ನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು. ಎಂ.ಕೆ.ಸೋಮಶೇಖರ್, ಎಂ.ಲಕ್ಷ್ಮಣ್, ಎಚ್.ಎ.ವೆಂಕಟೇಶ್ ಇತರರಿದ್ದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ಕೇವಲ ಉದ್ಯೋಗ ಹುಡುಕದೆ, ತಮ್ಮ ಸಾಮರ್ಥ್ಯ ಹಾಗೂ ಕೌಶಲ ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಜನಸ್ಪಂದನ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಯುವಜನತೆಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಿ ಅವರ ಭವಿಷ್ಯಕ್ಕೆ ದಾರಿದೀಪವಾಗುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಸ್ಥಳೀಯವಾಗಿಯೇ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಒದಗಿಸುವ ಇಂತಹ ಬೃಹತ್ ಮೇಳಗಳು ಸಮಾಜದ ಆರ್ಥಿಕ ಸಬಲೀಕರಣಕ್ಕೆ ಹಾಗೂ ಯುವಜನತೆಯ ಉಜ್ವಲ ಭವಿಷ್ಯಕ್ಕೆ ಪೂರಕ ವಾತಾವರಣ ನಿರ್ಮಿಸುತ್ತವೆ ಎಂದರು.
ಪ್ರತಿಯೊಬ್ಬ ನಿರುದ್ಯೋಗಿ ಯುವಕ-ಯುವತಿಯರಿಗೂ ಸೂಕ್ತ ವೇದಿಕೆ ಒದಗಿಸುತ್ತಿರುವ ಟ್ರಸ್ಟ್‌ನ ಸೇವೆಯನ್ನು ಶ್ಲಾಘಿಸಿ, ಉದ್ಯೋಗಾಕಾಂಕ್ಷಿಗಳಿಗೆ ಶುಭ ಹಾರೈಸಿದರು.
ಮೇಳದಲ್ಲಿ 73 ಕಂಪನಿಗಳು ಪಾಲ್ಗೊಂಡಿದ್ದು, 4537 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಇದರಲ್ಲಿ 2820 ಮಂದಿ ಉದ್ಯೋಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್, ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್ ಹಾಗೂ ಎಚ್.ಎ.ವೆಂಕಟೇಶ್, ಮಾಜಿ ಮೇಯರ್‌ಗಳಾದ ನಾರಾಯಣ್, ಪುಷ್ಪಾಲತಾ ಚಿಕ್ಕಣ್ಣ, ಮಾಜಿ ಉಪ ಮೇಯರ್ ಸಿದ್ದರಾಜು ಇತರರಿದ್ದರು.