ಹುಣಸೂರು ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ದಿವ್ಯಾಂಗರ ಭವನವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿ ಅಂಗವಿಕಲರಿಗೆ ಸವಲತ್ತು ವಿತರಿಸಿದರು. ಇಒ ಕೆ.ಹೊಂಗಯ್ಯ, ಎಸ್.ಶರವಣ, ರಾಘು ಕಲ್ಕುಣಿಕೆ, ರಾಘವೇಂದ್ರ, ದೇವರಾಜ್ ಇತರರಿದ್ದರು.
- ಶಾಸಕ ಜಿ.ಡಿ.ಹರೀಶ್‌ಗೌಡ ಭರವಸೆ
- ದಿವ್ಯಾಂಗ ಭವನ ಉದ್ಘಾಟನೆ
ಹುಣಸೂರು: ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದಿವ್ಯಾಂಗ ಭವನವನ್ನು ಗುರುವಾರ ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ವರ್ಷದ ಹಿಂದೆ ತಾಲೂಕಿನ ಹಿರಿಯ ನಾಗರಿಕರು ಮತ್ತು ಅಂಗವಿಕಲರ ಸಬಲೀಕರಣ ಇಲಾಖೆ ವತಿಯಿಂದ ಭವನವೊಂದಕ್ಕೆ ಬೇಡಿಕೆ ಇಟ್ಟಿತ್ತು. ಅದರಂತೆ 15ನೇ ಹಣಕಾಸು ಯೋಜನೆಯಡಿ 15 ಲಕ್ಷ ರೂ.ಗಳ ವೆಚ್ಚದಡಿ ಭವನ ನಿರ್ಮಾಣಕ್ಕೆ ತೀರ್ಮಾನಿಸಿ ಭೂಮಿ ಪೂಜೆ ನಡೆಸಿದ್ದೆ. ಇದೀಗ ಭವನದ ಉದ್ಘಾಟನೆ ಮಾಡುವ ಮೂಲಕ ದಿವ್ಯಾಂಗರ ಬಹುವರ್ಷಗಳ ಬೇಡಿಕೆ ಈಡೇರಿಸಿದ್ದೇನೆ. ಅಂಗವಿಕಲರ ಸಹಕಾರ ಸಂಘದ ಸ್ಥಾಪನೆಗೂ ಕ್ರಮವಹಿಸಲಾಗಿದ್ದು, ಇದರಲ್ಲಿ ಸಮಸ್ಯೆಗಳಿದ್ದಲ್ಲಿ ತಮ್ಮನ್ನು ಭೇಟಿ ಮಾಡಿ ಚರ್ಚಿಸಿರಿ. ಅಗತ್ಯ ಎಲ್ಲ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದರು.
ಅಂಗವಿಕಲರಿಗೆ ಕಳೆದ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಅನುದಾನದಡಿ ಇದೀಗ 10 ತ್ರಿಚಕ್ರ ವಾಹನ, 15 ಜನರಿಗೆ ವಾಕ್ ಮತ್ತು ಶ್ರವಣ ಸಲಕರಣೆಗಳು, 10 ವೀಲ್ ಚೇರ್, 8 ವಾಕರ್‌ಗಳನ್ನು ವಿತರಿಸಲಾಗುತ್ತಿದೆ. ಅಂಗವಿಕಲರಿಗಾಗಿ ಸರ್ಕಾರ ಮೀಸಲಿಟ್ಟಿರುವ ಶೇ.5ರ ಅನುಪಾತದ ಸೌಲಭ್ಯವನ್ನು ಪ್ರಥಮ ಆದ್ಯತೆಯೊಂದಿಗೆ ಸವಲತ್ತುಗಳನ್ನು ತಲುಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಹಿರಿಯ ನಾಗರಿಕರು ಮತ್ತು ಅಂಗವಿಕಲ ಸಬಲೀಕರಣ ಇಲಾಖೆ ತಾಲೂಕು ಸಂಯೋಜಕ ದೇವರಾಜ್ ಮಾತನಾಡಿ, ಕಳೆದ ವರ್ಷ ಶಾಸಕ ಹರೀಶ್‌ಗೌಡರಿಗೆ ಅಂಗವಿಕಲರು ತಮ್ಮ ಅಳಲನ್ನು ತೋಡಿಕೊಂಡು ಭವನ ನಿರ್ಮಿಸಲು ಕೋರಿದ್ದರು. ಶಾಸಕರು ಅಂದು ನೀಡಿದ ಮಾತಿನಂತೆ ಇದೀಗ ಭವನ ನಿರ್ಮಿಸಿಕೊಟ್ಟಿದ್ದಾರೆ. ಇಡೀ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ದಿವ್ಯಾಂಗರ ಭವನ ಹುಣಸೂರಿನಲ್ಲಿ ಸ್ಥಾಪಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಮತ್ತು ಅಂಗವಿಕಲರ ಜಿಲ್ಲಾ ಕಲ್ಯಾಣಾಧಿಕಾರಿ ರಾಘವೇಂದ್ರ, ಇಒ ಕೆ.ಹೊಂಗಯ್ಯ, ಜೆಡಿಎಸ್ ನಗರಾಧ್ಯಕ್ಷ ಎಸ್.ಶರವಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಘು ಕಲ್ಕುಣಿಕೆ, ಹೈರಿಗೆ ಸುರೇಶ್ ಇತರರು ಇದ್ದರು.