ಜಯಲಕ್ಷ್ಮೀಪುರಂನ ಎಸ್.ಬಿ.ಆರ್.ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮವನ್ನು ಮೈವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ. ಕೆ.ಎಂ. ಮಂಟೇಲಿಂಗು ಉದ್ಘಾಟಿಸಿದರು. ಪ್ರೊ.ಆರ್.ಮಹೇಶ್, ಡಾ.ಬಿ.ಆರ್.ಜಯಕುಮಾರಿ, ಡಾ.ಪಿ.ಜಿ.ಪುಷ್ಪರಾಣಿ, ಶ್ರುತಿ ಪೂಣಚ್ಚ ಇತರರಿದ್ದರು 
ಮೈಸೂರು

ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಕೆ.ಎಂ.ಮಂಟೇಲಿಂಗು ಅಭಿಪ್ರಾಯ
  • ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮ
  • ಗುರಿಯಿಲ್ಲದ ಜೀವನ ದಿಕ್ಸೂಚಿ ಇಲ್ಲದ ಹಡಗಿನಂತೆ. ನಿಮ್ಮ ಸಮಯ ವ್ಯರ್ಥವಾಗಲು ಗುರಿಯಿಲ್ಲದಿರುವುದೇ ಮುಖ್ಯ ಕಾರಣ
ಮೈಸೂರು: ಸಾಮಾನ್ಯ ಬುದ್ಧಿವಂತಿಕೆಯುಳ್ಳ ವಿದ್ಯಾರ್ಥಿಯೂ ಕಠಿಣ ಪರಿಶ್ರಮದಿಂದ ದೊಡ್ಡ ಯಶಸ್ಸು ಗಳಿಕೆ ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಕೆ.ಎಂ.ಮಂಟೇಲಿಂಗು ಅಭಿಪ್ರಾಯಪಟ್ಟರು.
ಜಯಲಕ್ಷ್ಮೀಪುರಂನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಉತ್ತಮವಾದುದನ್ನೇ ಬಯಸುತ್ತಾನೆ. ಜೀವನದಲ್ಲಿ ಮೊದಲು ಸ್ಪಷ್ಟವಾದ ಗುರಿಯನ್ನು ಹೊಂದಿರಿ. ಗುರಿಯಿಲ್ಲದ ಜೀವನ ದಿಕ್ಸೂಚಿ ಇಲ್ಲದ ಹಡಗಿನಂತೆ. ನಿಮ್ಮ ಸಮಯ ವ್ಯರ್ಥವಾಗಲು ಗುರಿಯಿಲ್ಲದಿರುವುದೇ ಮುಖ್ಯ ಕಾರಣ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಿಂಹವು ಕಾಡಿನಲ್ಲಿ ಅತ್ಯಂತ ಬಲಶಾಲಿ ಪ್ರಾಣಿಯಲ್ಲದಿದ್ದರೂ ತನ್ನ ವಿಶಿಷ್ಟ ಮನೋಭಾವದಿಂದ ಕಾಡಿನ ರಾಜನಾಗಿದೆ. ಶಿಕ್ಷಣವು ನಿಮಗೆ ಅವಕಾಶದ ಬಾಗಿಲನ್ನು ತೆರೆದರೆ, ನಿಮ್ಮ ಸಕಾರಾತ್ಮಕ ಮನೋಭಾವವು ಆ ಬಾಗಿಲು ಸದಾ ತೆರೆದಿರುವಂತೆ ಮಾಡುತ್ತದೆ. ಸೋಲು ಮತ್ತು ತಿರಸ್ಕಾರಗಳು ಸಹಜ. ಆದರೆ, ಛಲ ಬಿಡದೆ ನಮ್ಮ ಗುರಿಯನ್ನು ಸಾಧಿಸಬೇಕು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಬಿಮ್ಸ್‌ನ ಮುಖ್ಯಸ್ಥ, ಯೂನಿವರ್ಸಿಟಿ ಕೆರಿಯರ್ ಹಬ್‌ನ ಸಂಯೋಜಕ ಪ್ರೊ.ಆರ್. ಮಹೇಶ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಅಂಕಗಳ ಜತೆಗೆ ಮೃದು ಕೌಶಲ, ಸಂವಹನ ಕಲೆ ಮತ್ತು ಹೊಂದಾಣಿಕೆಯ ಗುಣಗಳು ಅಗತ್ಯವಾಗಿದೆ.
 ತಾಂತ್ರಿಕವಾಗಿ ಮತ್ತು ವೈಚಾರಿಕವಾಗಿ ಸದೃಢರಾಗಲು ಕಠಿಣ ಪರಿಶ್ರಮಬೇಕು. ಇಂದಿನ ಜೆನ್-ಝೆಡ್ (ಜೆನ್-ಜಿ) ತಲೆಮಾರಿನ ವಿದ್ಯಾರ್ಥಿಗಳು ಯಂತ್ರಗಳೊಂದಿಗೆ ಸಂವಹನ ನಡೆಸಲು ಇಷ್ಟಪಡುತ್ತಾರೆ. ಆದರೆ, ವೃತ್ತಿಜೀವನದಲ್ಲಿ ಜನರೊಂದಿಗೆ ಬೆರೆಯುವ ಕಲೆ ಮುಖ್ಯ. ಸಮಸ್ಯೆಗಳನ್ನು ಬಗೆಹರಿಸುವ ಕೌಶಲ ಮೈಗೂಡಿಸಿಕೊಳ್ಳಬೇಕು ಎಂದರು
 ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ ಮಾತನಾಡಿ, ಸಮಯ ಬಹಳ ಅಮೂಲ್ಯವಾದದ್ದು, ಪರಿಶ್ರಮ, ಶಿಸ್ತು, ಸಮಯಪ್ರಜ್ಞೆ, ಬದ್ಧತೆ ಇದ್ದವರು ಮಾತ್ರ ಗುರಿ ಮುಟ್ಟಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಶಿಸ್ತಿನಿಂದ ಮುನ್ನಡೆಯಬೇಕು. ಸಿಕ್ಕ ಅವಕಾಶಗಳನ್ನು ಯಾರು ಸಮರ್ಥವಾಗಿ ಬಳಸಿಕೊಳ್ಳುತ್ತಾರೋ ಅವರು ಮಾತ್ರ ಜೀವನದಲ್ಲಿ ಗೆಲ್ಲಲು ಸಾಧ್ಯ ಎಂದು ತಿಳಿಸಿದರು.
ವಿದ್ಯಾರ್ಥಿ ಅಭಿವೃದ್ಧಿ ಘಟಕದ ಸಂಚಾಲಕಿ ಡಾ.ಪಿ.ಜಿ.ಪುಷ್ಪರಾಣಿ, ಪರೀಕ್ಷಾ ನಿಯಂತ್ರಣ ಅಧಿಕಾರಿಯಾದ ಶ್ರುತಿ ಪೂಣಚ್ಚ, ಪ್ರಾಧ್ಯಾಪಕ ಡಾ.ಎಚ್.ಆರ್.ತಿಮ್ಮೇಗೌಡ, ಸಹಾಯಕ ಪ್ರಾಧ್ಯಾಪಕರಾದ ಸುನಿಲ್ ಇದ್ದರು.
 .