ಪ್ಯಾರಾ ಅಥ್ಲೀಟ್ ಕೆ.ಎಸ್. ಶಿಲ್ಪಾ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. 
ಮೈಸೂರು

ನಿರಂತರ ಅಭ್ಯಾಸದಿಂದ ಯಶಸ್ಸು ಸಾಧ್ಯ:ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕದ ವಿಜೇತೆ ಶಿಲ್ಪಾ

ಪ್ರಮುಖ ಮುಖ್ಯಾಂಶಗಳು

  • ವಿಕಲಚೇತನರು ಎಂದು ಹಿಂಜರಿಕೆ ಇಲ್ಲದೇ ಆತ್ಮಸ್ಥೈರ್ಯದಿಂದ ಮುಂದುವರಿಯಬೇಕು
  • ಯಾವುದೇ ಕ್ಷೇತ್ರದಲ್ಲಾದರೂ ಸಾಧಿಸುವ ಛಲ, ನಿರಂತರ ಅಭ್ಯಾಸ ಇದ್ದಾಗ ಸಾಧನೆ ಮಾಡಲು ಸಾಧ್ಯ
ಮೈಸೂರು:ಛಲ ಬಿಡದೆ ಅಭ್ಯಾಸ ಮಾಡಿದರೆ ಯಶಸ್ಸು ಕಂಡಿತ ದೊರೆಯುತ್ತದೆ ಎಂದು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕದ ಸಾಧನೆ ಮಾಡಿದ ಪ್ಯಾರಾ ಅಥ್ಲೀಟ್ ಕೆ.ಎಸ್. ಶಿಲ್ಪಾ ಹೇಳಿದರು.
ಅಖಿಲ ನಾಮಧಾರಿ ಗೌಡ ಸಂಘದಿಂದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಾದರೂ ಸಾಧಿಸುವ ಛಲ ಇರಬೇಕು. ಅದಕ್ಕೆ ನಿರಂತರ ಅಭ್ಯಾಸ ಇದ್ದಾಗ ಸಾಧನೆ ಮಾಡಲು ಸಾಧ್ಯ. ವಿಕಲಚೇತನರು ಎಂದು ಹಿಂಜರಿಕೆ ಇಲ್ಲದೇ ಆತ್ಮಸ್ಥೈರ್ಯದಿಂದ ಮುಂದುವರಿಯಬೇಕು ಎಂದು ಹೇಳಿದರು.
ನಾಮಧಾರಿಗೌಡ ಸಂಘದ ಮಾಜಿ ಅಧ್ಯಕ್ಷ ಡಿ. ಸುಂದರ್‌ದಾಸ್ ಮಾತನಾಡಿ, ಶಿಲ್ಪಾ ಸಾಧನೆ ಸಮುದಾಯವೇ ಹೆಮ್ಮೆ ಪಡುವಂಥದ್ದು.ಅಪಘಾತದಲ್ಲಿ ಕಾಲು ಕಳೆದುಕೊಂಡರೂ ದೃಢ ಮನಸ್ಸಿನಿಂದ ಓದು ಹಾಗೂ ನಂತರದಲ್ಲಿ ಕ್ರೀಡಾ ಸಾಧನೆ ಮೂಲಕ ಯುವಜನರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಕೆ.ಎಸ್. ಶಿಲ್ಪಾ ಅವರನ್ನು ಪೂರ್ಣಕುಂಭ, ಚಂಡೆ ವಾದ್ಯದೊಂದಿಗೆ ಬೆಳ್ಳಿ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಶಿಲ್ಪಾ ಅವರಿಗೆ ಮುಂದಿನ ಕ್ರೀಡಾಭ್ಯಾಸಕ್ಕಾಗಿ ಸಂಘದಿಂದ 2.5 ಲಕ್ಷ ರೂ. ನೆರವು ನೀಡಲಾಯಿತು. ಅಲ್ಲದೇ ದಸರಾ ಉದ್ಘಾಟನೆಗೆ ಪರಿಗಣಿಸಬೇಕು ಎಂಬ ಕೋರಿಕೆಯನ್ನು ಸರ್ಕಾರದ ಮುಂದಿಟ್ಟರು.
ಸಂಘದ ಅಧ್ಯಕ್ಷ ಕೆ.ಟಿ. ಗೋವಿಂದರಾಜು ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಒಯು ಡೀನ್ ಪ್ರೊ. ರಾಮನಾಥಂ ನಾಯ್ಡು, ಶಿಲ್ಪಾ ಅವರ ತರಬೇತುದಾರ ರಾಘವೇಂದ್ರ, ಅಖಿಲ ನಾಮಧಾರಿ ಸಂಘದ ಪದಾಧಿಕಾರಿಗಳಾದ ಎಚ್.ಎಸ್. ಅಶೋಕ್, ಪರಿಮಳಾ ಶ್ಯಾಮಸುಂದರ್, ಸಿ.ಜಿ. ನಾಗರಾಜು, ಚನ್ನರೇವಣ್ಣ, ಎಂ.ಎನ್. ನಟರಾಜು, ಎಚ್.ಎಸ್. ಸುಂದರ್, ಕೆ.ಮಲ್ಲಿಕಾರ್ಜುನ, ಎನ್.ಆರ್. ಗಿರೀಶ್, ಸಿ.ಎನ್. ವೇಣುಗೋಪಾಲ್, ಕೆ.ಎಸ್. ಜಯರಾಮು, ಕೆ.ಎಸ್. ನಾಗರಾಜು, ವಲಯ ಅಧ್ಯಕ್ಷ ಎಂ.ಎನ್. ಸೋಮಶೇಖರ್, ಅಶೋಕ್, ಕೆ.ಆರ್. ಅಶೋಕ್‌ಕುಮಾರ್, ರಾಮಪ್ಪ,ಎಚ್.ಸಿ. ರತ್ನಯ್ಯ, ಎಚ್.ಎಸ. ಅಶೋಕ್, ರವಿ, ಚಂದ್ರೇಗೌಡ, ಲಕ್ಷ್ಮಣ್ಣೇಗೌಡ, ರವಿಶಂಕರ್, ಪ್ರಿಯರಂಜನ್ ದಾಸ್ ಇತರರು ಇದ್ದರು.