ಬೆಟ್ಟದಪುರದ ಎಸ್‌ಎಂಎಸ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. 
ಮೈಸೂರು

ಛಲದಿಂದ ಯಶಸ್ಸು ಸಾಧಿಸಲು ಸಾಧ್ಯ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಬಿಇಒ ರವಿಪ್ರಸನ್ನ ಅಭಿಪ್ರಾಯ
  • ಎಸ್‌ಎಂಎಸ್ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ
ಬೆಟ್ಟದಪುರ: ಸಾಧನೆಯ ಹಾದಿ ಸುಗಮವಲ್ಲ. ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ ಎಂಬುದಕ್ಕೆ ಎಸ್‌ಎಂಎಸ್ ವಿದ್ಯಾರ್ಥಿಗಳು ಮಾದರಿಯಾಗಿ, ಉತ್ತಮ ಫಲಿತಾಂಶ ಕೊಟ್ಟಿದ್ದಾರೆ ಎಂದು ಪಿರಿಯಾಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ರವಿಪ್ರಸನ್ನ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಸ್‌ಎಂಎಸ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರಿಯೆಗಳಿಗೆ ಪೂರಕವಾಗಿ ಪ್ರತಿಕ್ರಿಯೆ ಇರುತ್ತದೆ. ಅದೇ ರೀತಿ ನಾವು ಅಪೇಕ್ಷೆ ಪಟ್ಟ ಫಲಿತಾಂಶವನ್ನು ಪಡೆಯಲು ವೇಗವಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕಾಗಿದೆ. ಯಾವ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ವಿದ್ಯೆಯೊಂದು ಇದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದರು.
ಲೋಕೋಪಯೋಗಿ ಇಲಾಖೆಯ ಎಇಇ ಯೋಗಾನಂದ ಮಾತನಾಡಿ, ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಡುವಲ್ಲಿ ವಿದ್ಯಾಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ವಿ ಮಂಜುನಾಥ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭಗೊಂಡ ನಮ್ಮ ಸಂಸ್ಥೆ ಹಂತ ಹಂತವಾಗಿ ಬೆಳೆಯುವುದರ ಜತೆಗೆ ಶೇ.100 ಫಲಿತಾಂಶವನ್ನು ನೀಡುವ ಮೂಲಕ ಮುನ್ನಡೆಯುತ್ತಿದೆ. ಸಂಸ್ಥೆಯ ಅಭಿವೃದ್ಧಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಉಪನ್ಯಾಸಕರು, ಶಿಕ್ಷಕರು ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನಮ್ಮ ಸಂಸ್ಥೆ ಮೂಡಿಗೇರಿಸಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ, ಸಂಸ್ಥೆಗೆ ಶೇ.100 ಫಲಿತಾಂಶ ಕೊಟ್ಟ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವೈದ್ಯಾಧಿಕಾರಿ ಡಾ.ಪೂಜಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಡಿ ಮಂಜುನಾಥ್, ಇಶಾ ಫೌಂಡೇಶನ್ ಸ್ವಯಂ ಸೇವಕಿ ಸುಜಾತಾ, ಸಂಸ್ಥೆಯ ಕಾರ್ಯದರ್ಶಿ ಎ.ವಿ. ಛಾಯಾ, ಪ್ರಾಂಶುಪಾಲ ರಾಜು, ಮುಖ್ಯಶಿಕ್ಷಕರಾದ ಎಸ್.ಆರ್ ವೆಂಕಟೇಶ್, ಕುಮಾರ್, ಉಪನ್ಯಾಸಕರು, ಶಿಕ್ಷಕರು ಇದ್ದರು.