ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಕೃಷಿ ಪರಿಕರಗಳ ಸರಬರಾಜುದಾರರ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಅಧಿಕಾರಗಳ ಸಭೆ ನಡೆಸಿದರು. ಯುಕೇಶ್ ಕುಮಾರ್, ಕೆ.ಎಚ್.ರವಿ, ಮಲ್ಲಿಕ್, ರಾಮಕೃಷ್ಣ, ವೆಂಕಟೇಶ ಇನ್ನಿತರರಿದ್ದರು.
- ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಎಚ್ಚರಿಕೆ
- ಅಧಿಕಾರಿಗಳೊಂದಿಗೆ ಡಿಸಿ ಸಭೆ
ಮೈಸೂರು: ರೈತರಿಗೆ ಅಗತ್ಯವಿಲ್ಲದ ರಸಗೊಬ್ಬರ ಖರೀದಿಸುವಂತೆ ರಸಗೊಬ್ಬರ ಮಾರಾಟಗಾರರು ಒತ್ತಾಯ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಸಮರ್ಪಕ ಪೂರೈಕೆ ಸಂಬಂಧ ಕೃಷಿ ಪರಿಕರಗಳ ಸರಬರಾಜುದಾರರ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಅಧಿಕಾರಗಳ ಸಭೆ ನಡೆಸಿ ಮಾತನಾಡಿದರು.
ರೈತರಿಗೆ ಯೂರಿಯಾ ಕೊರತೆಯಾಗದಂತೆ ಮಾರಾಟ ಮಾಡಲು ಜಿಲ್ಲೆಯಲ್ಲಿ ರಸಗೊಬ್ಬರ ಸರಬರಾಜುದಾರ ಸಂಸ್ಥೆ ಹಾಗೂ ಡೀಲರ್‌ಗಳು ಕೃಷಿ ಇಲಾಖೆಯಿಂದ ಹೊರಡಿಸಲಾಗಿರುವ ಸೂಚನೆಗಳನ್ನು ಪಾಲಿಸಬೇಕು ಎಂದು ಸೂಚಿಸಿದರು.
ರಸಗೊಬ್ಬರ ಸರಬರಾಜುದಾರ ಕಂಪನಿಗಳು ಡೀಲರ್‌ಗಳಿಗೆ ರಸಗೊಬ್ಬರ ವಿತರಣೆ ಮಾಡುವ ಮೊದಲೇ ರೇಕ್ ವಿವರವನ್ನು ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಯೂರಿಯಾ ಮತ್ತು ಡಿಎಪಿ ದಾಸ್ತಾನು ಜಿಲ್ಲೆಗೆ ಬಂದ ತಕ್ಷಣ ಕೆಎಸ್‌ಎಸ್‌ಸಿ ಮತ್ತು ಕೆಎಸ್‌ಸಿಎಂಎಫ್‌ನಲ್ಲಿ ಶೇ.40ರಿಂದ 50ರಷ್ಟು ಪ್ರಮಾಣವನ್ನು ಬಫರ್ ಸ್ಟಾಕ್ ರೂಪದಲ್ಲಿ ಸಂಗ್ರಹಿಸಬೇಕು ಎಂದರು.
ರೈತರಿಗೆ ಮಾರಾಟ ಮಾಡಬೇಕಿರುವ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡುವುದು, ಕೈಗಾರಿಕೆಗಳಿಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಡೀಲರ್ ಅಥವಾ ಸರಬರಾಜು ಕಂಪನಿಗಳ ಪರವಾನಗಿ ರದ್ದುಪಡಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯೂರಿಯಾ ರಸಗೊಬ್ಬರವನ್ನು ಕಡ್ಡಾಯವಾಗಿ ಯುರಿಯಾ ವಿತರಣಾ ಆ್ಯಪ್‌ನಲ್ಲಿ ಹಾಗೂ ಪಿಒಎಸ್ ತಂತ್ರಾಂಶದಲ್ಲಿ ನಮೂದಿಸಿ ನಂತರ ಮಾರಾಟ ಮಾಡಬೇಕು. ರೈತರ ಎಫ್‌ಐಡಿಯಲ್ಲಿ ಜಮೀನಿನ ವಿವರ ಲಭ್ಯವಿದ್ದು, ವಿಸ್ತೀರ್ಣ ಹಾಗೂ ಬೆಳೆಗಳಿಗೆ ಇಲಾಖೆ ನಿಗದಿ ಪಡಿಸುವ ಯುರಿಯಾ ಬಳಕೆಯ ಪ್ರಮಾಣವನ್ನು ಮಾತ್ರ ಆಯಾ ರೈತರಿಗೆ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಹೆಚ್ಚುವರಿಯಾಗಿ ನೀಡುವಂತಿಲ್ಲ ಎಂದರು.
ಯುರಿಯಾ ಸೇರಿದಂತೆ ರಾಸಾಯನಿಕ ರಸಗೊಬ್ಬರಗಳ ಬಳಕೆ ಕುರಿತಂತೆ ಇಲಾಖೆ ಪ್ರಕಟಣೆ ಹೊರಡಿಸಲಿದೆ. ಇಲಾಖೆಯ ಪ್ರಕಟಣೆಯನ್ನು ಅನಾವರಣಗೊಳಿಸಿ, ರೈತರಿಗೆ ಅದರನ್ವಯ ರಸಗೊಬ್ಬರ ವಿತರಣೆ ಮಾಡಿ ಇದರಿಂದ ಅತಿಯಾದ ರಾಸಾಯನಿಕ ರಸಗೊಬ್ಬರ ಬಳಕೆಯನ್ನು ಸಹ ತಡೆಯಬಹುದು ಎಂದರು.
ತಾಲೂಕು ಕೃಷಿ ಅಧಿಕಾರಿಗಳು ಪ್ರತಿದಿನ ಪರಿಶೀಲನೆ ನಡೆಸಿ ಮಾರಾಟಗಾರರು ಯುರಿಯಾ ವಿತರಣಾ ಆ್ಯಪ್ ಹಾಗೂ ಪಿಒಎಸ್ ತಂತ್ರಾಂಶದಲ್ಲಿ ಯುರಿಯಾ ಮಾರಾಟದ ಬಗ್ಗೆ ನಿಖರ ಮಾಹಿತಿ ಭರ್ತಿ ಮಾಡುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
ಯುರಿಯಾ ಮಾರಾಟದಲ್ಲಿ ಯಾವುದೇ ರೀತಿಯ ಲೋಪ ಕಂಡುಬಂದಲ್ಲಿ ಆಯಾ ತಾಲೂಕಿನ ಕೃಷಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ ಮಾತನಾಡಿ, ಮಾರಾಟಗಾರರು ತಮ್ಮಲ್ಲಿರುವ ರಸಗೊಬ್ಬರದ ದಾಸ್ತಾನು, ದರದ ವಿವರನ್ನು ಅಂಗಡಿಯ ಮುಂಭಾಗ ಅನಾವರಣ ಮಾಡಬೇಕು, ಕಡ್ಡಾಯವಾಗಿ ಎಂ-ನಮೂನೆಯಲ್ಲಿ ಬಿಲ್ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಅಗತ್ಯ ಬಿತ್ತನೆ ಬೀಜದ ದಾಸ್ತಾನು ಲಭ್ಯವಿದ್ದು, ಗುಣಮಟ್ಟದ ಪರೀಕ್ಷೆಗೆ ಕೃಷಿ ವಿಶ್ವವಿದ್ಯಾಲಯಕ್ಕೆ ರವಾನಿಸಲಾಗಿದ್ದು, ವರದಿ ಬಂದ ತಕ್ಷಣ ಮಾರಾಟ ಪ್ರಾರಂಭಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್, ಜಂಟಿ ಕೃಷಿ ನಿರ್ದೇಶಕ (ಜಾಗೃತ ಕೋಶ) ರಾಮಕೃಷ್ಣ, ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ವೆಂಕಟೇಶ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.