ಎಚ್.ಡಿ.ಕೋಟೆ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರ ಸ್ಥಳಕ್ಕೆ ಆಹಾರ ಸುರಕ್ಷತಾಧಿಕಾರಿ ಡಾ.ಟಿ. ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಚ್.ಡಿ.ಕೋಟೆ: ಪಟ್ಟಣದಲ್ಲಿ ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಸ್ಥಳಕ್ಕೆ ಸೋಮವಾರ ಆಹಾರ ಸುರಕ್ಷತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಹಾರ ಸುರಕ್ಷತಾಧಿಕಾರಿ ಡಾ.ಟಿ ರವಿಕುಮಾರ್ ಮಾತನಾಡಿ, ಬೀದಿಬದಿ ಹಣ್ಣಿನ ಅಂಗಡಿಯಲ್ಲಿ ಮಾರಾಟ ಮಾಡುವವರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಮತ್ತು ವ್ಯಾಪಾರ ಮಾಡುವ ಸ್ಥಳಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಜನರಿಗೆ ಶುದ್ಧವಾದ ಹಣ್ಣು ಗಳನ್ನು ನೀಡಬೇಕು. ಹಣ್ಣು ಗಳನ್ನು ಕಟ್ ಮಾಡಿದ ನಂತರ ಗ್ಲಾಸ್ ಬಾಕ್ಸ್‌ನಲ್ಲಿ ಇಡಬೇಕು. ಕೊಳೆತ ಹಣ್ಣುಗಳನ್ನು ಒಂದು ಕಡೆ ಶೇಖರಣೆ ಮಾಡಿ ಪುರಸಭೆಯಿಂದ ಬರುವ ವಾಹನಕ್ಕೆ ನೀಡಬೇಕು. ಯಾವುದೇ ಕಾರಣಕ್ಕೂ ಪ್ರಾಣಿ ಮತ್ತು ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ಮಾರಾಟ ಮಾಡಬಾರದು. ಜತೆಗೆರಸ್ತೆಯಲ್ಲಿ ಬಿಸಾಡಬಾರದು ಎಂದು ಸೂಚಿಸಿದರು.
ಬೀದಿಬದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 2011 ರನ್ವಯ ಆಹಾರದ ತಯಾರಿಕೆ ಮತ್ತು ವಿತರಣೆಯಲ್ಲಿನ ಶುಚಿತ್ವ ಹಾಗೂ ಗುಣಮಟ್ಟ ಕುರಿತು ಅರಿವು ಮೂಡಿಸುವುದು ಹಾಗೂ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವಿರಾಜ್, ಅರ್ಚನಾ, ಪ್ರತಾಪ್ ಹಾಜರಿದ್ದರು.