ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ.ಕುಮಾರ ಉದ್ಘಾಟಿಸಿದರು. ಡಾ.ಪಿ.ನಾಗಭೂಷಣ್, ಡಾ.ರೇಚಣ್ಣ, ಸತೀಶ್‌ಕುಮಾರ್, ಎಂ.ಪಾರ್ವತಿ ಇತರರಿದ್ದರು.
ಮೈಸೂರು:ವಿದ್ಯಾರ್ಥಿಗಳು ಸವಾಲುಗಳನ್ನು ಮತ್ತು ಎದುರಾಗುವ ತೊಂದರೆಗಳನ್ನು ಶ್ರದ್ಧೆಯಿಂದ ಸ್ವೀಕರಿಸಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ಬಿಸಿಎ ಟೆಕ್ ಫೆಸ್ಟ್-ಪ್ರವಿಧಿ’ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಗುರಿಯಷ್ಟೇ ದಾರಿಯೂ ಮುಖ್ಯ. ನಿರಂತರ ಪರಿಶ್ರಮವಿದ್ದರೆ ಯಶಸ್ಸು ಸಾಧ್ಯ. ವಿದ್ಯಾರ್ಥಿ ಜೀವನ ಸುಂದರವಾದದ್ದು. ಸಮಯಕ್ಕೆ ಹೆಚ್ಚು ಬೆಲೆ ನೀಡಿದರೆ ಸಾಧನೆ ಮಾಡುವುದಕ್ಕೆ ಸಾಧ್ಯ ಎಂದು ತಿಳಿಸಿದರು.
ಭವಿಷ್ಯದ ಸಂದರ್ಭದಲ್ಲಿ ದತ್ತಾಂಶವೇ ನಿಜವಾದ ಸಂಪತ್ತಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪುಸ್ತಕ ಓದುವುದನ್ನು ರೂಢಿಸಿಕೊಳ್ಳಿ ಎಂದರು.
ಅಲಹಾಬಾದ್ ಐಐಐಟಿ ವಿಶ್ರಾಂತ ಕುಲಪತಿ ಡಾ.ಪಿ.ನಾಗಭೂಷಣ್ ಮಾತನಾಡಿ, ಶಿಕ್ಷಣದ ನಿಜವಾದ ಉದ್ದೇಶ ಕೇವಲ ಪರೀಕ್ಷೆ ತೆಗೆದುಕೊಳ್ಳುವುದಲ್ಲ, ಅನುಭವಾತ್ಮಕ ಕಲಿಕೆ ಮತ್ತು ವಿಷಯದ ಆಳವಾದ ಅರ್ಥಮಾಡಿಕೊಳ್ಳುವಿಕೆಯನ್ನು ಬೆಳೆಸುವುದು ಬಹುಮುಖ್ಯ ಎಂದರು.
ಸಮಸ್ಯೆ ಪರಿಹರಿಸುವ ಕೌಶಲ ಅತ್ಯಗತ್ಯ. ಭವಿಷ್ಯದ ಸಂದರ್ಭದಲ್ಲಿ ಗಣಕ ವಿಜ್ಞಾನವನ್ನು ಶ್ರದ್ಧೆಯಿಂದ ಕಲಿಯಿರಿ. ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದು ತಿಳಿಸಿದರು.
ಹಿರಿಯ ಸಿಸ್ಟಮ್ ಇಂಜಿನಿಯರ್ ಆದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಎಂ.ಪಾರ್ವತಿ ಮಾತನಾಡಿ, ನಾವು ಬೇರೆಯವರಿಗಿಂತ ಭಿನ್ನವಾಗಿ ಕಲಿಕೆಯನ್ನು ರೂಢಿಸಿಕೊಂಡಿದ್ದರೆ ಹೆಚ್ಚೆಚ್ಚು ಉದ್ಯೋಗಗಳು ದೊರೆಯುತ್ತವೆ. ತಂತ್ರಜ್ಞಾನವನ್ನು ಎಚ್ಚರಿಕೆಯಿಂದ ಬಳಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಜೀವನದಲ್ಲಿ ನೇತ್ಯಾತ್ಮಕ ಆಲೋಚನೆಗಳು ಬೇಕಿಲ್ಲ, ಇತ್ಯಾತ್ಮಕ ಆಲೋಚನೆಗಳು ಮುಖ್ಯ ಎಂದು ತಿಳಿಸಿಕೊಟ್ಟರು. ಉತ್ತಮ ನೈತಿಕತೆ ಮತ್ತು ಮೌಲ್ಯಗಳು ಬಹುಮುಖ್ಯ ಎಂದು ತಿಳಿಸಿಕೊಟ್ಟರು. ಪ್ರಾಂಶುಪಾಲ ಡಾ.ರೇಚಣ್ಣ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಸತೀಶ್‌ಕುಮಾರ್ ಇತರರಿದ್ದರು.