ಮೈಸೂರು ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಬುಧವಾರ ‘ಯುಜಿಸಿ ಮೂಕ್ಸ್ ಸ್ವಯಂ ಕೋರ್ಸ್’ ಕುರಿತು ಆಯೋಜಿಸಿದ್ದ ಓರಿಯಂಟೇಷನ್ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸಿದರು. ಪ್ರೊ.ಎನ್. ನಾಗರಾಜ್, ಪ್ರೊ.ಎಚ್.ಎಸ್. ಕುಮಾರ ಹಾಗೂ ಇತರರು ಇದ್ದರು.
ಮೈಸೂರು: ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಈ ಬದಲಾವಣೆಗೆ ಪೂರಕವಾಗಿ ವಿದ್ಯಾರ್ಥಿಗಳು ಸಹ ಬದಲಾವಣೆ ಆಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯ, ಸ್ವಯಂ-ಡಿಜಿಟಲ್ ಲರ್ನಿಂಗ್ ಮಾನಿಟರಿಂಗ್ ಸೆಲ್ ವತಿಯಿಂದ ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಬುಧವಾರ ‘ಯುಜಿಸಿ ಮೂಕ್ಸ್ ಸ್ವಯಂ ಕೋರ್ಸ್’ ಕುರಿತು ಆಯೋಜಿಸಿದ್ದ ಓರಿಯಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಹೊಸ ಸಾಧ್ಯತೆಗಳನ್ನು ಹುಡುಕಬೇಕು. ಯಾವಾಗಲೂ ಸಾಂಪ್ರದಾಯಿಕ ಮಾದರಿಯಲ್ಲಿಯೇ ಸಾಗಬಾರದು. ಏಕೆಂದರೆ ತಂತ್ರಜ್ಞಾನದ ಬೆಳವಣಿಗೆಯಿಂದ ಶಿಕ್ಷಣದ ಮಾದರಿಗಳು ಸಹ ಬದಲಾಗುತ್ತಿದೆ. ಹಾಗಾಗಿ ಈ ಬದಲಾವಣೆಗೆ ವಿದ್ಯಾರ್ಥಿಗಳು ತಮ್ಮನ್ನು ತೆರೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಕೇವಲ ತರಗತಿಯ ಕೊಠಡಿಗಳಿಗೆ ಮಾತ್ರ ಸೀಮಿತವಾಗಬಾರದು. ಏಕೆಂದರೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಸ್ತುತ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಹಾಗಾಗಿ ವಿದ್ಯಾರ್ಥಿಗಳು ಪ್ರತಿನಿತ್ಯ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಭಿನ್ನವಾಗಿ ಆಲೋಚಿಸುವ ಮನೋಭಾವ ಬೆಳೆಸಿಕೊಳ್ಳುವ ಜತೆಗೆ ಉತ್ತಮ ಕೌಶಲ ಹೊಂದುವ ಕಡೆಗೆ ಗಮನ ಹರಿಸ ಬೇಕು ಎಂದರು.
ಯುಜಿಸಿ ಮೂಕ್ಸ್ ವೆಬ್‌ಸೈಟ್‌ನಲ್ಲಿ ಐಐಟಿ ಸೇರಿದಂತೆ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಉಪನ್ಯಾಸವನ್ನು ವೀಕ್ಷಿಸಲು ಅವಕಾಶ ಇದೆ. ಹಾಗಾಗಿ ವಿದ್ಯಾರ್ಥಿಗಳು ಯುಜಿಸಿ ಮೂಕ್ಸ್‌ನಲ್ಲಿ ನೋಂದಣಿ ಮಾಡುವ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಯುಜಿಸಿ ಮೂಕ್ಸ್‌ನಲ್ಲಿ ವಿಭಿನ್ನವಾದ ಕಲಿಕೆಯನ್ನು ನೀವು ಆಸ್ವಾದಿಸಬಹುದು. ಯುಜಿಸಿ ನೀಡಿರುವ ಈ ಅವಕಾಶವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಯುಜಿಸಿ ಮೂಕ್ಸ್ ವೆಬ್‌ಸೈಟ್‌ನಲ್ಲಿರುವ ಪಾಠವನ್ನು ಎಷ್ಟು ಬಾರಿ ಬೇಕಾದರೂ ಕೇಳಿಸಿಕೊಳ್ಳಲು ಅವಕಾಶವಿದ್ದು, ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಆಲಿಸಬಹುದು. ಡಿಜಿಟಲ್ ವೇದಿಕೆಯು ಹಲವಾರು ಅವಕಾಶಗಳನ್ನು ತೆರೆದಿಡುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಸರಿಯಾಗಿ ಬಳಕೆ ಮಾಡಿಕೊಂಡು ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ್, ಸ್ವಯಂ ಕೋರ್ಸ್ ಸಂಯೋಜಕ ಪ್ರೊ.ಎಚ್.ಎಸ್. ಕುಮಾರ ಇದ್ದರು.