ಹುಣಸೂರು ನಗರದ ಪ.ಜಾತಿ/ಪಂಗಡದ ಮಹಿಳೆಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ದಿಢೀರ್ ಭೇಟಿ ನೀಡಿ ಅಡುಗೆ ತಯಾರಿಯನ್ನು ಪರಿಶೀಲಿಸಿದರು. ವಾರ್ಡನ್ ಪುಷ್ಪ ಇದ್ದರು.
ಹುಣಸೂರು: ನಗರದ ಪರಿಶಿಷ್ಟ ಜಾತಿ/ವರ್ಗಗಳ ಮಹಿಳೆಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಮಂಗಳವಾರ ಸಂಜೆ ದಿಢೀರ್ ಭೇಟಿ ನೀಡಿ ಹಾಸ್ಟೆಲ್‌ನ ಅವ್ಯವಸ್ಥೆ ಕಂಡು ಅವಾಕ್ಕಾದರು. ವಿದ್ಯಾರ್ಥಿನಿಯರು ದೂರುಗಳ ಸುರಿಮಳೆಯನ್ನೇ ಸುರಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿಯಿರುವ ಹಾಸ್ಟೆಲ್‌ಗೆ ಉಪವಿಭಾಗಾಧಿಕಾರಿ ಮಂಗಳವಾರ ಸಂಜೆ ದಿಢೀರ್ ಭೇಟಿ ನೀಡಿದಾಗ ಹಾಸ್ಟೆಲ್‌ನ ಅಶಿಸ್ತಿನ ನಿರ್ವಹಣೆ ಕಣ್ಣಿಗೆ ರಾಚಿತು. ಶುದ್ಧ ಕುಡಿಯುವ ನೀರಿನ ಘಟಕ ಶುಚಿತ್ವದ ಕೊರತೆಯಿಂದ ಧೂಳು ಮೆತ್ತಿಕೊಂಡಿತ್ತು. ರಾತ್ರಿ ಊಟಕ್ಕಾಗಿ ಬೇಯಿಸಿದ ಅನ್ನ ಮುದ್ದೆಯಂತಾಗಿತ್ತು. ಉಗ್ರಾಣದಲ್ಲಿ ತರಕಾರಿಯೆಂದರೆ ಟೊಮ್ಯಾಟೋ, ಬದನೆಕಾಯಿ ಮಾತ್ರ ಎನ್ನುವಂತಿತ್ತು.
ಮೂರು ತಿಂಗಳಿನಿಂದ ಪ್ಯಾಡ್ ಸಿಕ್ಕಿಲ್ಲ.. ಉಪವಿಭಾಗಾಧಿಕಾರಿಗಳು ವಿದ್ಯಾರ್ಥಿನಿಯರಲ್ಲಿ ಸಮಸ್ಯೆಗಳನ್ನು ಅರುಹಲು ಕೋರಿದಾಗ ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಜನವರಿ ತಿಂಗಳಿನಿಂದ ಪ್ಯಾಡ್ ನೀಡಿಲ್ಲ ಮೇಡಂ.. ಕಷ್ಟವಾಗುತ್ತಿದೆ. ಊಟದ ಮೆನುವಿನಂತೆ ಊಟ ನೀಡುತ್ತಾರೆ. ಆದರೆ ಶುಚಿ, ರುಚಿ ಅಷ್ಟರಲ್ಲೇ. 60 ವಿದ್ಯಾರ್ಥಿನಿಯರಿಗೆ ಅಗತ್ಯ ಪ್ರಮಾಣದ ಚಿಕನ್ ಊಟ ನೀಡುತ್ತಿಲ್ಲ. ಡೈನಿಂಗ್ ಟೇಬಲ್ ಶುಚಿಯಾಗಿರುವುದಿಲ್ಲ. ಅಡುಗೆ ಸಹಾಯಕರು ನಾಲ್ವರು ಇದ್ದರೂ ಶುಚಿತ್ವವನ್ನು ಕಾಪಾಡುತ್ತಿಲ್ಲ. ರಾತಿ ಊಟದ ವೇಳೆ ಕಾರಣಾಂತರಗಳಿಂದ ತಡವಾಗಿ ಬಂದರೆ ಬಾಳೆಹಣ್ಣು, ಮೊಟ್ಟೆ ಸಿಗುವುದೇ ಇಲ್ಲ ಎಂದು ದೂರಿದರು.
ನಡವಳಿಕೆ ಬದಲಾಯಿಸಿಕೊಳ್ಳಿ: ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಮಾತನಾಡಿ, ಹಾಸ್ಟೆಲ್‌ನಲ್ಲಿನ ಅವ್ಯವಸ್ಥೆ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದೇನೆ. ವ್ಯವಸ್ಥೆ ಸಮಾಧಾನಕರವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಅಡುಗೆ ಸಹಾಯಕರಲ್ಲಿ ಹೊಂದಾಣಿಕೆಯಿಲ್ಲ ದಿದ್ದರೆ ವರ್ಗಾವಣೆ ಮಾಡಿರಿ. ಗುತ್ತಿಗೆ ನೌಕರರು ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದರೆ, ಕೆಲಸದಿಂದ ವಜಾಗೊಳಿಸಿ ಹೊಸಬರನ್ನು ನೇಮಿಸಿಕೊಳ್ಳಬೇಕು. ಬಡ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಉಪಕ್ರಮಗಳನ್ನು ಶೀಘ್ರ ಕೈಗೊಳ್ಳಿರಿ. ಶುಚಿತ್ವ ಮತ್ತು ನೈರ್ಮಲ್ಯ ಪರಿಸರ ನಿರ್ಮಿಸಿಕೊಳ್ಳಿ. ತಿಂಗಳ ನಂತರ ಮತ್ತೆ ಭೇಟಿ ನೀಡುತ್ತೇನೆ. ಆಗಲೂ ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಶಿಸ್ತಿನ ಕ್ರಮಕ್ಕೆ ಮುಂದಾಗುತ್ತೇನೆಂದು ಎಚ್ಚರಿಸಿದರು.
ವಿದ್ಯಾರ್ಥಿನಿಯರೂ ವ್ಯಾಸಂಗವನ್ನು ಹೊರತುಪಡಿಸಿ ಇನ್ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಬಾರದು. ಸಮಯದ ಪಾಲನೆ ನಿಮ್ಮಿಂದಲೂ ಅಗಬೇಕು. ನಿಮ್ಮ ಮೇಲಿರುವ ಆರೋಪಗಳೂ ಇನ್ನು ಮುಂದೆ ಆಗದಂತೆ ಎಚ್ಚರ ವಹಿಸಿ ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೇಣುಕಾಪ್ರಸಾದ್ ಇದ್ದರು.