ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಚಿಕ್ಕಮಳಲಿ ಆರ್. ಮಹದೇವ, ಸೋಮಶೇಖರ, ನಾಗಲಿಂಗಪ್ರಭು, ಮೇನಕಾರಾಣಿ, ಹೇಮಾ ಇತರರು ಇದ್ದರು.
ನಂಜನಗೂಡು: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು ಎಂದು ಕನ್ನಡ ಉಪನ್ಯಾಸಕ ಚಿಕ್ಕಮಳಲಿ ಆರ್. ಮಹದೇವ ಹೇಳಿದರು.
ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ 2026-2027ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ವಿದ್ಯಾಭ್ಯಾಸ ಮಾಡಬೇಕು. ಎಲ್ಲರಿಗೂ ಸಾಧನೆ ಮಾಡುವ ಶಕ್ತಿ ಇರುತ್ತದೆ. ವಿವೇಕ, ವಿವೇಚನೆ ಇದ್ದರೆ ಗುರಿ ಸಾಧನೆಯಾಗುತ್ತದೆ. ಇದಕ್ಕಾಗಿ ಉತ್ತಮ ಸ್ನೇಹಿತರನ್ನು ಆಯ್ದುಕೊಳ್ಳಬೇಕು. ಮೊಬೈಲ್ ಫೋನಿನಿಂದ ದೂರ ಇರಬೇಕು. ಸಾಧಕರ ಜೀವನ ಮತ್ತು ಸಾಧನೆ ಅವಲೋಕಿಸಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ನಜೀಮ್ ಉಲ್ಲಾ ಖಾನ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯದ ಅಧ್ಯಯನ ಬೇಕು. ಇದರೊಂದಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳೂ ಅತ್ಯಗತ್ಯ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಸದಾ ಸಿದ್ಧವಿದೆ. ಮಕ್ಕಳಲ್ಲಿ ಅಡಗಿರುವ ಕಲೆಯನ್ನು ವೇದಿಕೆ ಮೇಲೆ ಅನಾವರಣವಾಗುವ ವಾತಾವರಣ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆ ಅವಶ್ಯಕ ಎಂದರು.
ಹುಲ್ಲಹಳ್ಳಿ ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ, ಕೋಣನೂರು ಗಂಗಾಧರೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗಲಿಂಗಪ್ರಭು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಲತಾದೇವಿ, ಉಪನ್ಯಾಸಕರಾದ ಡಾ.ಶಶಿಧರ್, ಯೋಗೇಶ್, ಮೇನಕಾರಾಣಿ, ಹೇಮಾ, ನಟರಾಜು, ಮಹಾಲಿಂಗು, ಮಹದೇವಸ್ವಾಮಿ, ಗೀತಾ, ಅಶ್ವಿನಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.