ದಸರಾ ಕಂಬಳ ವಿಚಾರವಾಗಿ ಚರ್ಚಿಸಲು ಮೈಸೂರು ನಗರದ ಜಲದರ್ಶಿ ಅತಿಥಿ ಗೃಹದಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ರಾಜ್ಯ ರೈತ ಸಂಘ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. ಮೇಜರ್ ಒಂಬತ್ಕೆರೆ, ಪರಶುರಾಮೇಗೌಡ, ಮ.ಗು. ಸದಾನಂದಯ್ಯ, ಎನ್.ಎಸ್. ರಂಗರಾಜು, ಬಾನು ಮೋಹನ್ ಹಾಗೂ ಇತರರು ಇದ್ದರು.
ಮೈಸೂರು: ಮೈಸೂರಿನ ಸಂಸ್ಕೃತಿಗೆ ಪೂರಕವಲ್ಲದ ಕಂಬಳ ಕ್ರೀಡೆಯನ್ನು ನಾಡಹಬ್ಬ ದಸರಾ ಉತ್ಸವದಲ್ಲಿ ಆಯೋಜಿಸಲು ಸರ್ಕಾರ ಕೈಗೊಂಡಿರುವ ತೀರ್ಮಾನಕ್ಕೆ ನಗರದ ಜಲದರ್ಶಿ ಅತಿಥಿ ಗೃಹದಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಆಯೋಜನೆ ವಿರುದ್ಧ ಹಂತ ಹಂತವಾಗಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಸಂದರ್ಭದಲ್ಲಿ ದಸರಾವನ್ನು ಅದ್ದೂರಿಯಾಗಿ ಆಚರಿಸುವುದು ಸರಿಯಲ್ಲ. ಅಲ್ಲದೆ, ಕಂಬಳ ಮೈಸೂರು ಸಂಸ್ಕೃತಿಗೆ ಪೂರಕವಾಗಿಲ್ಲ. ಹೀಗಾಗಿ ಕಂಬಳ ಆಯೋಜಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ವಿವಿಧ ಸಂಘಟನೆಗಳ ಪ್ರಮುಖರು ಎಚ್ಚರಿಸಿದರು.
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು: ಕಂಬಳ ಹಣವನ್ನು ರಸ್ತೆ ಅಭಿವೃದ್ಧಿಗೆ ವಿನಿಯೋಗಿಸುವುದು ಸೂಕ್ತ. ದಸರಾ ಸಂದರ್ಭದಲ್ಲಿ ತರಾತುರಿಯಲ್ಲಿ ಗುಂಡಿ ಮುಚ್ಚುವ ಕಾಮಗಾರಿ ನಡೆಸುವ ಬದಲು ಈಗಿನಿಂದಲೇ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಬೇಕು, ಕಂಬಳ ಕರಾವಳಿಯಲ್ಲಿ ಜನಪ್ರಿಯ ಕ್ರೀಡೆಯಾಗಿದೆ. ಆದರೆ ಮೈಸೂರು ದಸರಾದಲ್ಲಿ ಕಂಬಳ ಬೇಡ. ಮರ ಗಿಡಗಳನ್ನು ಕಡಿದು ಕಂಬಳ ನಡೆಸುವ ಅವಶ್ಯಕತೆಯೇ ಇಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ದಸರಾದಲ್ಲಿ ಮೈಸೂರಿನ ಪರಂಪರೆ ಉಳಿಸಿಕೊಂಡು ಹೋಗಬೇಕು. ಆದರೆ, ದಸರಾ ವರ್ಷದಿಂದ ವರ್ಷಕ್ಕೆ ವಾಣಿಜ್ಯೀಕರಣಗೊಳ್ಳುತ್ತಿದೆ. ಈ ಬಾರಿ ಕಂಬಳ ನಡೆಸುವವರು ಮುಂದಿನ ವರ್ಷ ಜಲ್ಲಿ ಕಟ್ಟು, ಕೋಳಿಯ ಜೂಜಾಟ ನಡೆಸುವ ಸಾಧ್ಯತೆಯೂ ಇದೆ. ಹಾಗಾಗಿ ಕಂಬಳಕ್ಕೆ ಅವಕಾಶ ನೀಡಬಾರದು. ಕಂಬಳಕ್ಕೂ ಮೈಸೂರಿಗೂ ಯಾವುದೇ ಸಂಬಂಧವಿಲ್ಲ. ಅದು ನಮ್ಮ ಪರಂಪರೆ ಅಲ್ಲ ಎಂದು ಬಹುತೇಕರು ಅಭಿಪ್ರಾಯಪಟ್ಟರು.
ಮೈಸೂರಿಗೆ ಹಲವಾರು ಸಾಂಸ್ಕೃತಿಕ ಸಂಬಂಧ ಇದೆ. ಆದರೆ ಅದನ್ನೇ ಮುಂದಿಟ್ಟುಕೊಂಡು ಕಂಬಳ ನಡೆಸುವುದು ಸರಿಯಲ್ಲ. ಕಂಬಳಕ್ಕೆ ತನ್ನದೇ ಅಸ್ಮಿತೆ ಇದೆ. ಮೈಸೂರಿನಲ್ಲಿ ಕಂಬಳ ಆಯೋಜಿಸಿದರೆ ಆ ಅಸ್ಮಿತೆ ನಾಶವಾಗುತ್ತದೆ. ಗದ್ದೆಯಲ್ಲಿ ನಡೆಯಬೇಕಾದ ಕ್ರೀಡೆಯನ್ನು ನಗರದಲ್ಲಿ ನಡೆಸುವುದು ಎಷ್ಟು ಸರಿ ಎಂಬ ಪ್ರಶ್ನೆ ಸಭೆಯಲ್ಲಿ ಎದುರಾಯಿತು.
ಮೈಸೂರಿನ ಹಲವಾರು ಕಲೆಗಳು ನಾಶವಾಗಿ ಹೋಗುತ್ತಿದೆ. ಆದರೆ ದಸರಾದಲ್ಲಿ ಅವುಗಳಿಗೆ ಪ್ರೋತ್ಸಾಹ ನೀಡುತ್ತಿಲ್ಲ. ಕಲಾವಿದರಿಗೆ ಅತ್ಯಲ್ಪ ಪ್ರಮಾಣದಲ್ಲಿ ಗೌರವ ಧನ ನೀಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಪ್ರಸಕ್ತ ವರ್ಷ ಕುಡಿಯಲು ನೀರು ಸಿಗುತ್ತೋ ಎಂಬ ಚಿಂತೆ ಜನರನ್ನು ಕಾಡುತ್ತಿದೆ. ಆದರೆ, ಸರ್ಕಾರಕ್ಕೆ ಕಂಬಳದ ಚಿಂತೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಯಿತು.
ದಸರಾಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಆದರೆ, ಕರಾವಳಿಯ ಕಂಬಳ ಇಲ್ಲಿ ನಡೆಸುವುದು ಸರಿ ಅಲ್ಲ. ಕಂಬಳ ಕಾರವಳಿಯಲ್ಲಿ ನಡೆಸಿದರೆ ಅದಕ್ಕೊಂದು ಸಾಂಸ್ಕೃತಿಕ ಮೌಲ್ಯ ಇರುತ್ತದೆ. ಆದರೆ ಇಲ್ಲಿ ನಡೆಸಿದರೆ ಮೌಲ್ಯ ಕಳೆದುಕೊಳ್ಳುತ್ತದೆ. ದಸರಾ ಇತಿಹಾಸದಲ್ಲಿ ಯಾವ ವರ್ಷವೂ ಕಂಬಳ ನಡೆಸಲಿಲ್ಲ. ಮೈಸೂರು ದಸರಾವನ್ನು ಮಂಗಳೂರಿನಲ್ಲಿ ನಡೆಸಲು ಸಾಧ್ಯವೇ? ದಸರಾದಲ್ಲಿ ಕಂಬಳ ನಡೆಸುವ ಬದಲು ಜಂಬೂಸವಾರಿ ಮೆರವಣಿಗೆ ಸಂದರ್ಭ ಕಂಬಳದ ಸ್ತಬ್ಧಚಿತ್ರ ನಿರ್ಮಾಣ ಮಾಡಲಿ ಎಂಬ ಸಲಹೆ ಕೇಳಿಬಂತು.
ದಸರಾ ಸಂದರ್ಭದಲ್ಲಿ ಜನ ಹಾಗೂ ವಾಹನ ದಟ್ಟಣೆಯ ಒತ್ತಡ ಇರುತ್ತದೆ. ಕಂಬಳ ಮಾಡಿದರೆ ಮತ್ತಷ್ಟು ಒತ್ತಡ ಆಗುತ್ತದೆ. ಜನರ ವಿರೋಧವನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ನೀರಿನ ಸಂಘರ್ಷ ಇರುವ ಸಂದರ್ಭದಲ್ಲಿ ದಸರಾವನ್ನು ಅದ್ದೂರಿಯಾಗಿ ಆಚರಿಸುವುದು ಸರಿಯಲ್ಲ. ನಮ್ಮ ಮನೆಯಲ್ಲಿ ಕಷ್ಟ ಇರುವಾಗ ಅದ್ದೂರಿತನ ಸರಿ ಅಲ್ಲ. ಮೈಸೂರಿಗೆ ದಸರಾ ನೋಡಲು ಜನರು ವಿವಿಧ ಭಾಗಗಳಿಂದ ಜನರು ಬರಲಿ. ಅದೇ ರೀತಿ ಮೈಸೂರಿಗರು ಕಂಬಳ ನೋಡಲು ಕರಾವಳಿಗೆ ಹೋದರೆ ಅಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗ ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಮೇಜರ್ ಒಂಬತ್ಕೆರೆ, ಪರಶುರಾಮೇಗೌಡ, ಬಡಗಲಪುರ ನಾಗೇಂದ್ರ, ಮ.ಗು. ಸದಾನಂದಯ್ಯ, ಹೊಸಕೋಟೆ ಬಸವರಾಜ್, ಎನ್.ಎಸ್. ರಂಗರಾಜು, ಬಾನು ಮೋಹನ್, ಬಾನು ಪ್ರಶಾಂತ್, ಮಂಜು ಕಿರಣ್, ಪ್ರೊ.ನಬಿಜಾನ್, ಸಿದ್ದೇಗೌಡ, ಶ್ರೀನಿವಾಸ ಮಿತ್ರ , ಗೋಕುಲ್ ಗೋವರ್ಧನ್, ಲೀಲಾ ಶಿವಕುಮಾರ್, ಅಂಜನಾ, ಪ್ರಭಾ, ಸ್ವಪ್ನ , ಗಾಯತ್ರಿ, ಗುರುಸ್ವಾಮಿ, ಅಕ್ಬರ್, ಬಂಗಾರ ನಾಯಕ, ಗಣೇಶ್, ಓಂ ಶಿವಚರಣ್, ಶೈಲಜೇಶ್, ರವಿ ಬಳೆ, ರಾಮಸ್ವಾಮಿ, ಸುಬ್ಬರಾವ್, ಗೋಪಾಲ್ , ಸುಧೀರ್ ಗಣಪತಿ , ಉಗ್ರನರಸಿಂಹೇಗೌಡ , ಐಶ್ವರ್ಯ, ಕೃಷ್ಣ, ಉಮೇಶ್ ಗೌಡ, ರಾಮು ಇದ್ದರು.