ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆಯಿಂದ ನಗರದಲ್ಲಿ ಆಯೋಜಿಸಿದ್ದ ‘ವಿಶೇಷ ಉಪನ್ಯಾಸ ಮಾಲಿಕೆ-12’ಯನ್ನು ಡಾ.ಸಬಿಹಾ ಭೂಮಿಗೌಡ ಉದ್ಘಾಟಿಸಿದರು. ಡಾ.ಸುಕನ್ಯಾ ಕನಾರಳ್ಳಿ, ಪೊ.ಎಲ್.ಎನ್.ಮುಕುಂದರಾಜ್, ಪ್ರೊ.ಎಸ್. ಚಂದ್ರಕಿರಣ್ ಕುಳವಾಡಿ, ಡಾ.ನಾಗರಾಜು, ಡಾ. ಎನ್.ಯೋಗೇಶ, ಡಾ.ಶಭಾನ ಮೈಸೂರು ಇತರರು ಇದ್ದರು.
- ಜಗತ್ತಿನ ಆಗು-ಹೋಗುಗಳನ್ನು ಅರಿಯಲು ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು
- ಮೊಬೈಲ್, ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿದ್ದಾರೆ
ಮೈಸೂರು:ವರ್ತಮಾನದ ವಿಚಾರಗಳನ್ನು ತಿಳಿಯುವ ಜತೆಗೆ ಜ್ಞಾನವನ್ನು ವಿದ್ಯಾರ್ಥಿಗಳು ವೃದ್ಧಿಸಿಕೊಳ್ಳಬೇಕು ಎಂದು ವಿಶ್ರಾಂತ ಕುಲಪತಿ ಡಾ.ಸಬಿಹಾ ಭೂಮಿಗೌಡ ಸಲಹೆ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆಯಿಂದ ಕುವೆಂಪುನಗರದ ಬಿಜಿಎಸ್ ಬಿ.ಇಡಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ವಿಶೇಷ ಉಪನ್ಯಾಸ ಮಾಲಿಕೆ-12’ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಗತ್ತಿನ ಆಗು-ಹೋಗುಗಳನ್ನು ಅರಿಯಲು ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಆದರೆ ಮೊಬೈಲ್, ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿದ್ದಾರೆ. ಹಾಗಾಗಿ ಪತ್ರಿಕೆ ಓದಿ ವರ್ತಮಾನದ ವಿಚಾರಗಳನ್ನು ತಿಳಿಯುವ ಜತೆಗೆ ತಮ್ಮ ಜ್ಞಾನರ್ಜನೆಯನ್ನು ವಿದ್ಯಾರ್ಥಿಗಳು ವೃದ್ಧಿಸಿಕೊಳ್ಳುವತ್ತ ಚಿಂತಿಸಬೇಕು ಎಂದರು.
ಮಹಿಳಾ ದಿನಾಚರಣೆ ಎನ್ನುವುದು ಕೇವಲ ಆಚರಣೆ ಅಲ್ಲ. ಅದು ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ದಿನ. ಹೀಗಾಗಿ ಗಟ್ಟಿಯಾಗಿ ಮಾತನಾಡುವುದನ್ನು ಪ್ರತಿ ಹೆಣ್ಣು ಮಗುವೂ ಕಲಿಯಬೇಕು. ಆ ಮೂಲಕ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರು ಕೇವಲ ಬೋಧನೆ ಮಾಡುವುದಲ್ಲಿಯೇ ಕಳೆಯುತ್ತಿದ್ದಾರೆ. ಅವರು ಕೂಡ ತಮ್ಮ ಜ್ಞಾನ ಹೆಚ್ಚಿಸಿಕೊಂಡು ತಾವೂ ಬೆಳೆಯಬೇಕು, ಜಗತ್ತಿನ ಆಗು-ಹೋಗುಗಳ ಬಗ್ಗೆ ಅರಿವಿರಬೇಕು. ಪರೀಕ್ಷೆಯಿಂದಾಚೆಗೂ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಅರಳಿಸಿಕೊಳ್ಳುವುದು, ಇನ್ನೊಬ್ಬರನ್ನು ಪ್ರೇರೇಪಿಸುವುದು ನಿಜವಾದ ಮನಸ್ಥೈರ್ಯವಾಗಿದೆ. ಅದನ್ನು ಶಿಕ್ಷಕರು ಮಾಡಬೇಕು ಎಂದರು.
ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ ಡಾ.ಸುಕನ್ಯಾ ಕನಾರಳ್ಳಿ ಮಾತನಾಡಿ, ಹೆಣ್ಣು ಗಂಡಿನೊಡನೆ ಒಂದೇ ಸೂರಿನಡಿ ಬದುಕುತ್ತ ತನ್ನ ಅಸ್ಮಿತೆಯನ್ನು ಗಂಟು ಹಾಕಿಕೊಳ್ಳುತ್ತಾಳೆ. ಆದರೆ ಗಂಡಿನೊಡನೆ ಇದ್ದು ಗಂಡಿನಂತೆ ಸ್ವಾತಂತ್ರ್ಯವಾಗಿರದೆ ಹಲವು ಸೌಲಭ್ಯದಿಂದ ವಂಚಿತ ಆಗುತ್ತಾಳೆ ಎಂದು ಹೇಳಿದರು.
ನಮ್ಮ ಕಲಿಕೆಯೂ ಪುರುಷ ಪ್ರಧಾನ ವ್ಯವಸ್ಥೆ ಆಗಿದೆ. ಆದರೆ ಜಗತ್ತಿನ ಶೇ. 66 ಕೆಲಸ ಮಾಡುವುದು ಹೆಂಗಸು. ಆದರೆ ಶೇ.1ರಷ್ಟು ಮಾತ್ರ ಮಹಿಳೆಯರಲ್ಲಿ ಸಂಪತ್ತು ಇದೆ. ಕುಟುಂಬ ವ್ಯವಸ್ಥೆ ಎನ್ನುವುದು ತಳ ಹಂತದಲ್ಲಿ ಹೆಣ್ಣನ್ನು ಒಂಟಿಯಾಗಲು ಹುಟ್ಟಿಕೊಂಡ ವ್ಯವಸ್ಥೆ. ಆಕೆ ತನ್ನೆಲ್ಲವನ್ನು ಬಿಟ್ಟು ಪುರುಷನ ಜತೆ ಹೋಗಬೇಕು. ತನ್ನೆಲ್ಲ ಕುಟುಂಬ ಬಿಡಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೊ.ಎಲ್.ಎನ್.ಮುಕುಂದರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಕಾಡೆಮಿ ಸದಸ್ಯ ಸಂಚಾಲಕ ಪ್ರೊ.ಎಸ್.ಚಂದ್ರಕಿರಣ್ ಕುಳವಾಡಿ, ಬಿಜಿಎಸ್ ಬಿ.ಇಡಿ ಕಾಲೇಜು ಪ್ರಾಂಶುಪಾಲ ಡಾ.ನಾಗರಾಜು, ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕರಾದ ಡಾ.ಎನ್.ಯೋಗೇಶ, ಡಾ. ಶಭಾನಾ ಮೈಸೂರು ಇತರರು ಇದ್ದರು.