ಕಿರುರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯನ್ನು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಉದ್ಘಾಟಿಸಿದರು.ಪ್ರೊ.ಸಿ.ನಾಗಣ್ಣ, ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಡಾ.ಎಂ.ಡಿ. ಸುದರ್ಶನ್ ಇದ್ದರು.
- ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಪ್ರಯೋಗ
- ಕುವೆಂಪು ಆದರ್ಶ ನಮಗೆ ದಾರಿದೀಪವಾಗಲಿ
- ಕುವೆಂಪು ಅವರ ಆದರ್ಶ ನಮಗೆಲ್ಲ ಬೆಳಕಾಗಲಿ
ಮೈಸೂರು: ಕುವೆಂಪು ಅವರ ವ್ಯಕ್ತಿತ್ವ ಬಹಳ ದೊಡ್ದದು. ಅವರ ವಿಚಾರಧಾರೆಗಳು ಸರ್ವವ್ಯಾಪಿ ಹಾಗೂ ಸಮಗ್ರವಾದುದು ಎಂದು ಸಾಹಿತಿ ಪ್ರೊ.ಸಿ.ನಾಗಣ್ಣ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡಿದರು.
ಕುವೆಂಪು ಅವರು ಆಧ್ಯಾತ್ಮಿಕ, ಭೌತಿಕ, ಲೌಕಿಕ, ಧಾರ್ಮಿಕ, ಸಾಮಾಜಿಕ, ವೈಜ್ಞಾನಿಕ, ಸಾಂಸಾರಿಕ, ಸನ್ಯಾಸಿಕ, ರಾಷ್ಟ್ರೀಯ ಜಾಗತಿಕ, ಶೈಕ್ಷಣಿಕ, ರಾಜಕೀಯ, ಪ್ರೇಮ, ನೀತಿ, ನಿಷ್ಠೆ, ನಾಡು-ನುಡಿಯಂತಹ ನೂರಾರು ವಿಷಯಗಳನ್ನು ನಮಗೆ ಸಾಹಿತ್ಯದ ಮೂಲಕ ನೀಡಿದ್ದಾರೆ. ಅವರು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ಸಾಹಿತ್ಯವನ್ನು ಓದಬೇಕು ಎಂದು ಹೇಳಿದರು.
ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಪ್ರಯೋಗ ಮಾಡಿದವರು. ಪ್ರಕೃತಿಯನ್ನು ಪ್ರಥಮ ಗುರು ಎಂದು ಸ್ವೀಕರಿಸಿದ್ದರು. ಬಾಲ್ಯದಿಂದಲೇ ಅನೇಕ ಪದ್ಯ ಬರೆಯಲು ಪ್ರಾರಂಭಿಸಿದರು. ಅವರು ಶಾಂತಿ ನೆಮ್ಮದಿ ನೆಲೆಸಲು ಬೇಕಿರುವ ಮೂಲ ತತ್ವ ನೀಡಿದ್ದಾರೆ. ಪ್ರತಿಯೊಬ್ಬರು ಅವರ ತತ್ವ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗಾಗಿ ವಿಶಾಲವಾದ ಸಾಹಿತ್ಯ ನೀಡಿದ್ದಾರೆ. ಅವುಗಳನ್ನೆಲ್ಲ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಸಂವಿಧಾನವನ್ನು ಅಂಬೇಡ್ಕರ್ ಅವರು ಹೇಗೆ ನಮಗೆ ನೀಡಿದ್ದಾರೆ. ಹಾಗೆಯೇ ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ನೀತಿಸಂಹಿತೆ ನೀಡಿದ್ದಾರೆ. ಅದನ್ನು ನಾವು ನಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಳ್ಳಬೇಕು. ಅವರ ಬರೆದಿರುವಂತಹ ಸಾಹಿತ್ಯವನ್ನು ನಾವು ಹೆಚ್ಚು ಓದಬೇಕು.
ಕಾವ್ಯಗಳ ಪಠಣ ಮಾಡಬೇಕು. ಅವರ ಆದರ್ಶ ನಮಗೆ ದಾರಿದೀಪವಾಗಬೇಕು ಎಂದರು
ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಕುವೆಂಪು ಅವರು ಕನ್ನಡ ಪ್ರಸಿದ್ಧ ಕವಿ, ನಾಟಕಕಾರರು ಮತ್ತು ಉತ್ತಮ ಬರಹಗಾರರು. ತಮ್ಮ ಬರವಣಿಗೆಯ ಮೂಲಕ ಇಡೀ ಸಮಾಜವನ್ನು ತಿದ್ದಿದರು. ಅಂಥವರ ವ್ಯಕ್ತಿತ್ವ ನಮಗೆಲ್ಲ ಆದರ್ಶವಾಗಿದೆ ಎಂದರು.
ಅವರು ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ ಎಂದು ಬರೆಯುವುದರ ಮೂಲಕ ಪ್ರತಿಯೊಬ್ಬರು ಶಾಂತಿ ನೆಮ್ಮದಿಯಿಂದ ಬದುಕಬೇಕು ಎಂಬುದನ್ನು ಕಲಿಸಿಕೊಟ್ಟವರು. ಓದಿನಿಂದ ಬರಹದಿಂದ ಮನುಷ್ಯ ಹೇಗೆ ಉನ್ನತ ಮಟ್ಟಕ್ಕೆ ಹೋಗಬಹುದು ಎಂಬುದನ್ನು ತಿಳಿಸಿಕೊಟ್ಟ ಮಹಾನ್ ವ್ಯಕ್ತಿ ಎಂದು ತಿಳಿಸಿದರು.
ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯವಾಗಬಾರದು. ನೈತಿಕತೆ, ವ್ಯಕ್ತಿತ್ವದಿಂದ ಮುಖ್ಯವಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದ್ದಾಗಿದೆ. ಆದ್ದರಿಂದ ಯಾವುದೇ ಜಾತಿಯಿಂದ ಮನುಷ್ಯನನ್ನು ಗುರುತಿಸದೇ ಅವರ ವ್ಯಕ್ತಿತ್ವದಿಂದ ಗುರುತಿಸಬೇಕು.
ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂದು ಬದುಕಬೇಕು. ಕುವೆಂಪು ಅವರ ಆದರ್ಶ ನಮಗೆಲ್ಲ ಬೆಳಕಾಗಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಇದ್ದರು.