ಮೂಗೂರಿನ ಕೆಪಿಎಸ್ ಶಾಲೆಯ ಸರ್ಕಾರಿ ಪಿಯು ಕಾಲೇಜು ವಿಭಾಗದಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ, ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ರೈಸ್ ಮಿಲ್ ಇಂಡಸ್ಟ್ರಿ ಮಾಲೀಕರೂ ಆದ ಉದ್ಯಮಿ ಮೂಗೂರು ಸುಧಾಕರ್ ಮಾತನಾಡಿದರು. ಪ್ರಾಂಶುಪಾಲ ಎಂ.ರಾಚಯ್ಯ, ಉಪ ಪ್ರಾಂಶುಪಾಲ ಸಿ. ಪುಟ್ಟಸ್ವಾಮಿ, ಜಯಂತ್, ಸೋಮಣ್ಣ, ನಂಜಪ್ಪ, ಬಸವಣ್ಣ, ಮರಿಸ್ವಾಮಿ, ಗೌರೀಶ್, ಉಪನ್ಯಾಸಕರು ಇದ್ದರು.
ಮೂಗೂರು: ವಿದ್ಯೆ ಇಲ್ಲದ ಯಶಸ್ಸು ಅಸಾಧ್ಯ, ಜ್ಞಾನ ಉತ್ತಮವಾಗಿದ್ದರೆ ಯಾವ ಸಮಾಜವೂ ನಿಮ್ಮನ್ನು ತುಳಿಯಲು ಸಾಧ್ಯವಿಲ್ಲ ಎಂದು ನಂಜನಗೂಡು ಜೆಎಸ್‌ಎಸ್ ಪಾಲಿಟೆಕ್ನಿಕ್, ಸಿವಿಲ್ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಉಪನ್ಯಾಸಕ ಕೆ.ಪಿ.ವಿಜಯ್‌ಕುಮಾರ್ ಹೇಳಿದರು.
ಮೂಗೂರಿನ ಕೆಪಿಎಸ್ ಶಾಲೆಯ ಸರ್ಕಾರಿ ಪಿಯು ಕಾಲೇಜು ವಿಭಾಗದಲ್ಲಿ ನಡೆದ ಪ್ರಸಕ್ತ ಸಾಲಿನ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ, ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನವೇ ವ್ಯಕ್ತಿತ್ವ ನಿರ್ಮಾಣದ ಅಡಿಪಾಯ ಶಿಸ್ತುಬದ್ಧ ಶಿಕ್ಷಣ, ಸಮಯಪಾಲನೆ, ಉತ್ತಮ ಮೌಲ್ಯಗಳು ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ರೂಢಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸುವುದರ ಜತೆಗೆ ಸಮಾಜಕ್ಕೂ ಒಳ್ಳೆಯದು ಮತ್ತು ಉತ್ತಮ ಆದರ್ಶ ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಉದ್ಯಮಿ ಮೂಗೂರು ಸುಧಾಕರ್ ಮಾತನಾಡಿ, ಓದುವುದನ್ನೇ ಗುರಿಯನ್ನಾಗಿಸಿಕೊಂಡು ಭವಿಷ್ಯತ್ತಿನಲ್ಲಿ ಉತ್ತಮ ಸಾಧನೆ ಮಾಡುವುದರ ಜತೆಗೆ ತಂದೆ-ತಾಯಿ ಹಾಗೂ ಗುರು ಹಿರಿಯರಿಗೆ ಗೌರವ ನೀಡಿ, ಶೈಕ್ಷಣಿಕ ಪಯಣದಲ್ಲಿ ಗುರುಗಳ ಮಾರ್ಗದರ್ಶನ ಅವರ ಪ್ರೋತ್ಸಾಹ ಯಶಸ್ಸಿಗೆ ನಾಂದಿಯಾಗಲಿದೆ ಶುಭ ಹಾರೈಸಿದರು.
ದ್ವಿತೀಯ ಪಿಯುಸಿಯಲ್ಲಿ 555 ಅಂಕ ಪಡೆದ ಬಿ .ಸೌಮ್ಯಾಳಿಗೆ 10 ಸಾವಿರ ರೂ. ನಗದು ಪುರಸ್ಕಾರವನ್ನು ಪ್ರತಿ ವರ್ಷದಂತೆ ಈ ಬಾರಿಯೂ ರೈಸ್ ಮಿಲ್ ಇಂಡಸ್ಟ್ರಿ ಮಾಲೀಕರೂ ಆದ ಉದ್ಯಮಿ ಮೂಗೂರು ಸುಧಾಕರ್ ನೀಡಿ ಸನ್ಮಾನಿಸಿದರು.
ಮೂಗೂರು ಗೆಳೆಯರ ಬಳಗದ ವತಿಯಿಂದ ಕಲಾ, ವಾಣಿಜ್ಯ, ಮತ್ತು ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹದೇವ ಶೆಟ್ಟಿರು ಪುರಸ್ಕಾರ ನೀಡಿದರು.
ಈ ಸಂದರ್ಭದಲ್ಲಿ ಕೆಪಿಎಸ್ ಶಾಲೆಯ ಉಪಾಧ್ಯಕ್ಷ ಎಂ.ಎನ್.ಸೋಮಣ್ಣ, ಕಾಲೇಜು ಸಿಬಿಸಿ ಅಧ್ಯಕ್ಷ ಎಂ.ಜಯಂತ್, ಕಾಲೇಜು ಪ್ರಾಂಶುಪಾಲ ಎಂ.ರಾಚಯ್ಯ, ಉಪ ಪ್ರಾಂಶುಪಾಲ ಸಿ.ಪುಟ್ಟಸ್ವಾಮಿ, ಗೆಳೆಯರ ಬಳಗದ ನಂಜಪ್ಪ, ಬಸವಣ್ಣ, ಎಂ.ಪಿ.ಮಹದೇವ ಶೆಟ್ಟರು, ಮರಿಸ್ವಾಮಿ, ಗೌರೀಶ್, ಮಹದೇವ, ದಿಲೀಪ್‌ಕುಮಾರ್, ಕಾಲೇಜಿನ ಉಪನ್ಯಾಸಕ ವೃಂದ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.