ಪರಿಸರಕ್ಕಾಗಿ ನಾವು ಸಂಘಟನೆ ವತಿಯಿಂದ ಸೋಮವಾರ ಮಿಲನ್ ಫಂಕ್ಷನ್ ಹಾಲ್ ಎದುರಿನ ಉದ್ಯಾನದಲ್ಲಿ ಸಭೆ ನಡೆಯಿತು. ಪರಶುರಾಮೇಗೌಡ, ರವಿ ಬಳೆ, ಯು.ಎನ್.ರವಿಕುಮಾರ್, ಮನ್ಸೂರ್ ಅಹ್ಮದ್, ಸುಧೀರ್ ಒಂಬತ್ಕೆರೆ, ಡಾ.ಎನ್.ಎಸ್.ರಂಗರಾಜು, ಕೆ.ಕಾಳಚನ್ನೇಗೌಡ ಇತರರಿದ್ದರು.
- ಸಾರ್ವಜನಿಕರು, ಪರಿಸರ ಹೋರಾಟಗಾರರಿಂದ ವಿರೋಧ
ನಗರದ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ 278 ಮರಗಳನ್ನು ಸ್ಥಳಾಂತರಿಸುವ ಯೋಜನೆಗೆ ಸಾರ್ವಜನಿಕರು ಹಾಗೂ ಪರಿಸರ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮರಗಳ ಸ್ಥಳಾಂತರ ಹಾಗೂ ಸಾವಿರ ಗಿಡಗಳನ್ನು ನೆಡುವ ಪ್ರಕ್ರಿಯೆ ಕುರಿತು ಸ್ಥಳೀಯರು, ತಜ್ಞರು ಮತ್ತು ಪರಿಸರ ಕಾರ್ಯಕರ್ತರೊಂದಿಗೆ ತಕ್ಷಣ ಸಭೆ ನಡೆಸುವಂತೆ ಒತ್ತಾಯಿಸಿ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆಯಲು ಸರ್ವಾನುಮತದಿಂದ ನಿರ್ಧರಿಸಲಾಯಿತು.
ಮಿಲನ್ ಫಂಕ್ಷನ್ ಹಾಲ್ ಎದುರಿನ ಉದ್ಯಾನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಲವು ಪ್ರಶ್ನೆಗಳು ಕೇಳಿಬಂದವು. ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ಮರಗಳ ಸ್ಥಳಾಂತರ ಮತ್ತು ಪುನರ್‌ನೆಡುವಿಕೆ ಕುರಿತು ಪಾರದರ್ಶಕ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದರು.
ಪರಿಸರ ಪ್ರೇಮಿ ರವಿ ಬಳೆ ಮಾತನಾಡಿ, 278 ಮರಗಳನ್ನು ಎಲ್ಲಿ ಸ್ಥಳಾಂತರಿಸಲಾಗುತ್ತದೆ, ಅವು ಬದುಕುಳಿಯಲು ಯಾವ ಸಿದ್ಧತೆಗಳನ್ನು ಮಾಡಲಾಗಿದೆ ಹಾಗೂ ಅದರ ಜವಾಬ್ದಾರಿ ಯಾರದ್ದು ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು.
ಪರಿಸರ ಹೋರಾಟಗಾರ ಮನ್ಸೂರ್ ಅಹ್ಮದ್, ಎಲ್ಲ ಮರಗಳ ಸ್ಥಳಾಂತರ ಹಾಗೂ 1,000 ಗಿಡಗಳನ್ನು ನೆಟ್ಟು ಬೆಳೆಸುವ ವಿಚಾರದಲ್ಲಿ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಜ್ಞರು, ಸ್ಥಳೀಯರು ಹಾಗೂ ಪರಿಸರ ಕಾರ್ಯಕರ್ತರೊಂದಿಗೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಲ ತಜ್ಞ ಯು.ಎನ್.ರವಿಕುಮಾರ್ ಮಾತನಾಡಿ, ಇಂದಿನ ತಂತ್ರಜ್ಞಾನದ ಮೂಲಕ ಮರಗಳನ್ನು ಉಳಿಸಿಕೊಂಡೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬಹುದು. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ನಿರಂತರವಾಗಿ ತೆರವುಗೊಳಿಸಿದರೆ ಮೈಸೂರು ನಗರದಲ್ಲಿ ‘ಹೀಟ್ ಐಲ್ಯಾಂಡ್’ ಪರಿಣಾಮ ಹೆಚ್ಚುವ ಜತೆಗೆ ಮಳೆನೀರು ನೆಲಕ್ಕೆ ಇಂಗುವ ಪ್ರಮಾಣವೂ ಕಡಿಮೆಯಾಗಲಿದೆ ಎಂದು ಎಚ್ಚರಿಸಿದರು.
ಸಿದ್ದಿಕಿ ನಗರದ ಮದರಸಾದ ಅಧ್ಯಾಪಕ ಮೌಲಾನಾ ಸಿದ್ದಿಕಿ, ಮದರಸಾದ ವಿದ್ಯಾರ್ಥಿ ಸಮೀವುಲ್ಲ, ಪರಿಸರ ಹೋರಾಟಕ್ಕೆ ತಮ್ಮ ಮದರಸಾದ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.
ರಂಗ ಕಲಾವಿದರಾದ ಚಕ್ರಪಾಣಿ ಮತ್ತು ಸಲ್ಮಾ ಪರಿಸರ ಗೀತೆಗಳನ್ನು ಹಾಡಿದರು.
ನಿವೃತ್ತ ಮೇಜರ್ ಜನರಲ್ ಸುಧೀರ್ ಒಂಬತ್ಕೆರೆ, ನಿವೃತ್ತ ಪ್ರಾಧ್ಯಾಪಕರಾದ ಡಾ.ಎನ್.ಎಸ್.ರಂಗರಾಜು, ಕೆ.ಕಾಳಚನ್ನೇಗೌಡ, ಪರಿಸರ ಹೋರಾಟಗಾರ್ತಿ ಭಾನೂ ಮೋಹನ್, ಪರಿಸರಕ್ಕಾಗಿ ನಾವು ಸಂಘಟನೆಯ ನಬಿಜಾನ್, ನಸ್ರುಲ್ಲಾ ಖಾನ್, ಪ್ರಭಾ, ಅಂಜನಾ, ಶೋಭಾ, ಸ್ಮಿತಾ, ಶಶಿಕಲಾ, ಭಾನೂ ಪ್ರಶಾಂತ್, ವಿಶ್ವನಾಥ್, ಫಯಾಜ್ ಮಲ್ಲಿಕ್, ಗಣೇಶ್, ಸಂಜಯ್, ಅಕ್ಬರ್, ಸಾರ್ಥಕ್, ಮಹಾಂತೇಶ್, ಲಿಖಿತ್, ಹರ್ಷಿತ್, ಕರಿಘಟ್ಟ ರಮೇಶ್, ಬಂಗಾರ ನಾಯಕ ಇದ್ದರು.