ಹುಣಸೂರು ತಾಲೂಕು ಹೊಸರಾಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. 
ಮೈಸೂರು

ವಿದ್ಯಾರ್ಥಿಗಳೇ ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಿ

ಲೋಕೇಶ್ ಮನು. ಡಿ
ಹುಣಸೂರು : ವಿದ್ಯಾರ್ಥಿಗಳಿಗೆ ಹದಿಹರೆಯದಲ್ಲಿ ಉಂಟಾಗುವ ಮಾನಸಿಕ, ದೈಹಿಕ ಒತ್ತಡ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ದೂರಾಗಲು ರಚನಾತ್ಮಕ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದೇ ಉತ್ತಮ ಮಾರ್ಗ ಎಂದು ರತ್ನಪುರಿ ವಿಎಸ್‌ಎಸ್ ಕಾಲೇಜಿನ ಪ್ರಾಧ್ಯಾಪಕ ಮನೋಜ್ ಕುಮಾರ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಹುಣಸೂರು ಘಟಕ ವತಿಯಿಂದ ತಾಲೂಕಿನ ಬೋಳನಹಳ್ಳಿ ವಲಯ ವ್ಯಾಪ್ತಿಯ ಹೊಸರಾಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹದಿಹರೆಯದ ದುಡುಕುತನಗಳು ವಿದ್ಯಾರ್ಥಿಗಳ ಜೀವನದ ಗುರಿ, ಉದ್ದೇಶ ಎಲ್ಲವನ್ನೂ ಹಾಳುಗೆಡವುತ್ತದೆ. ತಂದೆ-ತಾಯಿಯರಿಂದ ಆಗಬಹುದಾದ ಒತ್ತಡಗಳು, ಸ್ನೇಹಿತರ ಸಹವಾಸ, ಜೀವನಶೈಲಿ, ಲಿಂಗ ತಾರತಮ್ಯ, ಪ್ರೀತಿಯ ಕೊರತೆ, ಅನಾರೋಗ್ಯ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮುಂತಾದವುಗಳು ವಿದ್ಯಾರ್ಥಿಗಳನ್ನು ತಪ್ಪುದಾರಿಗೆ ಕರೆದೊಯ್ಯಬಹುದು. ಪರಿಣಾಮ ದುಶ್ಚಟಗಳಿಗೆ ಬಲಿ, ಮಾದಕ ವ್ಯಸನಿಗಳಾಗುವುದು, ಮಾರಣಾಂತಿಕ ರೋಗಗಳಿಗೆ ಬಲಿಯಾಗುವ ಪರಿಸ್ಥಿತಿ ಏರ್ಪಡುವುದು. ದೃಢ ನಿರ್ಧಾರ, ಸಂಧಾನ ಕೌಶಲ, ವ್ಯಕ್ತಿ ವ್ಯಕ್ತಿ ಸಂಬಂಧಗಳು ಸಕಾರಾತ್ಮಕವಾಗಿರಿಸಿಕೊಳ್ಳುವಂತಹ ನಡೆಗಳಿಂದ ವಿದ್ಯಾರ್ಥಿಗಳು ಈ ಎಲ್ಲ ಸಂಕಟಗಳಿಂದ ಪಾರಾಗಬಹುದಾಗಿದೆ. ಯುವ ಜನತೆ ಈ ಸಮಾಜಕ್ಕೆ ಕೊಡುಗೆಯಾಗಬೇಕೇ ಹೊರತು ಹೊರೆಯಾಗಬಾರದು ಎಂದು ಕಿವಿಮಾತು ಹೇಳಿದರು.
ಯೋಜನೆಯ ಮೇಲ್ವಿಚಾರಕ ತೀರ್ಥರಾಮ ಸ್ವಾಸ್ಥ್ಯ ಸಂಕಲ್ಪದ ಉದ್ದೇಶ ವಿವರಿಸಿದರು. ಮುಖ್ಯಶಿಕ್ಷಕ ಅಶ್ವಥ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸೇವಾ ಪ್ರತಿನಿಧಿ ಮೀನಾಕ್ಷಿ, ಕಾವ್ಯಾ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.