ಎಚ್.ಡಿ.ಕೋಟೆ ಪಟ್ಟಣದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಪ್ರತಿಭಟನ ಮೆರವಣಿಗೆ ನಡೆಸಿದರು. 
ಮೈಸೂರು

ಕಬ್ಬಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹ

ವಸಂತಕುಮಾರ್ ಬಿ
ಎಚ್.ಡಿ.ಕೋಟೆ: ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಪಟ್ಟಣದಲ್ಲಿ ರಾಜ್ಯ ರೈತ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪಟ್ಟಣದ ಹಳೇ ತಾಲೂಕು ಕಚೇರಿ ಆವರಣದಿಂದ ಹೊರಟ ಪ್ರತಿಭಟನಾಕಾರರು ಬಾಪೂಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಬ್ವಿಗೆ ಟನ್‌ಗೆ 3500 ರೂ. ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ನಂತರ ಸುಮಾರು 20 ನಿಮಿಷಗಳ ಕಾಲ ರಸ್ತೆ ಸಂಚಾರ ತಡೆ ಬಳಿಕ ಮೆರವಣಿಗೆ ಮೂಲಕ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸಮಾವೇಶಗೊಂಡು ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿದರು.

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಳೆದೊಂದು ವಾರದಿಂದ ಬೆಳಗಾವಿಯಲ್ಲಿ ಲಕ್ಷಾಂತರ ರೈತರು ಬೀದಿಗಿಳಿದು ಆಹೋರಾತ್ರಿ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಹೊರಾಟ ಮಾಡುತ್ತಿದ್ದರೂ ಪ್ರತಿಭಟನೆಗೆ ರಾಜ್ಯ ಸರ್ಕಾರ ಆಗಲಿ ಕೇಂದ್ರ ಸರ್ಕಾರವಾಗಲಿ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ತೋರಿರುವುದು ರೈತ ವಿರೋಧಿ ನೀತಿ ಎಂದು ಕಿಡಿಕಾರಿದರು.

ಪ್ರತಿಭಟನೆ ಬೆಂಬಲಿಸಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ನಾನು ಸೇರಿದಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಪದಾಧಿಕಾರಿಗಳು ಬೆಳಗಾವಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇವೆ ಎಂದರು.
ಕಾರ್ಖಾನೆಗಳು ಟನ್ ಕಬ್ಬಿಗೆ 3050 ರೂ., 3100 ರೂ. ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ನಮಗೆ 3500 ರೂ. ಬೇಕೆ ಬೇಕು ಎಂದು ರೈತರು ಹೋರಾಟ ಮಾಡುತ್ತಿದ್ದಾರೆ. ರೈತರು ಕೇಳುತ್ತಿರುವುದು ನ್ಯಾಯಯುತವಾಗಿದೆ. ಕೃಷಿಗೆ ಸಂಭಂದಿಸಿದಂತೆ ರಸಗೊಬ್ಬರ, ಯಂತ್ರೋಪಕರಣಗಳು ಹಾಗೂ ಪೆಟ್ರೋಲ್, ಡಿಸೇಲ್ ಸೇರಿದಂತೆ ಎಲ್ಲ ಬೆಲೆಗಳು ಜಾಸ್ತಿ ಆಗುತ್ತಿದೆ. ಆದರೆ ಕೃಷಿ ಉತ್ಪನ್ನಗಳ ಬೆಲೆ ಮಾತ್ರ ಹೆಚ್ಚಾಗುತ್ತಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ತನ್ನ ಕೃಷಿ ನೀತಿಯನ್ನು ಮಾರ್ಪಾಡು ಮಾಡಿ ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಕಾನೂನು ತರಬೇಕು. ಅದೇ ರೀತಿ ರಾಜ್ಯ ಸರ್ಕಾರ ರೈತರ ಹಿತಕಾಯಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳು:
ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕುಗಳನ್ನು ಸರಕಾರ ವಿಶೇಷ ಪ್ರಕರಣದಡಿ ದುರಸ್ತಿ ಮತ್ತು ಪೋಡಿಗಳನ್ನು ತುರ್ತಾಗಿ ಕೈಗೆತ್ತಿಕೊಂಡು ಪೋಡಿ ಮುಕ್ತ ತಾಲೂಕುಗಳನ್ನಾಗಿ ಮಾಡಬೇಕು.ಸರ್ವೆ ಇಲಾಖೆಯು ಸಮರ್ಪಕವಾಗಿ ಕೆಲಸ ಮಾಡಬೇಕು. ವನ್ಯಜೀವಿ-ಮಾನವ ಸಂಘರ್ಷ ತಪ್ಪಿಸಬೇಕು. ಆನೆ-ಹುಲಿ ಹಾವಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನಿಗದಿಯಾಗಬೇಕು. ಗಾಯಾಳುಗಳಿಗೆ ಸಂಪೂರ್ಣ ಚಿಕಿತ್ಸೆ ಮತ್ತು ಸೂಕ್ತ ಪರಿಹಾರ ದೊರಕಿಸಬೇಕು. ಕಾಡು ಪ್ರಾಣಿ ಹಾವಳಿ ತಡೆಗೆ ಕಾಡಂಚಿನ ಗ್ರಾಮಗಳಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು. ಆನೆ, ಹಂದಿ, ನವಿಲು, ಕೋತಿ, ಚಿರತೆ ಹಾವಳಿಯಿಂದಾದ ಫಸಲು ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ಅರಣ್ಯ ಇಲಾಖೆ ರೈತರು ಬಹಳ ವರ್ಷಗಳಿಂದಲೂ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಬಾರದು. ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರು ದರಖಾಸ್ತು ಮಂಜೂರಿಗಾಗಿ ಸಲ್ಲಿಸಿರುವ ಫಾರಂ, 50, 53 ಮತ್ತು 57ರ ಅರ್ಜಿಗಳನ್ನು ಪುರಸ್ಕರಿಸಿ ಎಲ್ಲ ರೈತರಿಗೂ ಸಾಗುವಳಿ ನೀಡಬೇಕು. ಮೈಸೂರು-ಮಾನಂದವಾಡಿ ರಸ್ತೆ ಮತ್ತು ಹುಣಸೂರು-ಬೇಗೂರು ರಸ್ತೆಯನ್ನು ಉನ್ನತೀಕರಿಸಬೇಕು. ಭೂ-ಮಾಫಿಯಾ ತಾಲೂಕಿನಲ್ಲಿ ಅತ್ಯಂತ ಎಗ್ಗಿಲಿದೆ ನಡೆಯುತ್ತಿದೆ ಇದನ್ನು ನಿಲ್ಲಿಸಬೇಕು. ಕೆರೆಕಟ್ಟೆಗಳು ಮಂಗಮಾಯವಾಗಿ ಅರಣ್ಯದಲ್ಲಿ ಗಣಿಗಾರಿಕೆ ಲಂಗು ಲಗಾಮಿ ಇಲ್ಲದೆ ನಡೆಯುತ್ತಿದೆ. ಅರಣ್ಯ ಪ್ರದೇಶ ವ್ಯಾಪ್ತಿ ಹಾಗೂ ಇನ್ನಿರಿನಲ್ಲಿ ನಿಯಮಬಾಹಿರವಾಗಿ ತಲೆಯೆತ್ತಿರುವ ರೆಸಾರ್ಟ್‌ಗಳನ್ನು ಮುಚ್ಚಬೇಕು ಎಂಬ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮಹಿಳಾ ಘಕಟದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮರಂಕಯ್ಯ, ಪುಟ್ಟಣ್ಣಯ್ಯ, ಫಳನಿ ಸ್ವಾಮಿ, ಸಿಂಗೇಗೌಡ, ಶಿವಲಿಂಗಪ್ಪ, ಮಹಾಲಿಂಗು, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಜೆ.ಪಿ.ನಾಗರಾಜು, ಭೀಮನಹಳ್ಳಿ ಸೋಮೇಶ್, ಹೈರಿಗೆ ಶಿವರಾಜ್, ಚಾ. ನಂಜುಂಡ ಮೂರ್ತಿ, ಬೀರಂಬಳ್ಳಿ ಪ್ರಭಾಕರ್, ರೈತ ಸಂಘ ತಾಲೂಕು ಗೌರವಾಧ್ಯಕ್ಷ ಜಕ್ಕಳ್ಳಿ ರವಿಕುಮಾರ್, ತಾಲೂಕು ಅಧ್ಯಕ್ಷ ಮಹದೇವ ನಾಯಕ, ಪ್ರಧಾನ ಕಾರ್ಯದರ್ಶಿ ವಡ್ಡರಗುಡಿ ಬಸವರಾಜು, ಕಾರ್ಯಾಧಕ್ಷ ಚಾಮನಹಳ್ಳಿ ಮಹಾದೇವು, ಉಪಾಧ್ಯಕ್ಷರಾದ ಗೋವಿಂದೇಗೌಡ, ವೆಂಕಟೇಗೌಡ, ಶಿವಣ್ಣ, ಚಿಕ್ಕೇಗೌಡ, ರಾಜಕುಮಾರ, ಚಿಕ್ಕಬೋರೇಗೌಡ, ಟೈಗರ್ ಬ್ಲಾಕ್ ವಿನೋದ್, ಮಹಿಳಾ ಅಧ್ಯಕ್ಷೆ ದೇವಮ್ಮ, ಮುಖಂಡರಾದ ವಿ. ಪ್ರಸಾದ್ , ನಂದೀಶ್, ರವಿ ಸಿಂಡೇನಹಳ್ಳಿ , ಚೆಲುವರಾಜು , ಸಿದ್ದರಾಮೇಗೌಡ , ಯಡತೊರೆ ದೇವರಾಜು , ಶಿವಣ್ಣೇಗೌಡ, ರವಿ ಧರಣೇಂದ್ರ. ಟೀ ಗಾಡಿ ದೇವಣ್ಣ, ಮಿಲ್ ನಾಗರಾಜು ಇತರರು ಇದ್ದರು.