ಬಹುರೂಪಿ ಅಂಗವಾಗಿ ಆಯೋಜಿಸಿರುವ ಬೀದಿ ನಾಟಕ ಪ್ರದರ್ಶನಕ್ಕೆ ಶನಿವಾರ ಗಣ್ಯರು ಚಾಲನೆ ನೀಡಿದರು. ಮೈಮ್ ರಮೇಶ್, ಮೈತ್ರಿ, ಸತೀಶ್ ತಿಪಟೂರು, ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು. 
ಮೈಸೂರು

ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ

ಅವಿನಾಶ್ ಜೈನಹಳ್ಳಿ
ಬಹುರೂಪಿ ನಾಟಕೋತ್ಸವ ಅಂಗವಾಗಿ ಆಯೋಜಿಸಿರುವ ಬೀದಿ ನಾಟಕ ಪ್ರದರ್ಶನಕ್ಕೆ ಶನಿವಾರ ನಗರದ ಚಿಕ್ಕ ಗಡಿಯಾರದ ಬಳಿ ಹಿರಿಯ ರಂಗ ನಿರ್ದೇಶಕ ಹಾಗೂ ಕಲಾವಿದ ಮೈಮ್ ರಮೇಶ್ ಚಾಲನೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ, ಸಂವಿಧಾನದ ಮೌಲ್ಯಗಳು ಹಾಗೂ ಮಾನವೀಯತೆ ಸಂದೇಶಗಳನ್ನು ಜನರಿಗೆ ತಲುಪಿಸಲು ಬೀದಿ ನಾಟಕ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದರು.
ಇಂತಹ ಬೀದಿ ನಾಟಕಗಳನ್ನು ಇನ್ನೂ ಹೆಚ್ಚು ಆಯೋಜಿಸಬೇಕು. ವಿಶೇಷವಾಗಿ ಶಾಲಾ, ಕಾಲೇಜುಗಳಲ್ಲಿ ಈ ರೀತಿಯ ನಾಟಕಗಳನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.
ನಗರಪಾಲಿಕೆ ಪರಿಸರ ಇಂಜಿನಿಯರ್ ಮೈತ್ರಿ ಮಾತನಾಡಿ, ಇಂದಿನ ಯುವಕರು ಅಗತ್ಯಕ್ಕಿಂತ ಹೆಚ್ಚು ಸಾಮಾಜಿಕ ಮಾಧ್ಯಮವನ್ನು ಉಪಯೋಗ ಮಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಯುವಜನತೆ ಇಂತಹ ಬೀದಿ ನಾಟಕಗಳನ್ನು ವೀಕ್ಷಿಸಿ, ಅದರ ಹಿನ್ನೆಲೆ ಮತ್ತು ಸಂದೇಶಗಳನ್ನು ಅರ್ಥ ಮಾಡಿಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಹುರೂಪಿ ಬಾಬಾ ಸಾಹೇಬ್ ಬೀದಿ ನಾಟಕ ಪ್ರದರ್ಶನದಲ್ಲಿ ವಿವಿಧ ಕಲಾತಂಡಗಳು ನಾಟಕ ಪ್ರದರ್ಶಿಸಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದುಕೊಂಡರು. ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್ ಇತರರು ಇದ್ದರು.