ಎಚ್.ಡಿ.ಕೋಟೆ ಪಟ್ಟಣದ ಕೃಷಿ ಅಧಿಕಾರಿಗಳ ಕಚೇರಿ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟಗಾರರ ಸಂಘದಿಂದ ಕೃಷಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಲಕ್ಷ್ಮೀ ನರಸಿಂಹ, ಚಂದ್ರಶೇಖರ್ ಆರಾಧ್ಯ, ಮಾದಾಪುರ ನಾಗೇಂದ್ರ, ಅಶೋಕ್ ಇತರರು ಇದ್ದರು. 
ಮೈಸೂರು

ಬಂದ್‌ಗೆ ಎಚ್.ಡಿ.ಕೋಟೆಯಲ್ಲಿ ಬೆಂಬಲ

ಲೋಕೇಶ್ ಮನು. ಡಿ
ಎಚ್.ಡಿ.ಕೋಟೆ: ರಾಷ್ಟ್ರವ್ಯಾಪಿ ಕೃಷಿ ಪರಿಕರ ಮಾರಾಟಗಾರರು ಕರೆನೀಡಿರುವ ಬಂದ್‌ಗೆ ಸೋಮವಾರ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟಗಾರರು ಸಂಘ ಬೆಂಬಲ ವ್ಯಕ್ತಪಡಿಸಿತು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಮೆರವಣಿಗೆ ಹೊರಟ ಮಾರಾಟಗಾರರು, ಮೊದಲಿಗೆ ಕೃಷಿ ಅಧಿಕಾರಿಗಳ ಕಚೇರಿ ತಲುಪಿ ಮನವಿಪತ್ರ ಸಲ್ಲಿಸಿ ನಂತರ ಹುಣಸೂರು-ಬೇಗೂರು ರಸ್ತೆಯಲ್ಲಿ ಮೆರವಣಿಗೆ ಸಾಗಿ ತಹಸೀಲ್ದಾರ್ ಕಚೇರಿ ತಲುಪಿ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಕಾರರು ಒತ್ತಾಯಿಸಿದರು.
ಡಿಎಪಿ ಮತ್ತು ಯೂರಿಯಾ ಮಾರಾಟದ ಜತೆಗೆ ಒತ್ತಾಯವಾಗಿ ಬೇರೆ ಉತ್ಪಾದನೆಗಳನ್ನು ಲಿಂಕ್ ಮಾಡುವುದನ್ನು ನಿಲ್ಲಿಸಬೇಕು. ಎಲ್ಲ ರಸಗೊಬ್ಬರಗಳ ಎಂಆರ್‌ಪಿ ಮೇಲೆ ಶೇ.8 ಡೀಲರ್ ಲಾಭಾಂಶವಿರುವ ಹಾಗೇ ನೋಡಿಕೊಳ್ಳಬೇಕು. ಗೊಬ್ಬರ, ಬೀಜ, ಕೀಟನಾಶಕಗಳ ಸ್ಯಾಂಪಲ್ ಕಳಪೆ ಬಂದಾಗ ಕಂಪನಿಯವರ ಮೇಲೆ ಮಾತ್ರ ಕೇಸ್ ಹಾಕಿ ಡೀಲರ್‌ಗಳನ್ನು ಸಾಕ್ಷಿಯಾಗಿ ಪರಿಗಣಿಸಬೇಕು. ಡೀಲರ್‌ಗಳಿಂದ ಸ್ಯಾಂಪಲ್ ಡ್ರಾ ಮಾಡಿದಾಗ ಸ್ಯಾಂಪಲ್ಲಿನ ಹಣವನ್ನು ಕಡ್ಡಾಯವಾಗಿ ಡೀಲರ್‌ಗಳಿಗೆ ಪಾವತಿ ಎಂದು ಆಗ್ರಹಿಸಿದರು.
ಅಧಿಕಾರಿಗಳು ತಪಾಸಣೆಗಾಗಿ ಅಂಗಡಿಗಳಿಗೆ ಭೇಟಿ ಕೊಟ್ಟನಂತರ ಮಾಧ್ಯಮಗಳಿಗೆ ಹೇಳಿಕೆಗಳನ್ನು ಕೊಡುವಾಗ ದಾಳಿ ಎನ್ನುವ ಬದಲು ತಪಾಸಣೆ ಎನ್ನಬೇಕು. ಅಂಗಡಿಗಳ ಫೋಟೋ ಬಳಸಬಾರದು. ಎಫ್‌ಐಡಿ ಮುಖಾಂತರ ಡಿಎಪಿ ಮತ್ತು ಯೂರಿಯಾ ಮಾರಾಟ ಮಾಡುವುದನ್ನು ಹಿಂಗಾರು ಬೆಳೆಗಳವರೆಗೆ ಕಡ್ಡಾಯಗೊಳಿಸಬಾರದು. ಕೆಎಫ್‌ಐಡಿ ಮುಖಾಂತರ ರಸಗೊಬ್ಬರ ಮಾರಾಟ ಮಾಡುವ ಆದೇಶ ಸ್ವಾಗತಿಸುತ್ತೇವೆ. ನೀರಾವರಿ ಮತ್ತು ಒಣ ಬೇಸಾಯಗಾರರಿಗೆ ಬೆಳೆಗಳ ಆಧಾರದ ಮೇಲೆ ರಸಗೊಬ್ಬರ ದೊರೆಯುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ಲಕ್ಷ್ಮೀ ನರಸಿಂಹ, ಕಾರ್ಯದರ್ಶಿ ಚಂದ್ರಶೇಖರ್ ಆರಾಧ್ಯ, ಉಪಾಧ್ಯಕ್ಷ ಮಾದಾಪುರ ನಾಗೇಂದ್ರ, ಗೌರವಾಧ್ಯಕ್ಷ ಅಶೋಕ್, ಸದಸ್ಯರಾದ ಬಾಲಾಜಿ, ರಾಜೇಂದ್ರ, ಸಿದ್ದಪ್ಪ, ಲಿಂಗಣ್ಣ, ಮಹಾದೇವ, ರಾಜೇಂದ್ರ, ಗಣೇಶ, ದೇವೇಶ, ವಿವೇಕ್, ಚಿಕ್ಕಣ್ಣ, ಸೋಮಣ್ಣ ಇತರರು ಇದ್ದರು.