ಸಂಗೀತ ವಿವಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಡಾ.ಆರ್.ಕೆ.ಉಷಾ, ಪ್ರೊ.ಎಂ.ಜಿ.ಮಂಜುನಾಥ, ಪ್ರೊ.ಕೆ.ರಾಮಮೂರ್ತಿ ರಾವ್, ಡಾ.ಕೃಪಾಪಡ್ಕೆ, ಅನಿತಾ ಇತರರಿದ್ದರು. 
ಮೈಸೂರು

ಕಲಾ ಪರಂಪರೆ ಮುಂದುವರಿಸಲು ಶ್ರಮಿಸಿ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಂಸ್ಕೃತಿ ಸಚಿವಾಲಯದ ಮಾಜಿ ಸದಸ್ಯ ಕಾರ್ಯದರ್ಶಿ ಡಾ.ಆರ್.ಕೆ.ಉಷಾ ಸಲಹೆ
  • ಮನಸ್ ಟು ಮಂಚ್ ವಿಶೇಷ ಕಾರ್ಯಾಗಾರ

ನಾವು ಕಲಿತ ಕಲೆಯನ್ನು ನಮ್ಮಲ್ಲೇ ಉಳಿಸಿಕೊಳ್ಳದೆ ಮುಂದಿನ ಪೀಳಿಗೆಗೆ ಧಾರೆ ಎರೆಯುವುದು ಪ್ರತಿಯೊಬ್ಬ ಕಲಾವಿದನ ಜವಾಬ್ದಾರಿಯಾಗಿದೆ. ಒಂದು ಪೀಳಿಗೆಯ ಗುರುಗಳು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳನ್ನು ಬೆಳೆಸಿದಾಗ ಮಾತ್ರ ನೃತ್ಯ ಮತ್ತು ಕಲಾ ಪರಂಪರೆ ನಿರಂತರವಾಗಿ ಮುಂದುವರಿಯಲು ಸಾಧ್ಯ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಮಾಜಿ ಸದಸ್ಯ ಕಾರ್ಯದರ್ಶಿ ಡಾ.ಆರ್.ಕೆ.ಉಷಾ ಹೇಳಿದರು.

ನಗರದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಹಾಗೂ ತಪಸ್ಯ ಆರ್ಟ್ ಆಂಡ್ ಕಲ್ಚರಲ್ ಸೆಂಟರ್ ಸಹಯೋಗದೊಂದಿಗೆ ಆಯೋಜಿಸಿದ್ದ ‘ಮನಸ್ ಟು ಮಂಚ್’ ಎಂಬ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದರು.
ನನ್ನ ಬದುಕಿನ ಅವಿಭಾಜ್ಯ ಅಂಗ ನೃತ್ಯವೇ ಆಗಿದ್ದು, ಯಾವುದನ್ನೇ ಯೋಚಿಸಿದರೂ ಮೊದಲು ಅದನ್ನು ನೃತ್ಯದ ಮೂಲಕ ಹೇಗೆ ಅಭಿವ್ಯಕ್ತಿಸಬಹುದು ಎಂಬ ಆಲೋಚನೆ ಬರುತ್ತದೆ. ನಂತರ ಸಂಗೀತ ಹಾಗೂ ಇತರ ಕಲಾ ಪ್ರಕಾರಗಳತ್ತ ಗಮನ ಹರಿಯುತ್ತದೆ. ಹಲವು ಗುರುಗಳಿಂದ ಪಡೆದ ತರಬೇತಿ ತಮ್ಮ ಮನಸ್ಸಿನಲ್ಲಿ ಸಹಜವಾಗಿ ಬೆರೆತು ಹೋಗಿದೆ ಎಂದರು.
ನಾವು ಕಲಿತ ಕಲೆಗೆ ಮರಳಿ ಏನು ಕೊಡುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕು. ಕಲೆಯ ಬೆಳವಣಿಗೆ ಕೇವಲ ವೇದಿಕೆಯ ಮೇಲಿನ ಪ್ರದರ್ಶನದಿಂದ ಸಾಧ್ಯವಿಲ್ಲ. ಒಂದು ಪೀಳಿಗೆಯ ಗುರುಗಳು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳನ್ನು ಬೆಳೆಸಿದಾಗ ಮಾತ್ರ ಕಲಾ ಪರಂಪರೆ ಮುಂದುವರಿಯುತ್ತದೆ ಎಂದು ಹೇಳಿದರು.
ಮನೆ, ಮಕ್ಕಳು, ಅಡುಗೆ, ಸಂಸಾರ ಸೇರಿದಂತೆ ಹಲವು ಜವಾಬ್ದಾರಿಗಳ ನಡುವೆಯೂ ಕಲೆಯನ್ನು ಮುಂದಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿರುವ ಕಲಾವಿದರು ಮತ್ತು ಗುರುಗಳ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗಿಂತ ಅವರ ಮೂಲಕ ಕಲೆ ಎಷ್ಟು ದೂರ ಸಾಗುತ್ತದೆ ಎಂಬುದೇ ಮುಖ್ಯ ಎಂದರು.
ಕಲಾ ಕ್ಷೇತ್ರದಲ್ಲಿ ಯಾರ ಕೊಡುಗೆಯೂ ಸಣ್ಣದಲ್ಲ. ವೇದಿಕೆಯ ಮೇಲೆ ಪ್ರದರ್ಶನ ನೀಡುವ ಕಲಾವಿದರಿಂದ ಹಿಡಿದು ಧ್ವನಿ, ಬೆಳಕು, ವೇದಿಕೆ ಹಾಗೂ ಕಾರ್ಯಕ್ರಮದ ವ್ಯವಸ್ಥೆ ಮಾಡುವವರೆಗೆ ಪ್ರತಿಯೊಬ್ಬರೂ ಕಲೆಯ ಬೆಳವಣಿಗೆಯಲ್ಲಿ ತಮ್ಮದೇ ಆದ ಪಾತ್ರ ವಹಿಸುತ್ತಾರೆ. ಕಲಾವಿದರನ್ನು ಕಾರ್ಯಕ್ರಮಕ್ಕೆ ಕರೆತರುವ ಚಾಲಕರೂ ತಮ್ಮದೇ ರೀತಿಯಲ್ಲಿ ಕಲೆಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಕಲಾ ಕ್ಷೇತ್ರದಲ್ಲಿ ಹಲವು ಪದರಗಳಿದ್ದು, ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವವರು, ಮನೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವವರು, ನಿರ್ದಿಷ್ಟ ಪರಂಪರೆಯನ್ನು ಉಳಿಸಿಕೊಂಡು ಹೋಗುವವರು ಎಲ್ಲರೂ ಅಗತ್ಯ. ಒಬ್ಬರ ಕಲಾ ಪರಂಪರೆಯನ್ನು ಮತ್ತೊಬ್ಬರು ಕೀಳಾಗಿ ನೋಡದೆ, ಪ್ರತಿಯೊಬ್ಬರ ಕೊಡುಗೆಯನ್ನೂ ಗೌರವಿಸಬೇಕು ಎಂದು ಸಲಹೆ ನೀಡಿದರು.
ಕಲಾವಿದನ ಮೌಲ್ಯವನ್ನು ವೇದಿಕೆಯ ಮೇಲಿನ ಪ್ರದರ್ಶನದ ಅವಧಿಯಿಂದ ಮಾತ್ರ ಅಳೆಯಬಾರದು. ಅರ್ಧ ಗಂಟೆಯ ಕಲಾ ಪ್ರದರ್ಶನದ ಹಿಂದೆ ಹಲವು ವರ್ಷಗಳ ಸಾಧನೆ, ಅಭ್ಯಾಸ, ತರಬೇತಿ ಮತ್ತು ತ್ಯಾಗ ಇರುತ್ತದೆ ಎಂದರು.
ಕಲೆಯಲ್ಲಿ ತೊಡಗಿಸಿಕೊಂಡಿರುವುದೇ ಒಂದು ವಿಶೇಷ ಆಶೀರ್ವಾದ. ನಾವು ಬೇರೆ ಯಾವುದೇ ವೃತ್ತಿಯಲ್ಲಿ ಇರಬಹುದಿತ್ತು. ಆದರೆ ನಮಗೆ ಕಲೆ ಸಿಕ್ಕಿದೆ. ಆ ಕಲೆಯನ್ನು ನಮ್ಮಲ್ಲೇ ಉಳಿಸಿಕೊಳ್ಳದೆ ಮುಂದಿನ ಪೀಳಿಗೆಗೆ ನೀಡುವುದು ನಮ್ಮ ಹೊಣೆ ಎಂದು ಹೇಳಿದರು.
ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ, ನೃತ್ಯ ಗುರುಗಳಾದ ಪ್ರೊ.ಕೆ.ರಾಮಮೂರ್ತಿ ರಾವ್, ಡಾ.ಶೀಲಾ ಶ್ರೀಧರ್, ಡಾ.ಕೃಪಾಪಡ್ಕೆ, ಅನಿತಾ, ಶ್ರೀಲಕ್ಷ್ಮೀ ಕುಮಾರ್, ವಿದ್ಯಾರಾವ್ ಇತರರಿದ್ದರು.