ಕುವೆಂಪುನಗರದ ಪ್ಯಾಲೇಸ್ ಸ್ಪೋರ್ಟ್ಸ್ ಕ್ಲಬ್‌ನಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ‘ಚಾಮುಂಡಿ ರನ್ ಓಟದ ಸ್ಪರ್ಧೆ-2026’ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಾಗರಾಜ್ ವಿ.ಬೈರಿ, ಕೆ.ಎನ್.ಶಿಲ್ಪಾ, ಆರ್.ವೈ.ಅರುಣ್ ಪ್ರಕಾಶ್ ಇತರರು ಇದ್ದರು. 
ಮೈಸೂರು

ಚಾಮುಂಡಿ ರನ್ ಓಟದ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು

ಪ್ರಮುಖ ಮುಖ್ಯಾಂಶಗಳು

  • ಸುಮಾರು 2 ಸಾವಿರ ವಿದ್ಯಾರ್ಥಿಗಳು ಭಾಗಿ
  • ವಿವಿಧ ವಿಭಾಗದಲ್ಲಿ ಸ್ಪರ್ಧೆ ಆಯೋಜನೆ

ಮೈಸೂರು:

ಕುವೆಂಪುನಗರದ ಪ್ಯಾಲೇಸ್ ಸ್ಪೋರ್ಟ್ಸ್ ಕ್ಲಬ್ ನಿಂದ ಜಿಲ್ಲಾ ಮಟ್ಟದ ‘ಚಾಮುಂಡಿ ರನ್ ಓಟದ ಸ್ಪರ್ಧೆ-2026’ ಆಯೋಜಿಸಲಾಗಿತ್ತು.

ರಾಮಕೃಷ್ಣನಗರ ವೃತ್ತದಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಿವಿಧ ಶಾಲೆಗಳಿಂದ ಸುಮಾರು 2 ಸಾವಿರ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 2 ಕಿ.ಮೀ., ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ 4 ಕಿ.ಮೀ. ಓಟದ ಸ್ಪರ್ಧೆ ನಡೆದವು.
ವಿಜೇತರಿಗೆ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ನಾಗರಾಜ್ ವಿ.ಬೈರಿ ಬಹುಮಾನ ವಿತರಿಸಿ ಮಾತನಾಡಿ, ಗೆಲುವಿಗಿಂತ ಭಾಗವಹಿಸುವಿಕೆ, ಜ್ಞಾನಕ್ಕಿಂತ ಸಂಸ್ಕಾರ, ಪ್ರತಿಭೆಯ ಜತೆಗೆ ದೇಶಭಕ್ತಿ ಎಂಬ ಸಂದೇಶ ದೊಡ್ಡದು. ಸ್ಪರ್ಧೆಯಲ್ಲಿ ಗೆಲ್ಲುವುದಷ್ಟೇ ಸಾಧನೆಯಲ್ಲ; ಧೈರ್ಯದಿಂದ ಭಾಗವಹಿಸುವ ಮನೋಭಾವ, ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಹಾಗೂ ಪ್ರತಿಭೆಯೊಂದಿಗೆ ದೇಶಭಕ್ತಿ ಬೆಳೆಸಿಕೊಳ್ಳುವುದು ವಿದ್ಯಾರ್ಥಿ ಜೀವನದಲ್ಲಿ ಮುಖ್ಯ ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದರಲ್ಲದೆ, ಸುಮಾರು ಎರಡು ಸಾವಿರ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಯಶಸ್ವಿಯಾಗಿ ಕ್ರೀಡಾಕೂಟ ಆಯೋಜಿಸಿದ ಪ್ಯಾಲೇಸ್ ಸ್ಪೋರ್ಟ್ಸ್ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರ ಶ್ರಮ ಶ್ಲಾಘಿಸಿದರು.
2026ರ ಪ್ಯಾರಾ ಕಾಮನ್‌ವೆಲ್ತ್ ಕ್ರೀಡಾಕೂಟದ ಎಫ್57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಪದಕ ವಿಜೇತೆ, ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಕೆ.ಎನ್.ಶಿಲ್ಪಾ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಪ್ಯಾಲೇಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರೂ ಅದ ಶಾಸಕ ಜಿ.ಡಿ.ಹರೀಶ್‌ಗೌಡ ಸ್ಪರ್ಧೆಗೆ ಚಾಲನೆ ನೀಡಿದರು. ನಗರ ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮೀ ಕಿರಣ್ ಮಾದೇಗೌಡ, ಪ್ಯಾಲೇಸ್ ಸ್ಪೋಟ್ಸ್ ಕ್ಲಬ್ ಉಪಾಧ್ಯಕ್ಷ ಆರ್.ವೈ.ಅರುಣ್ ಕಾರ್ಯದರ್ಶಿ ಪ್ರಕಾಶ್, ಮುಖಂಡರಾದ ವೈ.ಬಿ.ಹೇಮಂತ್‌ಕುಮಾರ್, ರಾಮಚಂದ್ರೇಗೌಡ, ಸತೀಶ್, ಟಿ.ಆರ್.ಪ್ರದೀಪ್, ಮಧುಕುಮಾರ್, ಇತರರು ಇದ್ದರು.
ಬಹುಮಾನ ವಿಜೇತರು:
ಪ್ರಾಥಮಿಕ ಬಾಲಕಿಯರ 2 ಕಿ.ಮೀ. ಓಟದಲ್ಲಿ ತಿ.ನರಸೀಪರದ ವಿದ್ಯೋದಯ ಶಾಲೆಯ ಇಂಚರಾ(ಪ್ರಥಮ), ಕೆ.ಎಂ.ಪ್ರಗತಿ(ದ್ವಿತೀಯ), ನಿಸರ್ಗಾ(ತೃತೀಯ),
ಪ್ರಾಥಮಿಕ ಬಾಲಕರ 2 ಕಿ.ಮೀ. ಸ್ಪರ್ಧೆಯಲ್ಲಿ ಹೊಸಕೋಟೆ ಶ್ರೀಗುರುಮಲ್ಲೇಶ್ವರ ಶಾಲೆ ಎಸ್.ಎಂ. ಹೇಮಂತ್‌ನಾಯಕ(ಪ್ರ), ರಂಗಸಮುದ್ರ ಸರ್ಕಾರಿ ಪ್ರೌಢಶಾಲೆಯ ಅಜಿತ್(ದ್ವಿ), ಮೈಸೂರಿನ ಯುನೈಟೆಡ್ ಅಥ್ಲೆಟಿಕ್‌ನ ಚಿರಂತ್ ಜಿ.ಗೌಡ (ತೃ) ಬಹುಮಾನ ಪಡೆದುಕೊಂಡರು.
ಪ್ರೌಢಶಾಲಾ ಬಾಲಕಿಯರ 4 ಕಿ.ಮೀ.ನಲ್ಲಿ ಎಂ.ಎನ್.ಪ್ರಾರ್ಥನಾ(ಪ್ರ), ಕುರುಬೂರು ವಿದ್ಯಾದರ್ಶಿನಿ ಶಾಲೆಯ ಸಿ.ಸಿಂಚನಾ(ದ್ವಿ), ಕೆ.ಎಸ್.ದೀಕ್ಷಿತಾ(ತೃ), ಪ್ರೌಢಶಾಲಾ ಬಾಲಕರ 4 ಕಿ.ಮೀ. ಸ್ಪರ್ಧೆಯಲ್ಲಿ ರಂಗಸಮುದ್ರದ ಸರ್ಕಾರಿ ಪ್ರೌಢಶಾಲೆಯ ಹರ್ಷ(ಪ್ರ), ದಟ್ಟಗಳ್ಳಿ ರೋಟರಿ ಪಶ್ಚಿಮದ ಎಂ.ಆದಿತ್ಯ (ದ್ವಿ), ವಿಜಯನಗರದ ಸೆಂಟ್ ಜೋಸೆಫ್ ಶಾಲೆ ಯು.ರಿಶಾನ್(ತೃ) ಬಹುಮಾನ ಗಳಿಸಿದರು.