ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಅರಿಶಿಣ ಪದಾರ್ಥಗಳ ಖರೀದಿದಾರರು, ಮಾರಾಟಗಾರರ ಸಮಾವೇಶದಲ್ಲಿ ಗಣ್ಯರು ಅರಿಶಿಣ ಸಂಬಂಧಿಸಿ ಕಿರುಹೊತ್ತಗೆ ಬಿಡುಗಡೆ ಮಾಡಿದರು. ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್, ಬಿ.ಆರ್.ಗಿರೀಶ್, ಪಲ್ಲೆ ಗಂಗಾರೆಡ್ಡಿ, ಚೇತನ್‌ಕುಮಾರ್, ಈರಪ್ಪ ಯಡವಣ್ಣವರ್ ಇತರರಿದ್ದರು.
- ಕರ್ನಾಟಕ ರಾಜ್ಯ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಗಿರೀಶ್ ಹೇಳಿಕೆ
ಮೈಸೂರು: ಅರಿಶಿಣ ಬೆಳೆ ಮೌಲ್ಯವರ್ಧನೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಗಿರೀಶ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಅರಿಶಿಣ ಮಂಡಳಿ, ಭಾರತೀಯ ಸಾಂಬಾರ ಮಂಡಳಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಅರಿಶಿಣ ಪದಾರ್ಥಗಳ ಖರೀದಿದಾರರು, ಮಾರಾಟಗಾರರ ಸಮಾವೇಶದಲ್ಲಿ ಮಾತನಾಡಿದರು.
ದೇಶದಲ್ಲಿ ಪ್ರಪಂಚದ ಶೇ.80ರಷ್ಟು ಅರಿಶಿಣ ಬೆಳೆಯಲಾಗುತ್ತಿದೆ. ಪ್ರತಿ ವರ್ಷ ಸುಮಾರು 2,800 ಕೋಟಿ ರೂ.ಗಳಷ್ಟು ಅರಿಶಿಣ ಮತ್ತು ಅದರ ಉತ್ಪನ್ನಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಆದರೆ, ವರ್ಷದಿಂದ ವರ್ಷಕ್ಕೆ ವಿಸ್ತೀರ್ಣ ಕಡಿಮೆಯಾಗುತ್ತಿದೆ. ರೋಗಬಾಧೆ, ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಳ ಮೇಲೆ ನಿಂತಿರುವ ಆದಾಯ, ಕಡಿಮೆ ಉತ್ಪಾದಕತೆಯಿಂದ ಉತ್ಪಾದನೆ ಕಡಿಮೆಯಾಗುತ್ತಿದೆ. ಹೀಗಾಗಿ ಇವುಗಳ ಸುಧಾರಣೆಗೆ ಕ್ರಮ ವಹಿಸಲಾಗದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಅರಿಶಿಣ ಬೆಳೆಯುವ ರೈತರನ್ನು ರಕ್ಷಿಸಬೇಕಿದೆ. ಅವರಿಗೆ ಆರ್ಥಿಕವಾಗಿ ಸದೃಢ ಮಾಡಬೇಕಿದೆ. ರೈತರು ಹಿಂದಿನ ವರ್ಷದ ಹೆಚ್ಚಿನ ಬೆಲೆ ನೋಡಿ ಅರಿಶಿಣ ಬೆಳೆಯುತ್ತಾರೆ. ಆದರೆ ಬೆಳೆ ಕಟಾವಿಗೆ ಬರುವ ಹೊತ್ತಿಗೆ ಬೆಲೆ ಗಣನೀಯವಾಗಿ ಕುಸಿದಿರುತ್ತದೆ. ಅಲ್ಲದೆ ತಮಿಳುನಾಡಿನ ಈರೋಡ್ ಮಾರುಕಟ್ಟೆಯ ಮೇಲಿನ ಅವಲಂಬನೆ ಹೆಚ್ಚಾಗಿದೆ. ಅಲ್ಲಿನ ಹರಾಜು ಪ್ರಕ್ರಿಯೆ ಮತ್ತು ಬೆಲೆ ನಿಗದಿ ಪದ್ಧತಿ ನಮ್ಮ ರೈತರಿಗೆ ಪೂರಕವಾಗಿಲ್ಲ. ಹೀಗಾಗಿ ನಮ್ಮ ಭಾಗದಲ್ಲೂ ಪ್ರಾದೇಶಿಕ ಕೇಂದ್ರದ ಅಗತ್ಯ ಹೆಚ್ಚಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಮಾತನಾಡಿದರು. ರಾಷ್ಟ್ರೀಯ ಅರಿಶಿಣ ಮಂಡಳಿ ಅಧ್ಯಕ್ಷ ಪಲ್ಲೆ ಗಂಗಾರೆಡ್ಡಿ, ಸದಸ್ಯ ಚೇತನ್‌ಕುಮಾರ್, ಈರಪ್ಪ ಯಡವಣ್ಣವರ್, ಡಾ.ಡಿ.ವಿಷ್ಣುವರ್ಧನ್, ಪ್ರಧಾನ ವ್ಯವಸ್ಥಾಪಕ ಡಾ.ರಾಮಚಂದ್ರ ಕೆ.ಮಡಿವಾಳ, ಲಕ್ಷ್ಮೀಕಾಂತ ಬೊಮ್ಮಣ್ಣನವರ, ಉಪ ವ್ಯವಸ್ಥಾಪಕ ಎಂ.ವೈ.ಹೊನ್ನುರ, ಉಪ ನಿರ್ದೇಶಕ ಶಿವಪ್ರಸಾದ್, ಹಿರಿಯ ಸಹಾಯಕ ನಿರ್ದೇಶಕ ಚೇತನ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎನ್.ನಾಗರಾಜು, ಚಾಮರಾಜನಗರ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಪ್ರಸಾದ್ ಇದ್ದರು.