ಮಾನಸಗಂಗೋತ್ರಿಯಲ್ಲಿ ಆಯೋಜಿಸಿದ್ದ ‘ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ’ಯನ್ನು ಚಂದ್ರಪ್ರಭ ಉದ್ಘಾಟಿಸಿದರು. ಪ್ರೊ.ಎನ್.ಕೆ.ಲೋಕನಾಥ್, ಎಂ.ಕೆ.ಸವಿತಾ, ಭಾರತಿ ಚಂದ್ರಪ್ರಭ, ಪ್ರೊ.ಸಿ.ಗುರುಸಿದ್ದಯ್ಯ ಇತರರು ಇದ್ದರು. 
ಮೈಸೂರು

ಕಲಿಕೆಗೆ ಒತ್ತು ನೀಡಿದರೆ ಮಾತ್ರ ಯಶಸ್ಸು ಸಾಧ್ಯ: ಹಾಸ್ಯ ನಟ ಚಂದ್ರಪ್ರಭ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ಕಲಿಯುವ ವಯಸ್ಸಿನಲ್ಲಿ ವಿದ್ಯೆಯನ್ನು ನಿರ್ಲಕ್ಷಿಸಿದರೆ, ಅದನ್ನು ಮರಳಿ ಸಂಪಾದಿಸಲು ಅಸಾಧ್ಯ
  • ಯಾವ ವಯಸ್ಸಿನಲ್ಲಿ ಏನೇನು ಮಾಡಬೇಕು ಅದನ್ನು ಮಾಡಿದರೆ ಅದಕ್ಕೆ ಬೆಲೆ
ಮೈಸೂರು: ಬದುಕಿನಲ್ಲಿ ಹಣ, ಆಸ್ತಿ ಎಲ್ಲವನ್ನೂ ಯಾವಾಗಬೇಕಿದ್ದರೂ ಸಂಪಾದಿಸಬಹುದು. ಆದರೆ ವಿದ್ಯೆಯನ್ನು ಕಲಿಯುವ ವಯಸ್ಸಿನಲ್ಲಿ ಕಲಿಯಬೇಕು ಎಂದು ಕಿರುತೆರೆ ಹಾಸ್ಯ ಕಲಾವಿದ ಚಂದ್ರಪ್ರಭ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದಿಂದ ಮಾನಸ ಗಂಗೋತ್ರಿಯ ಇಎಂಎಂಆರ್‌ಸಿಯಲ್ಲಿ ಆಯೋಜಿಸಿದ್ದ 2025-26ನೇ ಶೈಕ್ಷಣಿಕ ಸಾಲಿನ ವಿಶ್ವವಿದ್ಯಾನಿಲಯ ಮಟ್ಟದ ಎರಡು ದಿನಗಳ ಅಂತರ ಕಾಲೇಜು ‘ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸ್ಪರ್ಧೆ’ ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ತಂದೆಗೆ ನಾನು ಹೆಚ್ಚು ಓದಿ ವಿದ್ಯಾವಂತನಾಗಬೇಕೆಂಬ ಆಸೆಯಿತ್ತು. ಆದರೆ ನನಗೆ ಕಲಿಕೆಯಲ್ಲಿ ಆಸಕ್ತಿ ಬರಲಿಲ್ಲ. ಎಸ್‌ಎಸ್‌ಎಲ್‌ಸಿ ಅರ್ಧಕ್ಕೆ ಬಿಟ್ಟ ಫಲವಾಗಿ, ನನ್ನ ತಂದೆ ಗಾರೆ ಕೆಲಸಕ್ಕೆ ಸೇರಿಸಿದರು. ಕೆಲಸಕ್ಕೆ ಹೋಗುವಾಗ ಕೆಲವೊಮ್ಮೆ ಶಾಲೆಗೆ ಹೋಗುವವರನ್ನು ನೋಡಿ ಆಸೆಯಾಗುತ್ತಿತ್ತು. ನಾನು ಶಿಕ್ಷಣ ಪಡೆಯದಿದ್ದಕ್ಕೆ ನನ್ನ ತಂದೆ ತುಂಬಾ ನೊಂದಿದ್ದರು ಎಂದು ಬೇಸರಪಟ್ಟರು.
ಓದಲಿಲ್ಲ ಎಂಬ ಕೊರಗು ಇವತ್ತಿಗೂ ನನ್ನನ್ನು ಗಾಢವಾಗಿ ಕಾಡುತ್ತಿದೆ. ಕಲೆ ನಂಬಿ ಬದುಕಿದವನಿಗೆ, ಕಲೆ ಕಲಾವಿದನ ಪಟ್ಟ ನೀಡಿ, ಕೀರ್ತಿ, ಮನ್ನಣೆ ದೊರಕಿಸಿದೆ. ಒಂದು ರಿಯಾಲಿಟಿ ಶೋ ನನ್ನ ಬದುಕು ಕಟ್ಟಿಕೊಳ್ಳಲು ಸಾಕ್ಷಿಯಾಯಿತು. ನನ್ನ ತಂದೆ ಇವತ್ತಿಗೆ ಇಲ್ಲ. ಅವರಿದ್ದಿದ್ದರೆ ಬಹಳ ಹೆಮ್ಮೆ ಪಡುತ್ತಿದ್ದರು ಎಂದು ಭಾವುಕರಾದರು.
ಯಾವ ವಯಸ್ಸಿನಲ್ಲಿ ಏನೇನು ಮಾಡಬೇಕು ಅದನ್ನು ಮಾಡಿದರೆ ಅದಕ್ಕೆ ಬೆಲೆ. ಕಲಿಯುವ ವಯಸ್ಸಿನಲ್ಲಿ ವಿದ್ಯೆಯನ್ನು ನಿರ್ಲಕ್ಷಿಸಿದರೆ, ಅದನ್ನು ಮರಳಿ ಸಂಪಾದಿಸಲು ಅಸಾಧ್ಯ. ಹಾಗಾಗಿ ಎಲ್ಲರೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕಲಿಕೆಯಲ್ಲಿ ತೊಡಗಬೇಕು. ಅದರಿಂದ ಯಶಸ್ಸು ಸಾಧ್ಯ ಎಂದರು.
2006 ರಲ್ಲಿ ಊರು ಬಿಟ್ಟು ಮೈಸೂರಿಗೆ ಬಂದು ಕುಕ್ಕರಹಳ್ಳಿ ಕೆರೆ ದಂಡೆಯ ಮೇಲೆ ಕುಳಿತು ಬದುಕಿನ ಬಗ್ಗೆ ಯೋಚಿಸುವಾಗ, ರಂಗಾಯಣದಲ್ಲಿನ ಶಬ್ಧ ನನ್ನನ್ನು ಕೈ ಬೀಸಿ ಕರೆಯಿತು. ಅಲ್ಲಿಯವರೆಗೂ ಜೀವನದಲ್ಲಿ ಯಾವುದೇ ಕನಸಿಲ್ಲದವನಿಗೆ ಕಲಾವಿದನಾಗುವ ತುಡಿತವನ್ನು ನನ್ನಲ್ಲಿ ಹುಟ್ಟಿಸಿತು. ಈಗ ಆ ದಾರಿಯಲ್ಲಿ ನಡೆದಿರುವೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ಎಂ.ಕೆ. ಸವಿತಾ ಮಾತನಾಡಿ, ಕಲೆ ಬದುಕಿಗೆ ಭೂಷಣ. ಅದರ ಹೊರತು ಸೌಂದರ್ಯ, ವ್ಯಕ್ತಿ, ಸಂಪತ್ತು ಮುಖ್ಯವಲ್ಲ. ಸಂಸ್ಕಾರವಿದ್ದರೆ ಮಾತ್ರ ಶಿಕ್ಷಿತನಾಗಲು ಸಾಧ್ಯ. ಕಲೆ ನಂಬಿದ ಕಲಾವಿದನಿಗೆ ಯಾವಾಗಲೂ ಬೆಲೆ, ಗೌರವವಿರುತ್ತದೆ. ಪ್ರತಿಯೊಬ್ಬರಲ್ಲೂ ವಿಶಿಷ್ಟವಾದ ಕಲೆಯಿರುತ್ತದೆ ಅದನ್ನು ಗುರುತಿಸಿಕೊಂಡು ಶ್ರೀಮಂತಗೊಳಿಸಿಕೊಳ್ಳಬೇಕು. ಶೈಕ್ಷಣಿಕವಾಗಿ ಕಲೆಯ ಜತೆಗೆ ನಮ್ಮನ್ನು ನಾವು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಜರುಗಿದವು. ಸ್ಪರ್ಧೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಭಾರತಿ ಚಂದ್ರಪ್ರಭ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ನಿರ್ದೇಶಕ ಪ್ರೊ.ಸಿ.ಗುರುಸಿದ್ದಯ್ಯ ಇತರರು ಇದ್ದರು