ಮೈಸೂರಿನ ಸಿದ್ದಾರ್ಥನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ದಾರ್ಥನಗರ ಸಂಚಾರ ಪೊಲೀಸ್‌ಠಾಣೆ ಕಟ್ಟಡವನ್ನು ಶನಿವಾರ ಗೃಹ ಸಚಿವ ಜಿ.ಪರಮೇಶ್ವರ ಉದ್ಘಾಟಿಸಿದರು. ಶಾಸಕರಾದ ತನ್ವೀರ್‌ಸೇಠ್, ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಇತರರಿದ್ದರು. 
ಮೈಸೂರು

ರಾಜ್ಯದಲ್ಲಿ ಡ್ರಗ್ಸ್ ವಿರುದ್ಧ ಕಠಿಣ ಕ್ರಮ

ಮೈಸೂರು: ರಾಜ್ಯದಲ್ಲಿ ಡ್ರಗ್ಸ್ ವಿಚಾರವಾಗಿ ಬಹಳ ಕಠಿಣ ಕ್ರಮ ಕೈಗೊಂಡಿದ್ದು, ರಾಜ್ಯವನ್ನು ಉಡ್ತಾ ಪಂಜಾಬ್ ಆಗಲು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಯ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ನಿತ್ಯ ನೂರಾರು ಡ್ರಗ್ಸ್ ಪ್ರಕರಣಗಳನ್ನು ದಾಖಲಿಸುತ್ತಿದ್ದೇವೆ. ಕೈಗೊಂಡಿರುವ ಕ್ರಮಗಳ ಬಗ್ಗೆ ನಾವು ಎಲ್ಲೂ ಪ್ರಚಾರ ಮಾಡಿಲ್ಲ. ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಅನೇಕ ಡ್ರಗ್ಸ್ ಘಟಕಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ, ಮೈಸೂರಿನಲ್ಲಿ ಯಾವುದೇ ಡ್ರಗ್ಸ್ ಪತ್ತೆ ಆಗಿಲ್ಲ. ಎನ್‌ಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ಡ್ರಗ್ಸ್ ಸಿಕ್ಕಿಲ್ಲ ಎಂದಿದೆ. ಆದರೆ ಪತ್ರಿಕಾ ಹೇಳಿಕೆಯಲ್ಲಿ 10 ಕೋಟಿ ಡ್ರಗ್ಸ್ ಸಿಕ್ಕಿದೆ ಎಂದು ಹೇಳಿದೆ. ಯಾಕೆ ಈ ರೀತಿ ದ್ವಂದ್ವ ಹೇಳಿಕೆ ನೀಡಿದೆಯೋ ಗೊತ್ತಿಲ್ಲ. ಮೈಸೂರಿನಲ್ಲಿ ದಾಳಿ ಮಾಡಿದ್ದಾಗ ಫಿನಾಯಿಲ್ ಸಂಬಂಧಿಸಿ ಕೆಮಿಕಲ್ಸ್ ಮಾತ್ರ ಸಿಕ್ಕಿದೆ ಎಂದರು.
ರಾಜ್ಯದಲ್ಲಿ ಪೊಲೀಸರ ಕಣ್ತಪ್ಪಿಸಿ ಯಾವುದೇ ಕೆಮಿಕಲ್ ಫ್ಯಾಕ್ಟರಿಗಳನ್ನು ನಡೆಸುತ್ತಿಲ್ಲ. 15 ದಿನಕ್ಕೊಮ್ಮೆ ನಮ್ಮ ಪೊಲೀಸರು ಎಲ್ಲ ಕೆಮಿಕಲ್ ಫ್ಯಾಕ್ಟರಿಗಳಿಗೆ ಭೇಟಿ ನೀಡಿ ಚೆಕ್ ಮಾಡುವಂತೆ ಸೂಚಿಸಲಾಗಿದೆ. ಅಲ್ಲಿ ಬಳಸುವ ರಾ ಮೆಟಿರಿಯಲ್‌ಗಳ ಬಗ್ಗೆಯೂ ಮಾಹಿತಿ ಕಲೆ ಹಾಕಬೇಕಿದೆ. ಅಪ್ಪಿತಪ್ಪಿ ಎಲ್ಲಾದರೂ ಡ್ರಗ್ಸ್ ಸಿಕ್ಕರೆ ಅದಕ್ಕೆ ಆಯಾ ವ್ಯಾಪ್ತಿಯ ಪೊಲೀಸರು ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.
ಈ ಹಿಂದೆ ಪಂಜಾಬ್‌ನ ಪ್ರತಿ ಮನೆಗಳಲ್ಲಿ ಡ್ರಗ್ಸ್ ಸಿಗುತ್ತಿತ್ತು ಎಂದು ಹೇಳುತ್ತಾರೆ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಉಡ್ತಾ ಪಂಜಾಬ್ ಆಗಲು ಬಿಡಲ್ಲ ಎಂದರು.
ಅನಧಿಕೃತವಾಗಿ ತಳವೂರಿರುವ ಬಾಂಗ್ಲಾ ದೇಶದ ಜನರ ಬಗ್ಗೆ ಬಹಳಷ್ಟು ಜನ ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಹಾಗಾಗಿ, ಪ್ರತಿಯೊಂದು ಮನೆ, ಕಾಫಿ ತೋಟ, ಕಟ್ಟಡ ನಿರ್ಮಾಣ ಜಾಗ ಸೇರಿ ಎಲ್ಲೆಡೆ ಎಲ್ಲ ಕಾರ್ಮಿಕರನ್ನು ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಅನಧಿಕೃತವಾಗಿರುವ ಬಾಂಗ್ಲಾ ದೇಶದ ಪ್ರಜೆ ಸೇರಿ ಯಾವುದೇ ದೇಶದ ಅನಧಿಕೃತ ಪ್ರಜೆಗಳನ್ನು ಹಿಡಿಯುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಇದು ನಮ್ಮಲ್ಲಿ ಮಾತ್ರ ಹೊಸದಲ್ಲ. ಅನಧಿಕೃತ ಪ್ರಜೆಗಳ ವಾಸದ ಸಮಸ್ಯೆ ಅಮೆರಿಕದಲ್ಲೂ ಇದೆ. ಇದು ಇಂದು ನಮಗೆ ದೊಡ್ಡ ಸವಾಲಾಗಿದೆ ಎಂದರು.
ದೇಶದಲ್ಲಿಯೇ ಮೊದಲು ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮವನ್ನು ಜಾರಿ ಮಾಡಿದ್ದೇವೆ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮ ಮಾಡಿದ್ದೆವು. ಆಗ 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಅದು ನನ್ನ ತಲೆಯಲ್ಲಿದ್ದ ಕಾರಣ ಈಗ ‘ಮನೆ ಮನೆ ಪೊಲೀಸ್’ ಕಾರ್ಯಕ್ರಮ ಜಾರಿ ಮಾಡಲಾಯಿತು. ಈ ಕಾರ್ಯಕ್ರಮದಿಂದ ಇಡೀ ಬಡಾವಣೆ ಮಾಹಿತಿ, ಅಲ್ಲಿ ವಾಸಿಸುತ್ತಿರುವವರ ಮಾಹಿತಿ ಸಿಕ್ಕಿದೆ. ಎಲ್ಲಿ ಏನೇ ನಡೆದರೂ ಮಾಹಿತಿ ದೊರೆಯುತ್ತಿದೆ. ಹಾಗಾಗಿ, ಮನೆ ಮನೆಗೆ ಹೋಗಿ ಸಾರ್ವಜನಿಕರೊಂದಿಗೆ ಮಾತನಾಡಿ ಅವರ ಕಷ್ಟ-ಸುಖ ಕೇಳಬೇಕು ಎಂದು ಪೊಲೀಸರಿಗೆ ತಿಳಿಸಿದ್ದೇನೆ ಎಂದರು.