ಕಾರ್ಯಾಗಾರದಲ್ಲಿ ಪಾಲ್ಗೊಂಡಿದದ ಸಂಶೋಧಕರು, ವಿದ್ಯಾರ್ಥಿಗಳು, ಅಧ್ಯಾಪಕರು.
- ನಿವೃತ್ತ ಪ್ರಾಧ್ಯಾಪಕ ಡಾ.ಎಂ.ವಿ.ಶ್ರೀನಿವಾಸ ಅಭಿಮತ
- ‘ಕನ್ನಡನಾಡು ಮತ್ತು ಹೊರನಾಡಿನ ಕನ್ನಡ ಶಾಸನಗಳು’ ರಾಜ್ಯಮಟ್ಟದ ಕಾರ್ಯಾಗಾರ
ಸಾಮಾಜಿಕ, ಧಾರ್ಮಿಕ, ನೈತಿಕ ಭಾಗವನ್ನು ತಿಳಿದುಕೊಳ್ಳಲು ಶಾಸನಗಳನ್ನು ಅಧ್ಯಯನ ಮಾಡಿ ಚರಿತ್ರೆಯನ್ನು ಮರುಕಟ್ಟಬೇಕಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎಂ.ವಿ.ಶ್ರೀನಿವಾಸ ಹೇಳಿದರು.
ನಗರದ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಿಂದ ನಗರದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ‘ಕನ್ನಡನಾಡು ಮತ್ತು ಹೊರನಾಡಿನ ಕನ್ನಡ ಶಾಸನಗಳು’ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.
ಚರಿತ್ರೆಯ ಸಮಗ್ರ ಚಿತ್ರ ದೊರೆಯಬೇಕಾದರೆ, ಈವರೆಗೂ ಆಗಿರುವ ತಪ್ಪು ತಿದ್ದಿಕೊಳ್ಳಬೇಕಿದೆ. ಯುವಕರು ಆ ಕೆಲಸ ಮಾಡಬೇಕಿದೆ. ಇದರ ಫಲವಾಗಿ ಚರಿತ್ರೆಯ ಸ್ಪಷ್ಟ ಸುಂದರ ಚಿತ್ರ ದೊರೆಯುವಂತಾಗಲಿ ಎಂದರು.
ಇತಿಹಾಸಕಾರರಿಗೆ, ಶಾಸನ ತಜ್ಞರಿಗೆ ಬಹುಭಾಷಾ ಜ್ಞಾನ ಬಹಳ ಅಗತ್ಯ. ಇದರಿಂದ ಸತ್ಯಶೋಧನೆ ಸಾಧ್ಯ. ಭಾಷಾ ಅಜ್ಞಾನದಿಂದಲೋ ಅಥವಾ ಪೂರ್ವಗ್ರಹ ಪೀಡಿತರಾಗಿಯೋ ಬೇರೆ ಭಾಷೆಯ ಶಾಸನ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡದಿದ್ದರೆ ಸತ್ಯ ಹಾಗೂ ಸರಿಯಾದ ವಿಷಯ ಗ್ರಹಿಕೆಯಿಂದ ದೂರ ಉಳಿಯಬೇಕಾಗುತ್ತದೆ ಎಂದು ಹೇಳಿದರು.
ಶಾಸನಗಳೆಲ್ಲ ಸತ್ಯವನ್ನೇ ಹೇಳುತ್ತವೆ ಎಂದಲ್ಲ. ಹಲವು ಶಾಸನಗಳಲ್ಲಿ ಸತ್ಯವನ್ನು ತಿರುಚಿದ ಉದಾಹರಣೆಗಳೂ ಇವೆ. ತಮಿಳುನಾಡಿನ ವೆಳ್ವಿಕುಡಿ ತಮಿಳು ಶಾಸನದಲ್ಲಿ ಕನ್ನಡದ ದೊರೆಗಳಾದ ಕಳಭ್ರರ ಮೇಲೆ ಆಪಾದನೆ ಮಾಡಿದ್ದಾರೆ.
ಕ್ರಿ.ಶ. 3ರಿಂದ 6ನೇ ಶತಮಾನದವರೆಗೆ ದಕ್ಷಿಣ ಭಾರತದ ತಮಿಳು ಪ್ರದೇಶವನ್ನು ಆಳಿದ ಒಂದು ಪ್ರಾಚೀನ ರಾಜವಂಶ. ಅವರು ಕರ್ನಾಟಕದ ಅತ್ಯಂತ ಪ್ರಾಚೀನ ಕನ್ನಡ ಮನೆತನ ಎಂಬುದಾಗಿ ವಿದ್ವಾಂಸ ಶಂ.ಭಾ.ಜೋಷಿ ಅಭಿಪ್ರಾಯಪಟ್ಟಿದ್ದಾರೆ. ಇಂತಹ ರಾಜಮನೆತನದ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದರು.
ಜಾತೀಯ, ಮತೀಯ, ಭಾಷಾ ವ್ಯಾಮೋಹ ಮುಂತಾದ ಪೂರ್ವಗ್ರಹದ ಹಿನ್ನೆಲೆಯಲ್ಲಿ ಚರಿತ್ರೆ ನೋಡಿದರೆ ಚರಿತ್ರೆಗೆ ಹಲವು ರೋಗಗಳು ಬರುತ್ತವೆ. ಹೀಗಾಗಿ ಶಾಸನಗಳಲ್ಲಿ ಇರುವ ಭಾಷಾ ಸಮಸ್ಯೆ ಕುರಿತು ಮತ್ತೊಮ್ಮೆ ಚಿಂತಿಸಬೇಕಿದೆ ಎಂದು ಹೇಳಿದರು.
ಕನ್ನಡ ಶಾಸನಗಳನ್ನು ಸಂಗ್ರಹಿಸಿ ಪ್ರಕಟಿಸುವಲ್ಲಿ ಬಿ.ಎಲ್.ರೈಸ್ ಮುಂತಾದ ವಿದೇಶಿ ವಿದ್ವಾಂಸರ ಕೊಡುಗೆ ಅಪಾರ. 20,000ಕ್ಕೂ ಹೆಚ್ಚಿನ ಶಾಸನಗಳನ್ನು ಹುಡುಕಿ, ಒಕ್ಕಣೆ ಬರೆಯುವಲ್ಲಿ ರೈಸ್ ಅವರ ಪಾತ್ರ ಮಹತ್ವದ್ದು. ಆದರೆ, ಕನ್ನಡಿಗರಾಗಿ ನಾವು ಎಷ್ಟರಮಟ್ಟಿಗೆ ಶಾಸನಗಳ ಅಧ್ಯಯನ ಮತ್ತು ಸಂರಕ್ಷಣೆಯಲ್ಲಿ ತೊಡಗಿದ್ದೇವೆ? ಎಂದು ಪ್ರಶ್ನಿಸಿದರು.
ಆಂಧ್ರಪ್ರದೇಶದಲ್ಲಿ ಕನ್ನಡ ನಾಡಿಗೆ ಸಂಬಂಧಿಸಿದ ಸುಮಾರು ಸಾವಿರಕ್ಕೂ ಹೆಚ್ಚು ಶಾಸನಗಳಿವೆ. ಗಡಿನಾಡು ಪ್ರದೇಶಗಳಲ್ಲೂ ಇಂತಹ ಕನ್ನಡ ಶಾಸನಗಳಿವೆ. ಅವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವ ಅಗತ್ಯವಿದೆ ಎಂದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಮಾತನಾಡಿ, ಅಧ್ಯಯನ ಅಂತರ್ ಶಿಸ್ತೀಯ ನೆಲೆಯಲ್ಲಿ ರೂಪುಗೊಳ್ಳಬೇಕು. ಕನ್ನಡದವರಿಗೆ ಬೇರೆ ಬೇರೆ ಭಾಷೆ ಬರಬೇಕು. ವಿವಿಧ ಮಾನವೀಯ ಶಾಸ್ತ್ರಗಳ ನಡುವೆ ಒಂದು ಕೊಡು-ಕೊಳ್ಳುವಿಕೆ ನಡೆಯಬೇಕು. ಆಗ ಮಾತ್ರ ಅಧ್ಯಯನ ಪೂರ್ಣಗೊಳಿಸಲು ಸಾಧ್ಯ. ಶಾಸನಗಳ ಅಧ್ಯಯನದಿಂದ ಚಲನಶೀಲತೆ ಪ್ರಾಪ್ತಿಯಾಗುತ್ತದೆ ಎಂದರು.
ಶಾಸನಗಳ ವಿಚಾರ ಮಂಥನ:
ಕಾರ್ಯಾಗಾರದ 2ನೇ ದಿನವಾದ ಗುರುವಾರವೂ ವಿವಿಧ ಆಯಾಮ ಒಳಗೊಂಡ ವಿದ್ವತ್‌ಪೂರ್ಣ ಉಪನ್ಯಾಸಗಳು ಮತ್ತು ವಿಚಾರ ವಿನಿಮಯಗಳು ನಡೆದವು. ಶಾಸನ ಅಧ್ಯಯನದ ವೈವಿಧ್ಯಮಯ ಕ್ಷೇತ್ರಗಳ ಕುರಿತು ಪರಿಣತ ವಿದ್ವಾಂಸರು ತಮ್ಮ ಸಂಶೋಧನಾ ಅನುಭವ ಹಂಚಿಕೊಂಡರು.
ಮೊದಲ ಗೋಷ್ಠಿಯಲ್ಲಿ ಬುಕ್ಕರಾಯನ ಶಾಸನ ಕುರಿತು ಮಾತನಾಡಿದ ಡಾ.ಸಣ್ಣಪಾಪಯ್ಯ, ವಿಜಯನಗರ ಕಾಲಘಟ್ಟದ ರಾಜಕೀಯ, ಆಡಳಿತಾತ್ಮಕ ಹಾಗೂ ಭಾಷಾ ವೈಶಿಷ್ಟ್ಯಗಳನ್ನು ಶಾಸನಗಳ ಆಧಾರದ ಮೇಲೆ ವಿವರಿಸಿದರು.
2ನೇ ಗೋಷ್ಠಿಯಲ್ಲಿ ಕುರ್ಕ್ಯಾಲ ಶಾಸನ ಕುರಿತು ಉಪನ್ಯಾಸ ನೀಡಿದ ಡಾ.ಎಸ್.ಎಂ.ಅನ್ನಪೂರ್ಣಾ, ಶಾಸನದಲ್ಲಿನ ಐತಿಹಾಸಿಕ ಮಾಹಿತಿಯ ಜತೆಗೆ ಅದರ ಭಾಷಿಕ ಮತ್ತು ಸಾಂಸ್ಕೃತಿಕ ಮಹತ್ವ ವಿವರಿಸಿದರು.
3ನೇ ಗೋಷ್ಠಿಯಲ್ಲಿ ಅರ್ಜುನವಾಡ ಶಾಸನ ಕುರಿತು ಉಪನ್ಯಾಸ ನೀಡಿದ ಡಾ.ಮಾಲಿನಿ ಎನ್.ಅಭ್ಯಂಕರ್, ಶಾಸನಗಳ ಮೂಲಕ ಆ ಕಾಲದ ಸಾಮಾಜಿಕ ಹಾಗೂ ಆಡಳಿತ ವ್ಯವಸ್ಥೆ ಅರ್ಥೈಸುವ ಪ್ರಯತ್ನ ಮಾಡಿದರು.
ನಂತರದ ಗೋಷ್ಠಿಯಲ್ಲಿ ಹಲ್ಮಿಡಿ ಶಾಸನ ಮತ್ತು ಆತಕೂರು ಶಾಸನ ಕುರಿತು ಮಾತನಾಡಿದ ಡಾ.ರಾಧಾಮಣಿ, ಎರಡೂ ಶಾಸನಗಳಲ್ಲಿನ ಭಾಷಾ, ಸಾಹಿತ್ಯ ಹಾಗೂ ಇತಿಹಾಸ ಸಂಬಂಧಿತ ಮಾಹಿತಿಯನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದರು.
ಮಧ್ಯಾಹ್ನದ ಅಧಿವೇಶನದಲ್ಲಿ ಡಾ.ಅ.ಪ.ರಕ್ಷಿತ್ ಅವರು ಅವರು ಲಕ್ಕುಂಡಿ ಶಾಸನ, ಡಾ.ಬಿ.ಪವಿತ್ರಾ ಅವರು ತಾಳಗುಂದ ಶಾಸನ ಮತ್ತು ಬದಾಮಿ ಶಾಸನ, ಡಾ.ವೈ.ಸುಶ್ಮಿತಾ ಅವರು ದೇಕಬ್ಬೆ ಶಾಸನ, ಹಾಗೂ ಡಾ.ಯಲ್ಲವ್ವ ಹೆಬ್ಬಳ್ಳಿ ಅವರು ಕೋಡಿಮಠ ಶಾಸನ ಕುರಿತು ಉಪನ್ಯಾಸ ನೀಡಿ, ಶಾಸನಗಳಲ್ಲಿನ ಭಾಷಾ ಬೆಳವಣಿಗೆ, ಸಾಮಾಜಿಕ ಇತಿಹಾಸ ಮತ್ತು ಸಾಂಸ್ಕೃತಿಕ ಅಂಶ ವಿವರಿಸಿದರು.
ಭಾಗವಹಿಸಿದ್ದ ಸಂಶೋಧಕರು, ವಿದ್ಯಾರ್ಥಿಗಳು, ಅಧ್ಯಾಪಕರು ವಿವಿಧ ಶಾಸನಗಳ ಅಧ್ಯಯನದ ಹೊಸ ಆಯಾಮಗಳನ್ನು ಅರಿತುಕೊಳ್ಳಲು ಈ ಕಾರ್ಯಾಗಾರವು ಪರಿಣಾಮಕಾರಿ ವೇದಿಕೆಯಾಗಿತ್ತು. ಕನ್ನಡ ಶಾಸನ ಪರಂಪರೆಯ ಸಂರಕ್ಷಣೆ, ಅಧ್ಯಯನ ಮತ್ತು ಸಂಶೋಧನೆಗೆ ಹೊಸ ಚೈತನ್ಯ ನೀಡುವ ಮಹತ್ವದ ಶೈಕ್ಷಣಿಕ ಕಾರ್ಯಕ್ರಮವಾಗಿ ಸಮಾರೋಪಗೊಂಡಿತು.