ಬಿಸಿಯೂಟದ ಖರ್ಚು ನೀಗಿಸಲು ಪರದಾಟ
- ಶಿಕ್ಷಕರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ
- ಗುಣಮಟ್ಟದ ಆಹಾರ ನೀಡುವುದೇ ಸವಾಲು
ಕೆಲ ದಿನಗಳಿಂದ ಸಾರ್ವಜನಿಕರನ್ನು ಆರ್ಥಿಕವಾಗಿ ಬಾಧಿಸುವಂತೆ ಮಾಡಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಈಗ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೂ ತಟ್ಟಿದ್ದು, ಆಹಾರ ಪದಾರ್ಥಗಳ ದರ ಏರಿಕೆಯಿಂದಾಗಿ ಜಿಲ್ಲೆಯ ಬಹುಪಾಲು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಖರ್ಚು ನೀಗಿಸಲು ಶಿಕ್ಷಕರು ಪರದಾಡುವಂತಾಗಿದೆ.
ಮಾರುಕಟ್ಟೆಯಲ್ಲಿ ಬೇಳೆ, ಅಡುಗೆ ಎಣ್ಣೆ, ಮೊಟ್ಟೆ ಸೇರಿ ದಿನನಿತ್ಯ ಬಳಸುವ ತರಕಾರಿಗಳ ಬೆಲೆಗಳಲ್ಲಿ ಏರಿಕೆಯಾಗಿದೆ. ಸರ್ಕಾರ ನಿಗದಿ ಪಡಿಸಿರುವ ಅನುದಾನದಲ್ಲಿ ಗುಣಮಟ್ಟದ ಆಹಾರ ನೀಡುವುದು ಕಷ್ಟವಾಗಿದೆ. ಪೌಷ್ಟಿಕತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೊಂದಿಗೆ ಶಿಕ್ಷಕರು ಪ್ರತಿದಿನ ಸಿಲುಕಿದ್ದಾರೆ.
ಮಕ್ಕಳಿಗೆ ಗುಣಮಟ್ಟದ ಹಾಗೂ ಪೌಷ್ಟಿಕಾಂಶ ಇರುವ ಆಹಾರ ನೀಡುವ ಉದ್ದೇಶದಿಂದ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಆದರೆ, ಸರ್ಕಾರ ನಿಗದಿಪಡಿಸಿರುವ ಅನುದಾನದಲ್ಲಿ ಗುಣಮಟ್ಟದ ಆಹಾರ ನೀಡುವುದು ಶಿಕ್ಷಕರಿಗೆ ಕಷ್ಟವಾಗಿದೆ. ಮಕ್ಕಳ ಪೌಷ್ಟಿಕತೆಗೆ ಧಕ್ಕೆ ಬರಬಾರದೆಂಬ ಉದ್ದೇಶದಿಂದ ಎಷ್ಟೋ ಶಾಲೆಗಳಲ್ಲಿ ಶಿಕ್ಷಕರೇ ಹೆಚ್ಚುವರಿ ಹಣವನ್ನು ಕೈಯಿಂದ ಭರಿಸುತ್ತಿದ್ದಾರೆ. ಇನ್ನು ಕೆಲವರು ಹೆಚ್ಚುವರಿ ಹಣವನ್ನು ಭರಿಸಲಾಗದೆ ಬಿಸಿಯೂಟಕ್ಕೆ ಬಳಸಬೇಕಿರುವ ನಿಗದಿತ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದಾರೆ. ಆದರೆ, ಇದರ ಪರಿಣಾಮವನ್ನು ಮಕ್ಕಳು ಎದುರಿಸುವಂತಾಗಿದೆ.
ಸಾಮಾನ್ಯವಾಗಿ ಶಾಲೆಗಳಿಗೆ ಸರ್ಕಾರವೇ ಟೆಂಡರ್ ಮೂಲಕ ಎಣ್ಣೆ, ಬೇಳೆಯನ್ನು ಸರಬರಾಜು ಮಾಡುತ್ತದೆ. ಆದರೆ, ಈ ಶೈಕ್ಷಣಿನ ಸಾಲಿನಲ್ಲಿ ಇನ್ನೂ ಎಣ್ಣೆ, ಬೇಳೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದರಿಂದ ಶಾಲೆಗಳಲ್ಲಿ ಶಿಕ್ಷಕರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಮೈಸೂರು ಜಿಲ್ಲೆಯಲ್ಲಿ 2,286 ಶಾಲೆಗಳಲ್ಲಿ ಬಿಸಿಯೂಟದ ಯೋಜನೆ ಅನುಷ್ಠಾನಗೊಂಡಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1.69 ಲಕ್ಷ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. 4600 ಸಿಬ್ಬಂದಿ ಬಿಸಿಯೂಟದ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
‘ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವುದು ನಮ್ಮ ಧರ್ಮ. ಆದರೆ, ನಿರಂತರವಾಗಿ ಬೆಲೆ ಏರಿಕೆ ಆಗುತ್ತಿರುವ ಕಾರಣ ಈ ಯೋಜನೆಯನ್ನು ಸಮರ್ಪಕವಾಗಿ ನಡೆಸುವುದು ದಿನದಿಂದ ದಿನಕ್ಕೆ ಸವಾಲಾಗುತ್ತಿದೆ’ ಎಂದು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರೆ.
ಸಂಪನ್ಮೂಲ ಉಳಿಸಲಿ:
ಪ್ರತಿ ಗ್ರಾಮ ಪಂಚಾಯಿತಿ ಅಥವಾ ಹೋಬಳಿ ಕೇಂದ್ರಗಳಲ್ಲಿ ಸಮೂಹ ಅಡುಗೆ ತಯಾರಿಕಾ ಕೇಂದ್ರವನ್ನು ಸ್ಥಾಪಿಸಬೇಕು. ಅಲ್ಲಿಂದಲೇ ಶಾಲೆಗಳಿಗೆ ಬಿಸಿಯೂಟ ಸರಬರಾಜು ಮಾಡಬೇಕು. ಆಗ ಸಂಪನ್ಮೂಲ ಉಳಿಕೆಯಾಗಿ ಶಿಕ್ಷಕರು ತರಕಾರಿ, ಬೇಳೆ, ಎಣ್ಣೆ, ಮೊಟ್ಟೆ, ಸಾಂಬಾರ್ ಪದಾರ್ಥ ಖರೀದಿಸಲು ತೆಗೆದುಕೊಳ್ಳುವ ಸಾರಿಗೆ ವೆಚ್ಚ ಹಾಗೂ ಸಮಯ ಉಳಿತಾಯವಾಗುತ್ತದೆ ಎನ್ನುತ್ತಾರೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೈಸೂರು ಜಿಲ್ಲೆ ಪ್ರಧಾನ ಕಾರ್ಯದರ್ಶಿ ಡಿ.ಮಾಲೇಗೌಡ.
ಹೆಚ್ಚುವರಿ ಹಣ
ಕಳೆದ ತ್ರೈಮಾಸಿಕದಲ್ಲಿ ಅಡುಗೆ ಎಣ್ಣೆಗೆ ಸರ್ಕಾರ ನಿಗದಿಪಡಿಸಿರುವ ದರ 160 ರೂಪಾಯಿ. ಆದರೆ, ಮಾರುಕಟ್ಟೆಯಲ್ಲಿ ಒಂದು ಲೀಟರ್‌ಗೆ ಎಣ್ಣೆಗೆ 180 ರೂ. ದರವಿದೆ. ಅದೇ ರೀತಿ ತೊಗರಿ ಬೇಳೆಗೆ ಸರ್ಕಾರ ನೀಡುವ ದರ 103 ರೂ. ಆದರೆ, ಮಾರುಕಟ್ಟೆಯಲ್ಲಿ 140 ರೂ. ಇದೆ. ಇನ್ನು ಮೊಟ್ಟೆ ಬೆಲೆ ಸರಕಾರ ನಿಗದಿಪಡಿಸಿರುವುದು 6 ರೂ. ಆದರೆ, ಅಂಗಡಿಗಳಲ್ಲಿ ಒಂದು ಮೊಟ್ಟೆಗೆ 7.50 ಪೈಸೆ ಇದೆ. ಹೀಗಿರುವಾಗ ಬಿಸಿಯೂಟ ಯೋಜನೆಯನ್ನು ಶಾಲೆಗಳಲ್ಲಿ ಹೇಗೆ ತಾನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ? ಅಲ್ಲದೆ, ಹೆಚ್ಚುವರಿ ಹಣ ಶಿಕ್ಷಕರಿಗೆ ಆರ್ಥಿಕ ಹೊರೆಯನ್ನೂ ಉಂಟು ಮಾಡಿದೆ.
ಯಾವ ಪ್ರಮಾಣ?
ಆರರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯಾದರೆ 30 ಗ್ರಾಂ ಬೇಳೆ, 7.5 ಗ್ರಾಂ ಎಣ್ಣೆ ಹಾಗೂ 75 ಗ್ರಾಂ ತರಕಾರಿ ಬಳಸಬೇಕು. 1ರಿಂದ 5ನೇ ತರಗತಿ ವಿದ್ಯಾರ್ಥಿಯಾದರೆ 20 ಗ್ರಾಂ ಬೇಳೆ ಮತ್ತು 5 ಗ್ರಾಂ ಎಣ್ಣೆ ಹಾಗೂ 50 ಗ್ರಾಂ ತರಕಾರಿ ಬಳಸಬೇಕಿದೆ. ಒಂದು ಮೊಟ್ಟೆಗೆ 6 ರೂ. ಗಳನ್ನು ಸರ್ಕಾರ ನಿಗದಿಪಡಿಸಿದರೆ. 5 ರೂ. 50 ಪೈಸೆ ಮೊಟ್ಟೆಗೆ, 50 ಪೈಸೆ ಯನ್ನು ಮೊಟ್ಟೆ ಸುಲಿಯುವವರಿಗೆ ನೀಡಬೇಕಿದೆ.
ಕಳೆದ ತ್ರೈಮಾಸಿಕದಲ್ಲಿ ನಿಗದಿಪಡಿಸಿರುವ ದರ
ಸರ್ಕಾರಿ ದರ:
ತೊಗರಿ ಬೇಳೆ- 103.50 ರೂ. (ಕೆಜಿ)
ಅಡುಗೆ ಎಣ್ಣೆ- 160 ರೂ. (ಲೀಟರ್)
ಮಾರುಕಟ್ಟೆ ದರ
"
ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದು ಗಮನಕ್ಕೆ ಬಂದಿದೆ. ಆದರೆ, ಇದು ದೀರ್ಘಕಾಲ ಇರುವುದಿಲ್ಲ. ಇದರಿಂದ ಅಂತಹ ಸಮಸ್ಯೆ ಕಂಡು ಬಂದಿಲ್ಲ. ಸರ್ಕಾರದ ಟೆಂಡರ್ ಮುಗಿದು ಶಾಲೆಗಳಿಗೆ ಎಣ್ಣೆ, ಬೇಳೆ ಸರಬರಾಜು ಮಾಡಿದರೆ ಶಿಕ್ಷಕರಿಗೆ ಹೆಚ್ಚುವರಿ ಹಣ ಭರಿಸುವ ಅನಿವಾರ್ಯತೆ ಸೃಷ್ಟಿಯಾಗುವುದಿಲ್ಲ.
— ಡಿ.ಉದಯ್‌ಕುಮಾರ್ ಉಪ ನಿರ್ದೇಶ, ಶಾಲಾ ಶಿಕ್ಷಣ ಇಲಾಖೆ