ರ‌್ಯಾಗಿಂಗ್ ಪ್ರಕರಣ 
ಮೈಸೂರು

ಸಹಪಾಠಿಗಳಿಂದಲೇ ವಿದ್ಯಾರ್ಥಿ ಮೇಲೆ ಕಿರುಕುಳ, ಮರ್ಮಾಂಗಕ್ಕೆ ಹಲ್ಲೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಶಾಲೆಯಲ್ಲಿ ನಡೆದಿರುವ ರ‌್ಯಾಗಿಂಗ್
  • ಮರ್ಮಾಂಗಕ್ಕೆ ಕಾಲಿನಿಂದ ಒದ್ದು ಹಲ್ಲೆ
  • ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್
ಮೈಸೂರು: ನಗರದ ಪ್ರತಿಷ್ಠಿತ ಶಾಲೆಯಲ್ಲಿ ನಡೆದಿರುವ ರ‌್ಯಾಗಿಂಗ್ ಪ್ರಕರಣದ ಕುರಿತು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಹಪಾಠಿಗಳ ಕಿರುಕುಳ ಮತ್ತು ಮರ್ಮಾಂಗಕ್ಕೆ ಹಲ್ಲೆ ನಡೆಸಿದ ಪರಿಣಾಮ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆಯು ನಗರಾದ್ಯಂತ ಹೆಚ್ಚು ಸುದ್ದಿ ಮಾಡುತ್ತಿದೆ.
ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 13 ವರ್ಷದ ವಿದ್ಯಾರ್ಥಿಗೆ ಆತನ ಸಹಪಾಠಿಗಳಾದ ಮೂವರು ಹಲ್ಲೆ ಮಾಡಿದ್ದು, ಮರ್ಮಾಂಗಕ್ಕೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದು ವೃಷಣವನ್ನು ಶಾಶ್ವತವಾಗಿ ಹಾನಿಯಾಗುವಂತೆ ಮಾಡಿದ್ದಾರೆ.
ಅದಕ್ಕೆ ಮೂವರು ವಿದ್ಯಾರ್ಥಿಗಳು, ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥರು, ಪ್ರಾಂಶುಪಾಲ, ಮುಖ್ಯ ಶಿಕ್ಷಕ ಮತ್ತು ತರಗತಿಯ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಅ.26ರಂದು ಮನೆಯಲ್ಲಿದ್ದ ನನ್ನ ಮಗ ತೊಡೆಯ ಭಾಗದಲ್ಲಿ ನೋವಾಗುತ್ತಿದೆ ಎಂದು ಹೇಳಿದ್ದು, ಈ ಬಗ್ಗೆ ಕೇಳಿದಾಗ ಶಾಲೆಯಲ್ಲಿ ಮೂವರು ಸಹಪಾಠಿಗಳು ಹಲ್ಲೆ ನಡೆಸಿರುವ ವಿಚಾರವನ್ನು ತಿಳಿಸಿದ. ನಂತರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದಾಗ ಪರೀಕ್ಷಿಸಿದ ವೈದ್ಯರು ವೃಷಣಕ್ಕೆ ಹಾನಿಯಾಗಿದ್ದು, ಆಪರೇಷನ್ ಮಾಡಬೇಕಾಗುತ್ತದೆ ಎಂದು ತಿಳಿಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಆದ್ದರಿಂದ ನನ್ನ ಮಗನಿಗೆ ತೊಂದರೆ ನೀಡಿದ ವಿದ್ಯಾರ್ಥಿಗಳು ಮತ್ತು ಶಾಲೆಯವರ ವಿರುದ್ಧ ಕ್ರಮ ಕೈಗೊಳ್ಳಬೇಕು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.