ಸುದ್ದಿಗೋಷ್ಠಿ 
ಮೈಸೂರು

ಮೈಸೂರು ಭಾಗದ ನಿರ್ದೇಶಕರೂ ಸದಸ್ಯರಾಗಲು ಸಲಹೆ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಎಲ್ಲೆಡೆ ಈಗ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ
  • ಸದಸ್ಯತ್ವ ಪಡೆಯಲು ಯಾವುದಾದರೊಂದು ಸಿನಿಮಾ ನಿರ್ದೇಶನ ಮಾಡಿರಬೇಕು
  • ಸೆನ್ಸಾರ್ ಮಂಡಳಿಯಿಂದ ಸೆನ್ಸಾರ್ ಆಗಿರುವ ಪ್ರಮಾಣ ಪತ್ರ ಸಲ್ಲಿಸಬೇಕು
ಮೈಸೂರು: ಕರ್ನಾಟಕ ಚಲನಚಿತ್ರ ಸಂಘದ ನಿರ್ದೇಶಕರ ಸಂಘಕ್ಕೆ ಮೈಸೂರು ಭಾಗದ ನಿರ್ದೇಶಕರೂ ಸದಸ್ಯರಾಗಬಹುದು ಎಂದು ಹಿರಿಯ ಚಲನಚಿತ್ರ ನಿರ್ದೇಶಕ ಹಾಗೂ ಸಂಘದ ಉಪಾಧ್ಯಕ್ಷ ಜೋಸೈಮನ್ ತಿಳಿಸಿದರು.
ಸಂಘ ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ರಾಜ್ಯ ಎಲ್ಲೆಡೆ ಈಗ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ. ಮೈಸೂರು ಭಾಗದ ನಿರ್ದೇಶಕರೂ  ಸದಸ್ಯರಾಗುವ ಮೂಲಕ ವಿವಿಧ ಸಮಸ್ಯೆ ವೇಳೆ ಸಂಘದ ಬೆಂಬಲ ಹಾಗೂ ಕೆಲವೊಂದು ಸೌಲಭ್ಯ ಪಡೆಯಬಹುದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದಸ್ಯತ್ವ ಪಡೆಯಲು ಯಾವುದಾದರೊಂದು ಸಿನಿಮಾ ನಿರ್ದೇಶನ ಮಾಡಿರಬೇಕು, ಸೆನ್ಸಾರ್ ಮಂಡಳಿಯಿಂದ ಸೆನ್ಸಾರ್ ಆಗಿರುವ ಪ್ರಮಾಣ ಪತ್ರ ಸಲ್ಲಿಸಬೇಕು. ಕಲ್ಯಾಣ ನಿಧಿ ಶುಲ್ಕ ಸೇರಿ 25 ಸಾವಿರ ರೂ.ಶುಲ್ಕ ಪಾವತಿಸಬೇಕು. ಒಂದು ವೇಳೆ ಸದಸ್ಯರಿಗೆ ಅನಾರೋಗ್ಯವೇನಾದರೂ ಉಂಟಾದರೆ ಸಂಘ ನೀಡುವ ಶಿಫಾರಸು ಪತ್ರ ಆಧರಿಸಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅವರಿಗೆ 75 ಸಾವಿರ ರೂ. ನೆರವು ನೀಡಲಿದೆ ಎಂದರು.
ಕಾರ್ಯದರ್ಶಿ ರೇಣುಕುಮಾರ್ ಟಾಪ್‌ಸ್ಟಾರ್ ಮಾತನಾಡಿ, ದಿವಂಗತ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ ಮೊದಲಾದ ಹಿರಿಯರು ಸೇರಿ 1984ರಲ್ಲಿ ಸಂಘ ಸ್ಥಾಪಿಸಿದರು. ಅದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಪ್ರತಿಯೊಂದು ವಲಯದಲ್ಲೂ ಸದಸ್ಯರನ್ನಾಗಿಸಿಕೊಳ್ಳಲು ಸಂಘದ ಸಮಿತಿ ಪ್ರವಾಸ ಕೈಗೊಂಡಿದೆ. ಮೈಸೂರಿನ ಉಸ್ತುವಾರಿ ಪುಟ್ಟಸ್ವಾಮಿ ಅವರಿಗೆ ವಹಿಸಲಾಗಿದೆ ಎಂದು ಹೇಳಿದರು.
ಚಿತ್ರಬ್ರಹ್ಮ ಪುಟ್ಟಣ್ಣ ಅವರ ಕಣಗಾಲ್ ಗ್ರಾಮದ ಮನೆ ಸ್ಮಾರಕ ಮಾಡಬೇಕು ಎನ್ನುವ ನಿಟ್ಟಿನಲ್ಲಿ ನಾವೆಲ್ಲ ಗ್ರಾಮಕ್ಕೆ ಭೇಟಿ ನೀಡಿ ಅವರ ಮನೆ ಪುನರುಜ್ಜೀವನ ಸಾಧ್ಯತೆ ಪರಿಶೀಲಿಸಲಿದ್ದೇವೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಎನ್ನಾರ್ ಕೆ.ವಿಶ್ವನಾಥ್, ಪದಾಧಿಕಾರಿಗಳಾದ ಮಳವಳ್ಳಿ ಸಾಯಿಕೃಷ್ಣ, ಪುಟ್ಟಸ್ವಾಮಿ, ಆದಿತ್ಯ ಚಿಕ್ಕಣ್ಣ ಇತರರಿದ್ದರು.