ಹೈ ಕೋರ್ಟ್ 
ಮೈಸೂರು

ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆಯಾಜ್ಞೆ

ಪ್ರಮುಖ ಮುಖ್ಯಾಂಶಗಳು

  • ಹೈ ಕೋರ್ಟ್ ಮೆಟ್ಟಿಲೇರಿದ್ದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
  • ದೇಶೀಯ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಕೇಂದ್ರ ಸರ್ಕಾದ ಮಹತ್ವದ ಯೋಜನೆ
  • ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ
ಮೈಸೂರು: ರಾಜ್ಯದ ಪ್ರತಿಯೊಂದು ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ನಿರ್ಮಾಣವಾಗುತ್ತಿದ್ದ ಏಕತಾ ಮಾಲ್(ಯೂನಿಟಿ ಮಾಲ್) ಯೋಜನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ದೇಶೀಯ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಕೇಂದ್ರ ಸರ್ಕಾದ ಮಹತ್ವದ ಯೋಜನೆಯಡಿ ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಬಳಿ ಯೂನಿಟಿ ಮಾಲ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ಜುಲೈ ತಿಂಗಳಲ್ಲಿ ಕಾಮಗಾರಿಯೂ ಪ್ರಾರಂಭವಾಗಿತ್ತು. ಇತ್ತೀಚೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಹ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜತೆಗೆ ಮಾಲ್ ನಿರ್ಮಾಣ ಮೈಸೂರು ಪ್ರವಾಸೋದ್ಯಮಕ್ಕೆ ಪೂರಕವಾಗಿರಲಿದೆ ಎಂದು ಹೇಳಿದ್ದರು.
ಇದೀಗ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕೋರ್ಟ್ ಮೆಟ್ಟಿಲೇರಿದ್ದು, ಸದರಿ ಸರ್ವೆ ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ಮಾಡದೆ ಯಥಾಸ್ಥಿತಿ ಮುಂದುವರೆಸಬೇಕೆಂದು ಕೋರಿದ್ದರು. ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ ಎರಡು ವಾರದೊಳಗೆ ಲಿಖಿತ ಉತ್ತರ ನೀಡುವಂತೆ ಸೂಚನೆ ನೀಡಿದೆ.

ಏನಿದು ಪ್ರಕರಣ

ಕೇಂದ್ರ ಸರಕಾರವು ದೇಶಿಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು, ರಾಷ್ಟ್ರೀಯ ಏಕೀಕರಣದೊಂದಿಗೆ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಉತ್ತೇಜನ ನೀಡಲು ಅರಮನೆ ನಗರಿಯಲ್ಲಿ ಯೂನಿಟಿ ಮಾಲ್ ನಿರ್ಮಾಣ ಕಾರ್ಯ ಆರಂಭಿಸಿತ್ತು.
ಇದರೊಂದಿಗೆ ಗುಣಮಟ್ಟದ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ವೃದ್ಧಿಸುವುದರೊಂದಿಗೆ ಗ್ರಾಮೀಣ ಕುಶಲ ಕರ್ಮಿಗಳಿಗೆ ನೆರವು ಮತ್ತು ಉದ್ಯೊಗ ಸೃಷ್ಟಿಯೇ ಯೂನಿಟಿ ಮಾಲ್‌ನ ಮೂಲ ಉದ್ದೇಶವಾಗಿದೆ.
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಈ ಕಾಮಗಾರಿಯ ನಿರ್ಮಾಣದ ಹೊಣೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ವಹಿಸಲಾಗಿತ್ತು. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವು ಯೂನಿಟಿ ಮಾಲ್ ನಿರ್ಮಾಣಕ್ಕೆ ಬೇಕಾದ ಆರು ಎಕರೆ ಭೂಮಿಯನ್ನು ಹಸ್ತಾಂತರ ಮಾಡಿತ್ತು. ಇದರಿಂದಾಗಿ ಈ ಜಾಗದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಯನ್ನು ಶುರು ಮಾಡಲಾಗಿತ್ತು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಸರ್ವೆ ನಂ.1ರಲ್ಲಿ ಬರುವ ಭೂಮಿಯು ತಮ್ಮದೆಂದು ವಾದ ಮಾಡುತ್ತಿರುವ ಪರಿಣಾಮವಾಗಿ, ಏಕತಾ ಮಾಲ್ ನಿರ್ಮಾಣ ಮಾಡದಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಕುರುಬಾರಹಳ್ಳಿ ಸರ್ವೆ ನಂ. ಭೂಮಿ, ಗರಿಕೆಮಾಳ ಸರ್ವೆ ನಂ.1ರ ಭೂಮಿಯು ರಾಜಮನೆತನಕ್ಕೆ ಸೇರಿದೆ ಎಂದು ಹೇಳಿರುವ ಜತೆಗೆ, ಕೆಲವು ಸರ್ವೆ ನಂ. ಭೂಮಿಯು ರಾಜಮನೆತನಕ್ಕೆ ಸೇರಿದ್ದೆಂದು ತೀರ್ಪು ಬಂದಿತ್ತು. ಇದರ ಆಧಾರದ ಮೇಲೆ ಪ್ರಮೋದಾದೇವಿ ಒಡೆಯರ್ ಅವರು ಹೈಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ಕೋರಿದ್ದರು. ಅರ್ಜಿದಾರರ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ಕಾಮಗಾರಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದಾರೆ.
ಒಂದು ರಾಜ್ಯ ಒಂದು ಉತ್ಪನ್ನ, ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆಯಡಿ 193 ಕೋಟಿ ರೂ.ವೆಚ್ಚದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ತಯಾರಾಗುವ ದೇಸಿ ಉತ್ಪನ್ನಗಳನ್ನು ಒಂದೇ ಸೂರಿನಡಿ ಮಾರಾಟ ಮಾಡುವ ಅವಕಾಶ ಕಲ್ಪಿಸಲು ಈ ಮಾಲ್ ನಿರ್ಮಿಸಲು ನಿರ್ಧರಿಸಲಾಗಿತ್ತು.
"

ನಗರದ ವಸ್ತು ಪ್ರದರ್ಶನ ಆವರಣದಲ್ಲಿ ನಿರ್ಮಾಣವಾಗುತ್ತಿದ್ದ ಏಕತಾ ಮಾಲ್(ಯೂನಿಟಿ ಮಾಲ್) ಂಬಂಧ ನ್ಯಾಯಾಲಯದ ಯಥಾಸ್ಥಿತಿ ಆದೇಶವನ್ನು ಪಾಲಿಸಲಾಗುವುದು. ಅಗತ್ಯ ದಾಖಲೆಗಳನ್ನು ಒದಗಿಸಿ ತಡೆಯಾಜ್ಞೆ ತೆರವುಗೊಳಿಸಲು ಕ್ರಮವಹಿಸಲಾಗುವುದು. ಸರಕಾರದ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳುತ್ತೇವೆ.