ನಜರ್‌ಬಾದ್‌ನಲ್ಲಿರುವ ವಸಂತ್ ಮಹಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಕೆರಿಯರ್ ಮೇಳವನ್ನು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಉದಯಕುಮಾರ್ ಉದ್ಘಾಟಿಸಿದರು. ಅಮಿತ್, ಅರವಿಂದ್, ನಾಗಮ್ಮ, ಕೆ.ಎಚ್.ಚಂದ್ರಶೇಖರ್ ಇತರರಿದ್ದರು. 
ಮೈಸೂರು

ವಿದ್ಯಾರ್ಥಿಗಳು ಸ್ವಉದ್ಯೋಗದತ್ತ ಗಮನಹರಿಸಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಉದಯಕುಮಾರ್ ಸಲಹೆ
  • ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕ ಮತ್ತು ಕೆರಿಯರ್ ಮೇಳ
ಮೈಸೂರು: ವಿದ್ಯಾರ್ಥಿಗಳು ಕೌಶಲಾಭಿವೃದ್ಧಿಯೊಂದಿಗೆ ಸ್ವಉದ್ಯೋಗದತ್ತ ಗಮನಹರಿಸುವುದು ಇಂದಿನ ಅಗತ್ಯವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಉದಯಕುಮಾರ್ ಹೇಳಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ನಜರ್‌ಬಾದ್‌ನಲ್ಲಿರುವ ವಸಂತ್ ಮಹಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕ ಮತ್ತು ಕೆರಿಯರ್ ಮೇಳ ಉದ್ಘಾಟಿಸಿ ಮಾತನಾಡಿದರು. 
ಪ್ರಸ್ತುತ ಜಗತ್ತು ಅತ್ಯಂತ ಸ್ಪರ್ಧಾತ್ಮಕವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ವೃತ್ತಿ ಮಾರ್ಗದರ್ಶನ ಬಹಳ ಮುಖ್ಯ. ವಿದ್ಯಾಭ್ಯಾಸದ ನಂತರ ವೃತ್ತಿ ಜೀವನವನ್ನು ಹೇಗೆ ಪ್ರಾರಂಭಿಸಬೇಕು, ವೇಗವಾಗಿ ಯಶಸ್ಸು ಗಳಿಸಲು ಯಾವ ಹಾದಿ ಹಿಡಿಯಬೇಕು ಎಂಬ ಗೊಂದಲ ಸಹಜವಾಗಿ ವಿದ್ಯಾರ್ಥಿಗಳಲ್ಲಿ ಇರುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕೇವಲ ಕೋರ್ಸ್ ಆಧಾರಿತ ಉದ್ಯೋಗಗಳ ಬೆನ್ನು ಹತ್ತುವ ಬದಲು, ಪರ್ಯಾಯವಾಗಿ ತಮ್ಮದೇ ಆದ ಸ್ವಉದ್ಯೋಗ ಕೈಗೊಳ್ಳಲು ಪ್ರಯತ್ನಿಸಬೇಕು. ಕೌಶಲ, ನಿರ್ದಿಷ್ಟ ಗುರಿ ಮತ್ತು ಕ್ರಿಯಾಶೀಲತೆ ಇಲ್ಲದಿದ್ದರೆ ಇಂತಹ ಸಮ್ಮೇಳನಗಳು ವ್ಯರ್ಥವಾಗುತ್ತವೆ. ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಹೆಚ್ಚಿನ ಸಾಧನೆ ಮಾಡಲು ಬೇಕಾದ ಕೌಶಲ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಬಿ.ಇಡಿ ಕಾಲೇಜಿನ ಕಿರಿಯ ರೀಡರ್ ಅಮಿತ್ ಮಾತನಾಡಿ, ದೇಶದ ಅತಿ ದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ. ಆದರೆ, ನಿರುದ್ಯೋಗಕ್ಕೆ ಮೂಲ ಕಾರಣ ಜನಸಂಖ್ಯೆಯಲ್ಲ, ಬದಲಾಗಿ ನಮ್ಮಲ್ಲಿರುವ ಕೌಶಲಗಳ ಕೊರತೆ. ನಾವು ನಮ್ಮಲ್ಲಿರುವ ಮಾನವ ಸಂಪನ್ಮೂಲವನ್ನು ಅತ್ಯುತ್ತಮವಾಗಿ ಬಳಸಿಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಮೇಳದಲ್ಲಿ 22 ಇಲಾಖೆಗಳ ಮಳಿಗೆ ತೆರೆದು ಮಾರ್ಗದರ್ಶನ ಮಾಡಿದವು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು? ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಯಿತು. ವಿವಿಧ ಶಾಲಾ ಕಾಲೇಜುಗಳಿಂದ 1,255 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಐಟಿಐನ ಜೂನಿಯರ್ ಟ್ರೈನಿಂಗ್ ಆಫೀಸರ್ ಅರವಿಂದ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ನಾಗಮ್ಮ, ಡಯಟ್ ನೋಡಲ್ ಅಧಿಕಾರಿ ಕೆ.ಎಚ್.ಚಂದ್ರಶೇಖರ್, ಲೆಕ್ಕ ಅಧೀಕ್ಷಕ  ಬಿ.ಆರ್.ಮಧು ಉಪಸ್ಥಿತರಿದ್ದರು.