Successful 'Partial Knee Replacement' surgery through state-of-the-art robotic technology 
ಮೈಸೂರು

ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನದ ಮೂಲಕ ಯಶಸ್ವಿ ‘ಭಾಗಶಃ ಮೊಣಕಾಲು ಕಸಿ’ ಶಸ್ತ್ರಚಿಕಿತ್ಸೆ

ಪ್ರಮುಖ ಮುಖ್ಯಾಂಶಗಳು

  • ಮೈಸೂರಿನಲ್ಲಿ ವೈದ್ಯಕೀಯ ಮೈಲಿಗಲ್ಲು
ಮೈಸೂರು: ತಂತ್ರಜ್ಞಾನ ಮತ್ತು ವೈದ್ಯಕೀಯ ಪರಿಣತಿ ಸಮ್ಮಿಲನಗೊಂಡಾಗ ಅದ್ಭುತ ಫಲಿತಾಂಶಗಳು ಸಾಧ್ಯ ಎಂಬುದಕ್ಕೆ ಮೈಸೂರಿನ ಮಣಿಪಾಲ್ ಆಸ್ಪತ್ರೆ ಸಾಕ್ಷಿಯಾಗಿದೆ. ಮೈಸೂರಿನ 73 ವರ್ಷದ ಉದ್ಯಮಿಯೊಬ್ಬರು ಕಳೆದ ಮೂರು ವರ್ಷಗಳಿಂದ ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಸಕ್ರಿಯ ಜೀವನಶೈಲಿ ಹೊಂದಿದ್ದ ಅವರಿಗೆ ಸಣ್ಣ ಅಂತರದ ನಡಿಗೆಯೂ ದುಸ್ತರವಾಗಿತ್ತು. ಫಿಸಿಯೋಥೆರಪಿ ಮತ್ತು ಔಷಧಿಗಳು ತಾತ್ಕಾಲಿಕ ಪರಿಹಾರ ನೀಡಿದವೇ ಹೊರತು ನೋವು ಮಾತ್ರ ಕಡಿಮೆಯಾಗಿರಲಿಲ್ಲ. ನೋವು ನಿವಾರಣೆಗಾಗಿ ಅವರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದರೂ ಸಹ, ದಿನದಿಂದ ದಿನಕ್ಕೆ ನೋವು ಹೆಚ್ಚಾಗುತ್ತಲೇ ಇತ್ತು.

ನಿಖರ ತಪಾಸಣೆ - ವಿನೂತನ ಚಿಕಿತ್ಸೆ:

ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಜಾಯಿಂಟ್ ರಿಪ್ಲೇಸ್‌ಮೆಂಟ್ ಸರ್ಜನ್ ಡಾ. ಬೋಗಾದಿ ಪ್ರಶಾಂತ್ ಅವರ ತಪಾಸಣೆ ನಡೆಸಿದಾಗ, ಮೊಣಕಾಲಿನ ಒಳಗಿನ ಭಾಗ ಮಾತ್ರ ಒಸ್ಟಿಯೊ ಆರ್ಥ್ರೈಟಿಸ್‌ (ಜಂಟಿಗಳ ಮಧ್ಯದ ಅಸ್ತಿರಜ್ಜಿನ ಸವೆತದಿಂದ ಉಂಟಾಗುವ ಮೊಣಕಾಲು ನೋವು) ಹಾನಿಗೊಳಗಾಗಿರುವುದು ಪತ್ತೆಯಾಯಿತು. ಹಾಗಾಗಿ ವೈದ್ಯರು, ಇಡೀ ಮೊಣಕಾಲನ್ನು ಬದಲಿಸುವ ಬದಲು, ಕೇವಲ ಹಾನಿಗೊಳಗಾದ ಭಾಗವನ್ನು ಮಾತ್ರ ಸರಿಪಡಿಸುವ 'ಪಾರ್ಶಿಯಲ್ ನೀ ರಿಪ್ಲೇಸ್‌ಮೆಂಟ್' ಮಾರ್ಗವನ್ನು ಆಯ್ದುಕೊಂಡರು.

ರೋಬೋಟಿಕ್ ತಂತ್ರಜ್ಞಾನದ ಕೈಚಳಕ:

ಡಾ. ಬೋಗಾದಿ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ವೈದ್ಯಕೀಯ ತಂಡವು ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು. ಅವರ ಅಭಿಪ್ರಾಯದಲ್ಲಿ, ಮೈಸೂರಿನಲ್ಲಿ ರೋಬೋಟಿಕ್ ಪಾರ್ಶಿಯಲ್ ನೀ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಪರಿಚಯವಾಗಿರುವುದು ಅಸ್ಥಿ ಚಿಕಿತ್ಸಾ ಕ್ಷೇತ್ರಕ್ಕೆ ಅಪರೂಪದ ಮತ್ತು ಮಹತ್ವದ ಮೈಲಿಗಲ್ಲಾಗಿದೆ. ಮಿಲಿಮೀಟರ್ ಮಟ್ಟದ ನಿಖರತೆಯೊಂದಿಗೆ ಹಾನಿಗೊಳಗಾದ ಭಾಗವನ್ನು ಮಾತ್ರ ಗುರಿಯಾಗಿಸಿಕೊಂಡು ಶಸ್ತ್ರಚಿಕಿತ್ಸೆ ಮಾಡಿದ್ದರಿಂದ, ರೋಗಿಯ ನೈಸರ್ಗಿಕ ಮೂಳೆ, ಅಸ್ಥಿರಜ್ಜುಗಳು ಮತ್ತು ಸಹಜ ನಡಿಗೆಯನ್ನು ಯಥಾವತ್ತಾಗಿ ಕಾಪಾಡಿಕೊಳ್ಳಲು ಸಾಧ್ಯವಾಯಿತು. ರಿಯಲ್-ಟೈಮ್ 3D ಗೈಡೆನ್ಸ್ ಬಳಸಿ ಅತ್ಯಂತ ಕೌಶಲದಿಂದ ಇಂಪ್ಲಾಂಟ್ ಅಳವಡಿಸಲಾಯಿತು.
ಈ ಸುಧಾರಿತ ತಂತ್ರಜ್ಞಾನದ ಫಲವಾಗಿ, ಶಸ್ತ್ರಚಿಕಿತ್ಸೆಯಾದ ಕೇವಲ ಆರು ಗಂಟೆಗಳಲ್ಲೇ ರೋಗಿಯು ನೋವಿಲ್ಲದೆ ನಡೆಯಲು ಶಕ್ತರಾದರು. ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಇದರಲ್ಲಿ ಗಾಯಗಳು ಸಣ್ಣದಾಗಿರುತ್ತವೆ, ರಕ್ತಸ್ರಾವ ಕನಿಷ್ಠವಾಗಿರುತ್ತದೆ ಮತ್ತು ರೋಗಿಯು ಅತೀ ವೇಗವಾಗಿ ಗುಣಮುಖರಾಗುತ್ತಾರೆ.

ತಜ್ಞರ ಮಾತು:

ಈ ಯಶಸ್ವಿ ಶಸ್ತ್ರಚಿಕಿತ್ಸೆಯ ಕುರಿತು ಮಾತನಾಡಿದ ಡಾ. ಬೋಗಾದಿ ಪ್ರಶಾಂತ್, “ಸಕ್ರಿಯ ಜೀವನ ಬಯಸುವ ಹಿರಿಯ ನಾಗರಿಕರಿಗೆ ಕೇವಲ ನೋವು ನಿವಾರಣೆ ಸಾಕಾಗುವುದಿಲ್ಲ; ಅವರು ಮೊದಲಿನಂತೆಯೇ ಆತ್ಮವಿಶ್ವಾಸದಿಂದ ಓಡಾಡುವಂತಾಗಬೇಕು. ರೋಬೋಟಿಕ್ ಪಾರ್ಶಿಯಲ್ ನೀ ರಿಪ್ಲೇಸ್‌ಮೆಂಟ್ ತಂತ್ರಜ್ಞಾನವು ನೈಸರ್ಗಿಕ ಮೊಣಕಾಲಿನ ಚಲನಶೀಲತೆಯನ್ನು ಉಳಿಸಿಕೊಡುವುದಲ್ಲದೆ, ದೀರ್ಘಕಾಲದವರೆಗೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.” ಎಂದು ತಿಳಿಸಿದರು.
ಈ ಮೈಲಿಗಲ್ಲಿನ ಬಗ್ಗೆ ಮಾತನಾಡಿದ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ. ಜೆ. "ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ರೋಗಿಗಳ ಶೀಘ್ರ ಚೇತರಿಕೆ ಮತ್ತು ಉತ್ತಮ ಜೀವನಕ್ಕಾಗಿ ನಾವು ಬದ್ಧರಾಗಿದ್ದೇವೆ. ನಮ್ಮಲ್ಲಿರುವ ಸುಧಾರಿತ ರೋಬೋಟಿಕ್ ಮೂಳೆ ಶಸ್ತ್ರಚಿಕಿತ್ಸಾ ತಂತ್ರಜ್ಞಾನವು, ನಾವು ರೋಗಿಗಳಿಗೆ ಕೊಡುವ ಪ್ರಾಮುಖ್ಯತೆ ಮತ್ತು ನಿಖರವಾದ ಚಿಕಿತ್ಸೆಯನ್ನು ಇದು ತೋರಿಸುತ್ತದೆ. " ಎಂದರು.
ಈ ತಂತ್ರಜ್ಞಾನವು ಶಸ್ತ್ರಚಿಕಿತ್ಸೆಯ ನಂತರದ ಸಮಸ್ಯೆಗಳನ್ನು ಕಡಿಮೆ ಮಾಡಿ, ಮಂಡಿಯ ಸಹಜ ಚಲನೆಗೆ ಮತ್ತು ಇಂಪ್ಲಾಂಟ್‌ಗಳ ದೀರ್ಘ ಬಾಳಿಕೆಗೆ ಸಹಕಾರಿಯಾಗಿದೆ. ಮೈಸೂರಿನ ಜನತೆಗೆ ಉನ್ನತ ಮಟ್ಟದ ಸುಧಾರಿತ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.