ಹುಣಸೂರು ತಾಲೂಕು ಮಾಸ್ತಮ್ಮನ ಹಾಡಿಯಲ್ಲಿ ಬಂಟ್ವಾಳ ತಾಲೂಕಿನ ವಿಠಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿಗಳು ಅಧ್ಯಯನ ಶಿಬಿರ ಆಯೋಜಿಸಲಾಗಿತ್ತು. ಡಾ.ಎಸ್.ಶ್ರೀಕಾಂತ್, ಮಾಸ್ತಮ್ಮ, ಪ್ರಾಧ್ಯಾಪಕಿ ಸೌಮ್ಯ ಮತ್ತು ವಿದ್ಯಾರ್ಥಿಗಳಿದ್ದರು.
- Vitthala Government First Grade College
ಹುಣಸೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಠಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ ಅಧ್ಯಯನ ಶಿಬಿರ ಕಾರ್ಯಕ್ರಮದಡಿ ತಾಲೂಕಿನ ನೇರಳಕುಪ್ಪೆ ಬಿ ಹಾಡಿ, ಮಾಸ್ತಮ್ಮ ಹಾಡಿ ಮತ್ತು ಶೆಟ್ಟಳ್ಳಿ ಹಾಡಿಗೆ ಭೇಟಿ ನೀಡಿ ಗಿರಿಜನರೊಂದಿಗೆ ಸಂವಾದ ನಡೆಸಿದರು.
ಭಾನುವಾರ ನಗರದ ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೇನು ಕುರುಬ, ಸೋಲಿಗ ಮತ್ತು ಪಂಜರಿ ಸಮುದಾಯದ ಆದಿವಾಸಗಳ ಬದುಕು ಬವಣೆ ತಿಳಿದುಕೊಂಡರು. ಈ ವೇಳೆ ಆದಿವಾಸಿಗಳು ತಮ್ಮ ಜೀವನ ಕ್ರಮದ ಬಗ್ಗೆ ತಿಳಿಸಿಕೊಟ್ಟರು. ಗಿಡಮೂಲಿಕೆ ತಜ್ಞೆ ಮಾಸ್ತಮ್ಮ ತಮ್ಮ ಜೀವನಾನುಭವನ್ನು ಬಿಚ್ಚಿಟ್ಟರು. ಅಲ್ಲದೇ ಗಿರಿಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ ಜಮೀನಿಗೆ ಹಕ್ಕುಪತ್ರ ಇಲ್ಲ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದರೂ ಅರ್ಧ ಹಾಡಿಗೆ ಕುಡಿಯಲು ನೀರಿಲ್ಲದ ಸ್ಥಿತಿ ಇದೆ. ಪೌಷ್ಟಿಕ ಆಹಾರ 3 ತಿಂಗಳಿಂದ ಬಂದಿಲ್ಲ. ಗೃಹಲಕ್ಷ್ಮೀ ಹಣ ಪತ್ತೆಯಿಲ್ಲ. ಇರಲು ಸ್ವಂತ ಸೂರು ಕೆಲವರಿಗೆ ಇಲ್ಲ. ಕಾಡಿಗೆ ಹೋಗದಂತೆ ಕಂದಕ, ರೈಲು ಕಂಬಿ ಬೇಲಿ ಹಾಕಿದ್ದಾರೆ. ಕೆಲವು ಮನೆಗೆ ದೀಪ ಇಲ್ಲ ಎಂಬಿತ್ಯಾದಿ ತಮ್ಮ ಸಮಸ್ಯೆಗಳನ್ನು ತೆರೆದಿಟ್ಟರು.
ಆದಿವಾಸಿ ಮುಖಂಡ ಅರ್ಪೇಟಯ್ಯ ಮಾತನಾಡಿ, ಹಾಡಿಯಲ್ಲಿ ಆದಿವಾಸಿ ಮನೆಯಲ್ಲಿ ನಡೆಯುವ ಅಂಗನವಾಡಿ ಹೊರತು ಪಡಿಸಿ ಮತ್ತೇನು ಇಲ್ಲ. ಈಗಲೂ ಇಂತ ಸ್ಥಿತಿ ಇದೆಯಲ್ಲ ಎಂದು ಆಶ್ಚರ್ಯಪಡಬೇಡಿ. ಇಲ್ಲಿ ದೇಶದ ಸಂವಿಧಾನ ಜಾರಿಯಾಗುತ್ತಿಲ್ಲ, ಹೈ ಕೋರ್ಟ್ ಆದೇಶ ಪಾಲನೆ ಆಗುತ್ತಿಲ್ಲ. ಹಕ್ಕು ರಕ್ಷಿಸಬೇಕಾದ ಕಾಯ್ದೆಗಳು ಜಾರಿಯಾಗಿಲ್ಲ. ಸರ್ಕಾರ ಆದಿವಾಸಿಗಳ ರಕ್ಷಣೆಗೆ ನಿಂತಿಲ್ಲ. ಭಾರತೀಯರಾದ ನಾವು ಎಂಬ ಪದದಲ್ಲಿ ಆದಿವಾಸಿಗಳನ್ನು ಹೊರತುಪಡಿಸಲಾಗಿದೆಯೇ ಎಂಬ ನೋವು ನಮ್ಮನ್ನು ಕಾಡುತ್ತಿದೆ ಎಂದು ಅವಲತ್ತುಕೊಂಡರು.
ವಿದ್ಯಾರ್ಥಿಗಳಿಗೆ ಅಧ್ಯಯನದ ಮಾರ್ಗದರ್ಶನವನ್ನು ಕಾಲೇಜಿನ ಪ್ರಾಧ್ಯಪಕಿ ಸೌಮ್ಯಾ, ಪ್ರಸನ್ನಕುಮಾರ್ ಹಾಗು ಡೀಡ್ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾಡಿದರು. ರೈಲು ಕಂಬಿ ಬೇಲಿ ಬಳಿ ನಿಂತು ಕಚುವಿನಹಳ್ಳಿ ಕಾಡನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.
ಆದಿವಾಸಿ ಮುಖಂಡರಾದ ಅಮ್ಮಣ್ಣಿ, ಗಂಗೆ, ಸೀತೆ, ಕೆಂಪಮ್ಮ, ಮಾಸ್ತಯ್ಯ, ಗೌರಮ್ಮ, ಬೋಜಯ್ಯ ಇತರರು ಇದ್ದರು.