ನಗರದ ಸರಸ್ವತಿಪುರಂನಲ್ಲಿ ಬಸವಮಾರ್ಗ ಉಚಿತ ವಸತಿನಿಲಯ ಉದ್ಘಾಟನೆಯಲ್ಲಿ ಎಚ್.ಪಿ.ಮಂಜುನಾಥ್ ಗಿಡಕ್ಕೆ ನೀರೆದರು. ಎಸ್.ಬಸವರಾಜು, ಖುಷಿವಿನು, ಚಂದ್ರ, ಸ್ವಾಮಿ ಇತರರು ಇದ್ದರು.
ಮೈಸೂರು:ನಗರದ ಸರಸ್ವತಿಪುರಂನಲ್ಲಿ ಪ್ರಸಕ್ತ ಸಾಲಿನಿಂದ ಆರಂಭಗೊಂಡಿರುವ ಬಸವಮಾರ್ಗ ಉಚಿತ ವಸತಿನಿಲಯಕ್ಕೆ ಚಾಲನೆ ನೀಡಲಾಯಿತು.
ಹುಣಸೂರು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ವಸತಿನಿಲಯ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದ ಪ್ರತಿಯೊಂದು ಹಂತದಲ್ಲೂ ಪರೀಕ್ಷೆ ಇರುತ್ತದೆ. ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಸುವುದಷ್ಟೇ ಸಾಧನೆ ಅಲ್ಲ. ವೈಯಕ್ತಿಕ ಮತ್ತು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳುವ ಮೂಲಕ ಉನ್ನತ ಸಾಧನೆ ಮಾಡಬೇಕು. ಇದಕ್ಕೆ ನಿರಂತರ ಪ್ರಯತ್ನ ಮತ್ತು ಸಕಾರಾತ್ಮಕ ಮನೋಭಾವ ಬೇಕು ಎಂದರು.
ವಿದ್ಯಾರ್ಥಿಗಳು ಹೊಸ ವಿಷಯಗಳು, ತಂತ್ರಜ್ಞಾನ ಮತ್ತು ನೈಜ ಪ್ರಪಂಚದ ಕೌಶಲಗಳನ್ನು ಕಲಿಯಲು ಆಸಕ್ತಿ ತೋರಿಸಬೇಕು. ಅಧ್ಯಯನ, ವಿಶ್ರಾಂತಿ ಮತ್ತು ಇತರೆ ಚಟುವಟಿಕೆಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಿ ವೇಳಾಪಟ್ಟಿಯನ್ನು ಅನುಸರಿಸಬೇಕು. ನಿಮ್ಮ ಶೈಕ್ಷಣಿಕ ಜೀವನಕ್ಕೆ ಚಿಕ್ಕ ಮತ್ತು ದೊಡ್ಡ ಗುರಿಗಳನ್ನು ನಿಗದಿಪಡಿಸಿಕೊಂಡು, ಅವುಗಳನ್ನು ಸಾಧಿಸಲು ನೀವೆಲ್ಲರೂ ಶ್ರಮಿಸಬೇಕು. ಆಗ ಜೀವನದಲ್ಲಿ ಗೆಲುವು ಪಡೆಯಲು ಸಾಧ್ಯ ಎಂದು ಹೇಳಿದರು.
ಉದ್ಯಮಿ ಖುಷಿವಿನು ಮಾತನಾಡಿ, ಸ್ವಾರ್ಥದ ಪ್ರಪಂಚದಲ್ಲಿ ಪರರಿಗಾಗಿ ಮಿಡಿಯುವುದು ವಿರಳ. ಈ ನಿಟ್ಟಿನಲ್ಲಿ ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕ ಎಸ್.ಬಸವರಾಜು ದುಡಿಯುತ್ತಿದ್ದಾರೆ. ಅನ್ನದಾನ ಮತ್ತು ವಿದ್ಯಾದಾನ ಕಲ್ಪಿಸುವ ಮೂಲಕ ಮಕ್ಕಳ ಭವಿಷ್ಯ ರೂಪಿಸಲು ನೆರವಾಗುತ್ತಿರುವುದು ಶ್ಲಾಘನೀಯ ಎಂದರು.
ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಏನಾದರೂ ಮಾಡಬೇಕೆಂದು ಕುಕ್ಕರಹಳ್ಳಿ ಶಾಲೆಯನ್ನು ದತ್ತು ಪಡೆಯಲಾಯಿತು. ಅಲ್ಲಿದ್ದ ವಿದ್ಯಾರ್ಥಿಗಳು ದೂರದೂರುಗಳಿಂದ ಪ್ರಯಾಣ ಮಾಡುತ್ತಿದ್ದರು. ಅದನ್ನು ಮನಗಂಡು ಬಾಲಕರಿಗೆ ವಿದ್ಯಾರ್ಥಿನಿಲಯ ತೆರೆಯಲಾಯಿತು ಎಂದರು.
ಈಗ ಬೇರೆ ಶಾಲೆಯ ವಿದ್ಯಾರ್ಥಿಗಳಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಅವರಿಗೂ ಉಚಿತವಾಗಿ ವಸತಿ ನಿಲಯ ವಿಸ್ತಾರ ಮಾಡಲಾಯಿತು. ಕೇವಲ ನಾಲ್ಕೈದು ವಿದ್ಯಾರ್ಥಿಗಳಿಂದ ಪ್ರಾರಂಭವಾದ ನಮ್ಮ ಉಚಿತ ವಸತಿನಿಲಯದಲ್ಲಿ ಇಂದು 30ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ಈ ವರ್ಷದಿಂದ ಇದರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಬಸವಮಾರ್ಗ ಉಚಿತ ವಸತಿನಿಲಯದ ಈ ಸಾಲಿನ ಕಟ್ಟಡ ಬಾಡಿಗೆ ಖರ್ಚನ್ನು ಭರಿಸುವುದಾಗಿ ಎಚ್.ಪಿ.ಮಂಜುನಾಥ್ ಭರವಸೆ ನೀಡಿದರು. ಖುಷಿವಿನು ಅವರು ವಸತಿನಿಲಯದ ವಿದ್ಯಾರ್ಥಿಗಳಿಗೆ ಸ್ಕೂಲ್ಬ್ಯಾಗ್ ಕೊಡುಗೆ ನೀಡಿದರು. ಕುಕ್ಕರಹಳ್ಳಿ ಶಾಲೆ ಮುಖ್ಯ ಶಿಕ್ಷಕ ಚಂದ್ರ, ಎಸ್‌ಡಿಎಂಸಿ ಅಧ್ಯಕ್ಷ ಸ್ವಾಮಿ, ನಿವೃತ್ತ ಶಿಕ್ಷಕ ಮೋಹನ್‌ಕುಮಾರ್ ಇದ್ದರು.