ನಗರದ ನಟರಾಜ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಶ್ರೀ ಚಿದಾನಂದ ಸ್ವಾಮೀಜಿ ಉದ್ಘಾಟಿಸಿದರು. ಅಮ್ಮ ರಾಮಚಂದ್ರ, ಪ್ರೊ.ಎಸ್.ಶಿವರಾಜಪ್ಪ, ಪವಿತ್ರಾ ಇದ್ದರು. 
ಮೈಸೂರು

ನಿರಂತರ ಪರಿಶ್ರಮದಿಂದ ಮಾತ್ರವೇ ಯಶಸ್ಸು ಸಾಧ್ಯ

ಅವಿನಾಶ್ ಜೈನಹಳ್ಳಿ
ಮೈಸೂರು: ಸಾಧನೆಯ ಮಾರ್ಗ ಎಂದಿಗೂ ಕಠಿಣ.ನಿರಂತರ ಪರಿಶ್ರಮದಿಂದ ಮಾತ್ರವೇ ಯಶಸ್ಸು ಸಾಧ್ಯ ಎಂದು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ಹೇಳಿದರು.
ನಗರದ ನಟರಾಜ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ನಟರಾಜ ವೈಭವಂನ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರಿ ತಲುಪಲು ಈಗಿನ ಸಣ್ಣ ಖುಷಿಗಳನ್ನು ತ್ಯಾಗ ಮಾಡಬೇಕು. ಏಕಾಗ್ರತೆಯಿಂದ ಓದಬೇಕು. ಅದರಲ್ಲಿನಿರಂತರತೆ ಕಾಯ್ದುಕೊಳ್ಳಬೇಕು ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಸುಲಭವಲ್ಲ. ಸಿನಿಮಾ ನೋಡುತ್ತಲೋ, ಪ್ರವಾಸ ಮಾಡುತ್ತಲೋ ಸಮಯ ಹಾಳು ಮಾಡದಿರಿ. ವಿಷಯಗಳನ್ನು ಕಲಿಯುವ, ಕಲಿತದ್ದನ್ನು ಸಮಾನ ಮನಸ್ಕ ಸ್ಪರ್ಧಾರ್ಥಿಗಳೊಂದಿಗೆ ಹಂಚಿಕೊಳ್ಳುವ ಕೆಲಸ ಮಾಡಬೇಕು. ಚರ್ಚಿಸಿದ್ದು ಮನಸ್ಸಿನಲ್ಲಿ ಉಳಿಯುತ್ತದೆ ಎಂದರು.
ಎಲ್ಲ ಪರೀಕ್ಷೆಗಳನ್ನು ಬರೆಯಬೇಕು. ನಾನು ಐಎಎಸ್ ಅಲ್ಲದೇ ಕೆಎಎಸ್, ಪಿಡಿಒ, ಬ್ಯಾಂಕಿಂಗ್ ಪರೀಕ್ಷೆಗಳನ್ನೂ ಬರೆದಿದ್ದೆ. ಹೆಚ್ಚು ಪರೀಕ್ಷೆ ಬರೆದಷ್ಟೂ ಅನುಭವ ಹೆಚ್ಚಾಗುತ್ತದೆ. ಪರೀಕ್ಷಾ ಭಯ ಮಾಯವಾಗುತ್ತದೆ. ಆತ್ಮವಿಶ್ವಾಸ ಹೆಚ್ಚಲು ಅಣಕು ಪರೀಕ್ಷೆಗಳನ್ನು ನಿರಂತರವಾಗಿ ತೆಗೆದುಕೊಳ್ಳಬೇಕು. ಸೀಮಿತ ಪುಸ್ತಕಗಳನ್ನು ಹೆಚ್ಚು ಬಾರಿ ಓದಬೇಕು. ಆಗ ಸರ್ಕಾರಿ ಹುದ್ದೆ ಪಡೆಯಲು ಸಾಧ್ಯ ಎಂದು ಹೇಳಿದರು.
ಪೋಷಕರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರಬಾರದು. ಒತ್ತಡದಿಂದ ಯಾವ ವಿದ್ಯಾರ್ಥಿಯೂ ಯಶಸ್ಸು ಪಡೆಯಲಾಗದು. ಗ್ರಾಮೀಣ ಭಾಗದವರು ಕೀಳರಿಮೆ ಬಿಡಬೇಕು. ಕೌಶಲ ಆಧರಿತ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.
ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಡಿಡಿಪಿಐ ಉದಯಕುಮಾರ್, ಜಾನಪದ ಕಲಾವಿದ ಅಮ್ಮ ರಾಮಚಂದ್ರ, ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಪ್ರಾಂಶುಪಾಲರಾದ ಪವಿತ್ರಾ ಪಾಲ್ಗೊಂಡಿದ್ದರು.