ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಕೇಂದ್ರದಿಂದ ಆಯೋಜಿಸಿದ್ದ ಕೆ-ಸೆಟ್ ಮತ್ತು ಯುಜಿಸಿ-ನೆಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರ ಉದ್ಘಾಟನೆಯಲ್ಲಿ ಪ್ರೊ.ಪ್ರೊ. ಶರಣಪ್ಪ ವಿ. ಹಲಸೆ, ಪ್ರೊ.ಬಿ.ಕೆ. ರವಿ, ಆರ್.ಸತ್ಯಶ್ರೀ, ಪ್ರೊ.ಎಸ್.ಕೆ. ನವೀನ್‌ಕುಮಾರ್, ಡಾ. ಸಿ.ಎಸ್. ಆನಂದಕುಮಾರ್, ಪ್ರೊ.ಎಂ. ರಮಾನಾಥಂ ನಾಯ್ಡು, ಡಾ.ಎನ್.ಆರ್. ಚಂದ್ರೇಗೌಡ, ಜೈನಹಳ್ಳಿ ನಾರಾಯಣಗೌಡ ಇತರರು ಇದ್ದರು.
- ಸಮಯವನ್ನು ಯಾರು, ಹೇಗೆ ವಿವೇಚನೆಯಿಂದ ಬಳಸಿಕೊಳ್ಳುತ್ತಾರೆ ಎಂಬುದು ಅವರ ಯಶಸ್ಸನ್ನು ನಿರ್ಧರಿಸುತ್ತದೆ
- ಬರೀ ಮನೋರಂಜನೆಗೆ ಅಂಟಿಕೊಳ್ಳದೆ, ಓದು ಮತ್ತು ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕು
ಮೈಸೂರು:ವಿದ್ಯಾರ್ಥಿ ಜೀವನವು ಭವಿಷ್ಯವನ್ನು ರೂಪಿಸಿಕೊಳ್ಳುವ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ಶಿಸ್ತು, ಕಠಿಣ ಪರಿಶ್ರಮ ಮತ್ತು ಸಮಯಪ್ರಜ್ಞೆ ಅಳವಡಿಸಿಕೊಂಡರೆ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಕೇಂದ್ರದಿಂದ ಆಯೋಜಿಸಿದ್ದ ಕೆ-ಸೆಟ್ ಮತ್ತು ಯುಜಿಸಿ-ನೆಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ದಿನಕ್ಕೆ 24 ಗಂಟೆಯೇ ಇರುತ್ತದೆ. ಆ ಸಮಯವನ್ನು ಯಾರು, ಹೇಗೆ ವಿವೇಚನೆಯಿಂದ ಬಳಸಿಕೊಳ್ಳುತ್ತಾರೆ ಎಂಬುದು ಅವರ ಯಶಸ್ಸನ್ನು ನಿರ್ಧರಿಸುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಇರಬೇಕು. ಬರೀ ಮನೋರಂಜನೆಗೆ ಅಂಟಿಕೊಳ್ಳದೆ, ಓದು ಮತ್ತು ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಇತ್ತೀಚಿನ ತಂತ್ರಜ್ಞಾನಗಳಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಸಂಶೋಧನೆ ಬಗ್ಗೆ ವಿದ್ಯಾರ್ಥಿಗಳು ತಿಳಿದಿರಬೇಕು. ಆದರೆ ಸಂಶೋಧನೆ ಮತ್ತು ಓದಿನ ವಿಷಯದ ಮೇಲೆ ಅತಿಯಾಗಿ ಅವಲಂಬಿತರಾಗಬಾರದು. ಸ್ವಂತ ಪರಿಶ್ರಮದಿಂದ ಸಿದ್ಧಪಡಿಸಿದ ಜ್ಞಾನವಷ್ಟೇ ದೀರ್ಘಕಾಲ ಉಳಿಯುತ್ತದೆ ಎಂದು ಹೇಳಿದರು.
ಗ್ರಾಮೀಣ ಭಾಗದಿಂದ ಬಂದ ವಿದ್ಯಾರ್ಥಿಗಳು ಯಾವುದೇ ಕೀಳರಿಮೆ ಹೊಂದಬಾರದು. ಛಲ ಮತ್ತು ಧೈರ್ಯವಿದ್ದರೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಜಯ ಸಾಧಿಸಬಹುದು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹ ಮಹನೀಯರ ಜೀವನ ನಮಗೆ ಸದಾ ದಾರಿದೀಪವಾಗಬೇಕು.ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರವಿದ್ದು, ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಎಂದು ಸಲಹೆ ನೀಡಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಬಿ.ಕೆ. ರವಿ ಮಾತನಾಡಿ, ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ತಂತ್ರಜ್ಞಾನ ಮತ್ತು ಸಂಪನ್ಮೂಲಗಳು ಹೇರಳವಾಗಿವೆ. ಆದರೆ, ಪರೀಕ್ಷೆಯನ್ನು ಹೇಗೆ ಎದುರಿಸಬೇಕು, ಯಾವ ಅಂಶಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂಬ ಸರಿಯಾದ ಮಾರ್ಗದರ್ಶನ ಮುಖ್ಯವಾಗಿದೆ ಎಂದು ಹೇಳಿದರು.
ವಿಷಯದ ಮೇಲೆ ಪಾಂಡಿತ್ಯವಿದ್ದರೂ ಪರೀಕ್ಷೆಯಲ್ಲಿ ಅದನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬ ಕೌಶಲ ವಿದ್ಯಾರ್ಥಿಗಳಿಗೆ ಸಿದ್ಧಿಸಿರಬೇಕು. ಓದಿನಿಂದ ಮಾತ್ರವಲ್ಲದೆ, ಪರೀಕ್ಷಾ ತಂತ್ರಗಳನ್ನು ಅರಿಯುವುದರಿಂದ ಯಶಸ್ಸು ಸಾಧ್ಯ. ಇಂದು ಮಾಹಿತಿ ಬೆರಳ ತುದಿಯಲ್ಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಅಂತಹ ತಂತ್ರಜ್ಞಾನ ಎಷ್ಟು ಅರ್ಥಪೂರ್ಣವಾಗಿ ಬಳಸಿಕೊಳ್ಳುತ್ತೇವೆ ಎಂಬುದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದರು.
ಪರೀಕ್ಷೆಯ ಭಯ ಬೇಡ, ಸಿದ್ಧತೆ ಇರಲಿ. ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರ ಬಂದಾಗ ಓದಲು ಆರಂಭಿಸುತ್ತಾರೆ. 15 ದಿನಗಳಿದ್ದಾಗ ಇನ್ನೂ ಸಮಯವಿದೆ ಎಂದು ಮುಂದೂಡುತ್ತಾ, ಪರೀಕ್ಷೆಯ ಹಿಂದಿನ ದಿನ ಒತ್ತಡಕ್ಕೆ ಒಳಗಾಗುತ್ತಾರೆ, ವಿಷಯದ ಮೇಲೆ ಹಿಡಿತವಿದ್ದರೆ ಎಂತಹ ಪ್ರಶ್ನೆ ಕೇಳಿದರೂ ಸುಲಭವಾಗಿ ಉತ್ತರಿಸಬಹುದು ಎಂದು ಸಲಹೆ ನೀಡಿದರು.
ಇಂದಿನ ಮಾಧ್ಯಮ ಮತ್ತು ತಂತ್ರಜ್ಞಾನದ ಯುಗದಲ್ಲಿ ಮಾಹಿತಿ ಎಲ್ಲೆಡೆ ಲಭ್ಯವಿದೆ. ಆದರೆ, ವಿದ್ಯಾರ್ಥಿಗಳು ಬ್ರೇಕಿಂಗ್ ನ್ಯೂಸ್‌ಗಳ ಹಾವಳಿಯ ನಡುವೆ ನಿಜವಾದ ಜ್ಞಾನವನ್ನು ಆರಿಸಿಕೊಳ್ಳುವಲ್ಲಿ ವಿವೇಚನೆ ಬಳಸಬೇಕು ಎಂದರು.
ಆಡಳಿತ ತರಬೇತಿಯ ಸಂಸ್ಥೆಯ ಜಂಟಿ ನಿರ್ದೇಶಕರಾದ ಆರ್.ಸತ್ಯಶ್ರೀ ಮಾತನಾಡಿ, ಸಮಯದ ನಿರ್ವಹಣೆಯೇ ಯಶಸ್ಸಿನ ಮೆಟ್ಟಿಲು. ಪ್ರತಿಯೊಬ್ಬ ವ್ಯಕ್ತಿಗೂ ದಿನದ 24 ಗಂಟೆಗಳು ಸಮಾನವಾಗಿರುತ್ತವೆ. ಯಾರು ಆ ಸಮಯವನ್ನು ಶಿಸ್ತಿನಿಂದ ಬಳಸಿಕೊಳ್ಳುತ್ತಾರೋ ಅವರು ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದರು.
ಶಿಕ್ಷಣ ಎಂಬುದು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗಬಾರದು. ಜ್ಞಾನದ ಹಸಿವು ಸದಾ ಇರಬೇಕು. ಕಲಿಕೆ ನಿರಂತರವಾದಾಗ ಮಾತ್ರ ಜಗತ್ತಿನ ಸವಾಲುಗಳನ್ನು ಎದುರಿಸಲು ಸಾಧ್ಯ. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಮತ್ತು ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಸಮಾಜದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.
ಮುಕ್ತ ವಿವಿ ಕುಲಸಚಿವ ಪ್ರೊ.ಎಸ್.ಕೆ. ನವೀನ್‌ಕುಮಾರ್, ಪರೀಕ್ಷಾಂಗ ಕುಲಸಚಿವ ಡಾ. ಸಿ.ಎಸ್. ಆನಂದಕುಮಾರ್, ಶೈಕ್ಷಣಿಕ ಡೀನ್ ಪ್ರೊ. ಎಂ. ರಮಾನಾಥಂ ನಾಯ್ಡು, ಅಧ್ಯಯನ ಕೇಂದ್ರದ ಡೀನ್ ಡಾ.ಎನ್.ಆರ್. ಚಂದ್ರೇಗೌಡ, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ನಾರಾಯಣಗೌಡ ಇತರರು ಇದ್ದರು