು ಕೆಲವರು ಷಡ್ಯಂತ್ರ ನಡೆಸಿದ್ದು, ಇದರ ವಿರುದ್ಧ ಸಂಘಟಿತರಾಗಿ ಹೋರಾಟ ಕೈಗೊಳ್ಳಬೇಕಾಗಿದೆ ಎಂದರು.
ಕಾಂಗ್ರೆಸ್ ದಮನಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲು ಹೋರಾಡುತ್ತದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ದುರಾದೃಷ್ಟವಶಾತ್ ಮುಸ್ಲಿಂ ಸಮುದಾಯದ ಅನೇಕರು ಹಿಂದುಳಿದಿದ್ದಾರೆ. ದೇಶದ ಪ್ರಗತಿಗಾಗಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಮುಖ್ಯವಾಹಿನಿಯತ್ತ ಸಾಗಬೇಕಿದೆ ಎಂದರು.
ಶಾಸಕ ತನ್ವೀರ್ ಸೇಠ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ನೂರ್ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಸೈಯದ್ ಅಖೀಲ್ ಅಹಮದ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಉದಯಕುಮಾರ್, ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಜಮೀರ್ ಅಹಮದ್, ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಬಾನ ಅಂಜುಮ್, ಉಪಾಧ್ಯಕ್ಷ ಮುನಾವರ್ ಪಾಷಾ, ಜಂಟಿ ಕಾರ್ಯದರ್ಶಿ ಅಪ್ಸರ್ ಪಾಷ, ಸಂಘಟನಾ ಕಾರ್ಯದರ್ಶಿ ಇರ್ಫಾನ್ ಅಹಮದ್ ಇನ್ನಿತರರಿದ್ದರು.